ಸುಳ್ಯದ ವಿದ್ಯುತ್ ಸಮಸ್ಯೆಯಿಂದ ಬೇಸತ್ತು 2016 ರಲ್ಲಿ ಇಂಧನ ಸಚಿವರಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದ ಬೆಳ್ಳಾರೆ ಸಾಯಿಗಿರಿಧರ್ ರೈ ಅವರ ಮನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಹಾಗೂ ಸಚಿವ ಎಸ್ ಅಂಗಾರ ಭೇಟಿ ನೀಡಿದರು.
2016 ರಲ್ಲಿ ಸುಳ್ಯದ ವಿದ್ಯುತ್ ಸಮಸ್ಯೆ ತೀವ್ರಗೊಂಡು ಆಕ್ರೋಶಗೊಂಡ ಕೃಷಿಕ ಸಾಯಿಗಿರಿಧರ ರೈ ಅವರು ಅಂದಿನ ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಕರೆ ಮಾಡಿದ್ದರು. ಕರೆ ಮಾಡುತ್ತಲೇ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಈ ಸಂಬಂಧ ಸಚಿವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಪೊಲೀಸರು ಸಾಯಿಗಿರಿಧರ ರೈ ಮನೆಗೆ ನುಗ್ಗಿ ಬಂಧಿಸಿದ್ದರು. ಅದಾದ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಾಯಿಗಿರಿಧರ ರೈ ವಿರುದ್ಧವಾಗಿ ನ್ಯಾಯಾಲಯದ ತೀರ್ಪು ಪ್ರಕಟವಾಗಿತ್ತು, ಅದಾಗಿ ಸಾಯಿಗಿರಿಧರ ರೈ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಜಾಮೀನು ಪಡೆದಿದ್ದರು. ಇದೀಗ ಅವರ ಮನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಹಾಗೂ ಸಚಿವ ಎಸ್ ಅಂಗಾರ ಭೇಟಿ ಮಾತುಕತೆ ನಡೆಸಿ ಸಾಂತ್ವನ ಹೇಳಿದರು.
2016 ರಲ್ಲಿ ನಡೆದ ಪ್ರಕರಣ ಅಂದಿನಿಂದ ಇಂದಿನವರೆಗೂ ಚರ್ಚೆಯಾಗುತ್ತಲೇ ಇದೆ. ಸಾಮಾಜಿಕವಾದ ವಿದ್ಯುತ್ ಸಮಸ್ಯೆ ಇಂದಿಗೂ ಸುಳ್ಯದಲ್ಲಿ ಬಗೆಹರಿದಿಲ್ಲ. ಬೆಳ್ಳಾರೆಯ ಸಬ್ ಸ್ಟೇಶನ್ ಕೂಡಾ ಅದಾದ ಬಳಿಕವೇ ಉದ್ಘಾಟನೆಯೂ ಆಗಿತ್ತು, ಅದರ್ಲಲೂ ರಾಜಕೀಯ ಇಚ್ಛಾಶಕ್ತಿಗಿಂತಲೂ ಸ್ಥಳೀಯ ಹೋರಾಟ ಸಮಿತಿ ಹಾಗೂ ಬಳಕೆದಾರರ ವೇದಿಕೆಯೇ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಿತ್ತು. ಇಂದಿಗೂ ಸುಳ್ಯದ ವಿದ್ಯುತ್ ಸಮಸ್ಯೆ ಬಗೆಹರಿಯಲು ಪ್ರಯತ್ನವಾಗುತ್ತಲೇ ಇದೆ. ಸಾಯಿಗಿರಿಧರ ರೈ ಅವರು ಸಾಮಾಜಿಕ ಸಮಸ್ಯೆಗೆ ಮಾತನಾಡಿ ಕೋರ್ಟ್ – ಕೇಸು ಅಲೆಯುವಂತಾಗಿತ್ತು. ಇದೀಗ ಜನಪ್ರತಿನಿಧಿಗಳು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.