ಜಗತ್ತು ಆಧುನಿಕರಣಗೊಳ್ಳುತ್ತಿದ್ದಂತೆ(modernization) ಹಳ್ಳಿ ಜನ(Village people), ರೈತರು(Farmer) ಕಡೆಗಣನೆಗೆ ಒಳಗಾಗುತ್ತಿದ್ದಾರೆ. ಅನ್ನ ನೀಡುವ ರೈತನನ್ನು ಪೇಟೆ ಮಂದಿ ನಿಕೃಷ್ಟವಾಗಿ ಕಾಣುವುದು ಮುಂದುವರೆಯುತ್ತಲೇ ಇದೆ. ಅಂದು ನಮ್ಮ ಮೆಟ್ರೋ (Namma Metro)ದಲ್ಲಿ ರೈತನಿಗೆ ರೈಲು ಏರಕು ಬಿಡದೆ ಅವಮಾನ ಮಾಡಲಾಗಿತ್ತು. ಇದೀಗ ಬೆಂಗಳೂರಿನ(Bengaluru) ಖಾಸಗಿ ಮಾಲ್‌ನಲ್ಲಿ (Private Mall) ರೈತನಿಗೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೈತರೊಬ್ಬರು ಪಂಚೆ ಧರಿಸಿ ಬಂದಿದ್ದಕ್ಕೆ ಒಳಗೆ ಬಿಡದೇ ಅವಮಾನ ಮಾಡಿರುವ ಘಟನೆ ಬೆಂಗಳೂರು ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್‌ನಲ್ಲಿ (GT Mall) ನಡೆದಿದೆ. ಮಾಲ್ ಆಡಳಿತ ಮಂಡಳಿಯ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಏನಿದು ಘಟನೆ? : ಹಾವೇರಿ ಮೂಲದ ನಾಗರಾಜ್ ಎಂಬುವವರು ತಮ್ಮ ತಂದೆ – ತಾಯಿಯನ್ನು ಜಿ.ಟಿ ಮಾಲ್‌ಗೆ ಕರೆದುಕೊಂಡು ಬಂದಿದ್ದರು. ತಂದೆ-ತಾಯಿಗೆ ಸಿನಿಮಾ ತೋರಿಸಲು ಮಾಲ್‌ಗೆ ಕರೆದುಕೊಂಡು ಬಂದಿದ್ದರು. ಆದ್ರೆ ತಮ್ಮ ತಂದೆ ಪಂಚೆ ಧರಿಸಿದ್ದಾರೆ ಅನ್ನೋ ಕಾರಣಕ್ಕೆ ಮಾಲ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಪಂಚೆ ಧರಿಸಿದರಿಗೆ ಮಾಲ್ ಒಳಗೆ ಬಿಡುವುದಿಲ್ಲ, ನಮ್ಮ ಮಾಲ್‌ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಸಿಬ್ಬಂದಿ ಹೇಳಿರುವುದಾಗಿ ನಾಗರಾಜ್ ಆರೋಪಿಸಿದ್ದಾರೆ. ನಾಗರಾಜ್ ಅವರ ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ರೈತರು. ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕೆ ಮಾಲ್ ಒಳಗೂ ಬಿಡದೇ, ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿ ಅವಮಾನ ಮಾಡಿದ್ದಾರೆ ಎಂದು ಪುತ್ರ ನಾಗರಾಜ್ ದೂರಿದ್ದಾರೆ.
ರೈತನಿಗೆ ಮಾಲ್ ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಯಿತು. ಅಲ್ಲೇ ಇದ್ದ ಕೆಲ ಯೂಟ್ಯೂಬರ್ಸ್ ಘಟನೆಯನ್ನ ವೀಡಿಯೋ ಮಾಡಲು ಶುರು ಮಾಡಿದರು. ಬಳಿಕ ಮಾಲ್‌ನ ಆಡಳಿತ ಮಂಡಳಿ ಜೊತೆ ಮಾತನಾಡಿ, ರೈತನಿಗೆ ಮಾಲ್ ಒಳಗೆ ಪ್ರವೇಶ ಕೊಡಿಸುವಂತೆ ಮಾಡಿದ್ದಾರೆ. ಅರ್ಧ ಗಂಟೆ ಬಳಿಕ ಸಿಬ್ಬಂದಿ ರೈತನಿಗೆ ಮಾಲ್ ಒಳಗೆ ಪ್ರವೇಶ ಕಲ್ಪಿಸಿಕೊಟ್ಟಿದ್ದಾರೆ ಎಂದು ಪುತ್ರ ನಾಗರಾಜ್ ತಿಳಿಸಿದ್ದಾರೆ. ಕಳೆದ ಫೆಬ್ರವರಿ 26ರಂದು ಬೆಂಗಳೂರಿನ ರಾಜಾಜಿನಗರ ನಮ್ಮ ಮೆಟ್ರೋ ನಿಲ್ದಾಣದಲ್ಲಿ ರೈತನಿಗೆ ಅವಮಾನ ಮಾಡಿದ್ದ ಘಟನೆ ನಡೆದಿತ್ತು. ಇದಕ್ಕೆ ಮೆಟ್ರೋ ಆಡಳಿತ ಮಂಡಳಿ ಕ್ಷಮೆಯಾಚಿಸಿತ್ತು.ಈಗಲೂ ಘಟನೆಯ ಬಗ್ಗೆ ಮಾಲ್ ಮುಖ್ಯಸ್ಥರು ಕ್ಷಮೆಯಾಚಿಸಿದ್ದಾರೆ.
- ಅಂತರ್ಜಾಲ ಮಾಹಿತಿ