ಬಿಜೆಪಿ ಯುವಮೋರ್ಚಾ ಕಾರ್ಯಕರ್ತ, ಹಿಂದೂ ಸಂಘಟನೆಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ವಿವಿಧ ಪಕ್ಷಗಳ ನಾಯಕರು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಮನೆಯವರಿಗೆ ನೆರವು ನೀಡುತ್ತಿದ್ದಾರೆ. ಹತ್ಯೆಯನ್ನು ಖಂಡಿಸಿ ಆರೋಪಿಗಳಿಗೆ ಶಿಕ್ಷೆಯಾಗಲು ಒತ್ತಾಯಿಸಿದ್ದಾರೆ.
ಎಲ್ಲಾ ನಾಯಕರು ಭೇಟಿ ನೀಡಿದಾಗಲೂ ಪ್ರವೀಣ್ ಮನೆಯವರು, ಆಪ್ತರು, ಕಾರ್ಯಕರ್ತರು ಘಟನೆಯನ್ನು ಖಂಡಿಸಿದ್ದಾರೆ, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಬೇಕು, ನಮಗೆ ನ್ಯಾಯ ಸಿಗಬೇಕು ಎಂದು ಕಣ್ಣೀರು ಹಾಕಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ತಕ್ಷಣವೇ ಸ್ಪಂದಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಹೇಳಿದರೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ , ಈ ಪ್ರಕರಣವನ್ನು ಎನ್ ಐ ಎ ಗೆ ಒಪ್ಪಿಸಬೇಕು ಎಂದು ಹೇಳಿದ್ದಾರೆ.
ಭಾನುವಾರ ಭೇಟಿ ನೀಡಿದ ಸಚಿವೆ ಶೋಭಾ ಕರಂದ್ಲಾಜೆ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ನಗದು, ಅವರ ಒಂದು ತಿಂಗಳ ಸಂಬಳ ಹಾಗೂ ಚೆಕ್ ನೀಡಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳ ಮಾದರಿಯಲ್ಲಿ ಪ್ರವೀಣ್ ಕೊಲೆಯನ್ನು ಮಾಡಿದ್ದಾರೆ. ಎನ್ ಐ ಎ ತನಿಖೆಯಲ್ಲಿ ನಿಜವಾದ ಆರೋಪಿಗಳು ಸಿಗುತ್ತಾರೆ, ಕಠಿಣ ಶಿಕ್ಷೆಯಾಗುತ್ತದೆ ಎಂದು ತಿಳಿಸಿದರು.
ಮಾಜಿ ಕೇಂದ್ರ ಸಚಿವ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಜು.30ರಂದು ಭೇಟಿ ನೀಡಿದ್ದಾರೆ. ಈ ವೇಳೆ ಮನೆಯವರಿಗೆ ಸಾಂತ್ವನ ಹೇಳಿ 1 ಲಕ್ಷ ರೂ. ಆರ್ಥಿಕ ಸಹಾಯಧನದ ಚೆಕ್ ಹಸ್ತಾಂತರಿಸಿದರು. ಪ್ರವೀಣ್ ಪತ್ನಿ ಹಾಗೂ ತಂದೆ-ತಾಯಿಯ ಜೊತೆಗೆ ಮಾತನಾಡಿ ಧೈರ್ಯ ತುಂಬಿದರು.
ಪ್ರವೀಣ್ ನೆಟ್ಟಾರು ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸುವ ಭರವಸೆ ನೀಡಿದ ಅವರು ಬಿಜೆಪಿ ರಾಜ್ಯ ಯುವ ಮೋರ್ಚಾದಿಂದ 15 ಲಕ್ಷ ಚೆಕ್ ವಿತರಿಸಿದರು.
ಈಡಿಗ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಬಿಲ್ಲವ ಸಂಘದ ಪದಾಧಿಕಾರಿಗಳು ಭೇಟಿ ನೀಡಿದರು. ಭಜರಂಗದಳದ ಮುಖಂಡ ಪುನೀತ್ ಕೆರೆಹಳ್ಳಿ, ವಿಹಿಂಪ ಪದಾಧಿಕಾರಿಗಳು, ಸ್ವಾಮೀಜಿಗಳು, ಮಹೇಶ್ ಶೆಟ್ಟಿ ತಿಮರೋಡಿ ಮೊದಲಾದವರಯ ಭೇಟಿ ನೀಡಿದ್ದರು.
ಹತ್ಯೆಯಾಗಿರುವ ಪ್ರವೀಣ್ ನೆಟ್ಟಾರು ಮನೆಗೆ ವಿಧಾನಪರಿಷತ್ ಸದಸ್ಯರುಗಳಾದ ಬಿ ಕೆ ಹರಿಪ್ರಸಾದ್ ಹಾಗೂ ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ರಮಾನಾಥ ರೈ , ಅಭಯಚಂದ್ರ ಜೈನ್, ಹರೀಶ್ ಕುಮಾರ್ ಮೊದಲಾದವರು ಭೇಟಿ ನೀಡಿದರು.