ಬಿಜೆಪಿ ಯುವಮೋರ್ಚಾ ಕಾರ್ಯಕರ್ತ, ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರ ಬೆಳ್ಳಾರೆ ತಲುಪಿದೆ. ಈ ಸಂದರ್ಭ ಹಿಂದೂ ಕಾರ್ಯಕರ್ತರು ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಂತಿಮ ದರ್ಶನಕ್ಕೆ ಆಗಮಿಸಿದ ಬಿಜೆಪಿ ನಾಯಕರು ಹಾಗೂ ಆರ್ ಎಸ್ ಎಸ್ ಮುಖಂಡರ ಕಾರನ್ನೂ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಗೆ ಧಿಕ್ಕಾರ ಕೂಗಿದರು. ನಾಯಕರ ಕಾರನ್ನು ತಡೆದು ಗೋಬ್ಯಾಕ್ ಎಂದು ಕಾರನ್ನೇ ತಳ್ಳಿದರು.

ಬೆಳ್ಳಾರೆ | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ | ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರ ಆಕ್ರೋಶ | ಕಾರನ್ನು ಅಡ್ಡಗಟ್ಟಿದ ಕಾರ್ಯಕರ್ತರು | #PraveenNettaru #ಪ್ರವೀಣನೆಟ್ಟಾರು pic.twitter.com/b1kmCI4wbb
— theruralmirror (@ruralmirror) July 27, 2022
ನಿನ್ನೆ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಪಾರ್ಥಿವ ಶರೀರ ಬೆಳ್ಳಾರೆ ತಲುಪುತ್ತಿದ್ದಂತೆ ಹಿಂದೂ ಪರ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತು. ನನ್ನದೇ ಸರ್ಕಾರ ಇದ್ದರೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದರೂ ನಾಯಕರು ಸುಮ್ಮನೆ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಅಂಗಾರ, ಸುನಿಲ್ ಕುಮಾರ್ ಕಟೀಲು, ಸಂಜೀವ ಮಠಂದೂರು, ಹರೀಶ್ ಪೂಂಜಾ ಮೊದಲಾದವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರೊಬ್ಬರು ಹರೀಶ್ ಪೂಂಜಾ ಅವರಲ್ಲಿ ದಕ ಜಿಲ್ಲೆಯಲ್ಲಿ ಸಮರ್ಥ ನಾಯಕರಲ್ಲ ನೀವೇ ಇದಕ್ಕೆ ಮುಂದಾಳುತ್ವ ವಹಿಸಿ ಎಂದೂ ಹೇಳಿದರು.
ಇದೇ ವೇಳೆ ಪ್ರವೀಣ್ ನೆಟ್ಟಾರು ಅಂತಿಮ ದರ್ಶನಕ್ಕೆ ಬಂದ ಆರ್ ಎಸ್ ಎಸ್ ಮುಖಂಡ ಪ್ರಭಾಕರ ಭಟ್ ಅವರ ಕಾರಿಗೆ ಹಿಂದೂ ಕಾರ್ಯಕರ್ತರು ತಡೆ ಒಡ್ಡಿದರು. ಇದೆಲ್ಲಾ ಡೋಂಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಶವಯಾತ್ರೆ ಆಗಮಿಸುತ್ತಿದ್ದ ವೇಳೆ ನಿಂತಿಕಲ್ ಮೆರವಣಿಗೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಯುವಕನೊಬ್ಬನ ಬೈಕ್ ಪುಡಿಗಟ್ಟಲಾಗಿದೆ. ಬೆಳ್ಳಾರೆಯಲ್ಲಿ ಆಕ್ರೋಶ ಮಡುಗಟ್ಟಿದೆ. ಉಳಿದಂತೆ ಎಲ್ಲೆಡೆ ಶಾಂತಿಯುತವಾಗಿದೆ.


