ದನಗಳಿಗೆ ನೀಡುವ ಮೇವು ವಿಷವಾದೀತು ಎಚ್ಚರ…!

July 23, 2024
1:09 PM
ಪಶುಪಾಲನೆಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಬರಹ ಇಲ್ಲಿದೆ.ಕೆ. ಎನ್. ಶೈಲೇಶ್ ಹೊಳ್ಳ ಅವರು ಬರೆದಿರುವ ಬರಹವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.

ದನಗಳಿಗೆ(cow) ಎಂತಹ ಆಹಾರವನ್ನು(fodder) ನೀಡಬೇಕು ಮತ್ತು ಎಂತಹ ಆಹಾರವನ್ನು ನೀಡಬಾರದು ಎಂಬುದರ ಸರಿಯಾದ ಮಾಹಿತಿ ನಮ್ಮಲ್ಲಿಯ ಬಹುತೇಕ ಪಶುಪಾಲಕರಿಗೆ(cattle breeder) ಇಂದಿಗೂ ಇಲ್ಲ. ನಮಗೆ ಬೇಡವಾದ ಹಸಿ ಹಾಗೂ ಒಣ ತ್ಯಾಜ್ಯವನ್ನು(wet and dry waste) ದನಗಳಿಗೆ ಕೊಡುವುದು ಅವುಗಳ ಜೀವಕ್ಕೆ ಆಪತ್ತು ತರಬಹುದು ಎಂಬ ಪರಿವೆಯಂತೂ ಇಲ್ಲವೇ ಇಲ್ಲ. ಡಾ. ಎನ್.ಬಿ. ಶ್ರೀಧರ್ ಹೇಳುವಂತೆ ದನಗಳಿಗೆ ನುಣ್ಣಗೆ ಇರುವ ಆಹಾರವನ್ನು ಎಂದಿಗೂ ಕೊಡಬಾರದು.

Advertisement

ಶುಭ ಅಶುಭ ಸಮಾರಂಭಗಳಲ್ಲಿ ಉಳಿಯುವ ಆಹಾರ ಪದಾರ್ಥಗಳು ಸೇರಿದಂತೆ ಮನೆಯಲ್ಲಿ ಉಳಿಯುವ ಆಹಾರ ಪದಾರ್ಥಗಳು, ಅನ್ನದ ಗಂಜಿ, ಸಿಹಿ ಪದಾರ್ಥಗಳನ್ನು ದನಗಳಿಗೆ ತಿನ್ನಿಸುವುದು ವಿಷವನ್ನು ತಿನ್ನಿಸಿದಂತೆ. ಇಂತಹ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ದನಗಳು ಸತ್ತಿರತಕ್ಕಂತ ನಿದರ್ಶನಗಳು ಲೆಕ್ಕವಿಲ್ಲದಷ್ಟಿವೆ. ಇಷ್ಟೇ ಅಲ್ಲದೆ ಕಾಳುಗಳ ನುಚ್ಚು ಅಥವಾ ಕಾಳುಗಳ ಹಿಟ್ಟನ್ನು ಹೆಚ್ಚಾಗಿ ತಿನ್ನಿಸುವುದರಿಂದಲೂ ದನಗಳು ಅಕಾಲ ಮರಣಕ್ಕೆ ತುತ್ತಾಗುತ್ತವೆ. ಇನ್ನು ಕಡಲೇಕಾಯಿ ಹಿಂಡಿಯನ್ನು ನೆನೆಸಿ ನಂತರ ಅದನ್ನು ದನಗಳಿಗೆ ಕೊಡುವಾಗ ಆ ಪಾತ್ರೆಯಲ್ಲಿ ಹಿಂದಿನ ದಿನ ತೊಳೆಯದೆ ಉಳಿದ ಹಿಂಡಿಯ ಶೇಷದೊಂದಿಗೆ ಹೊಸ ಹಿಂಡಿಯನ್ನು ಹಾಕಿ ಕೊಡುವುದರಿಂದ ದನಗಳ ಹೊಟ್ಟೆಯಲ್ಲಿ ಹುಳಿ ಹೆಚ್ಚಾಗಿ ದನ ಸಾಯುವ ಸಾಧ್ಯತೆ ಇರುತ್ತದೆ.

ಇನ್ನು ಬಾರ್‍ಲಿ, ಓಟ್ಸ್ ಮತ್ತು ಮರಗೆಣಸು ಪುಡಿಗಳನ್ನು ಮದ್ಯದ ತಯಾರಿಕೆಯಲ್ಲಿ ಬಳಸಿದ ನಂತರ ದನಗಳಿಗೆ ಕೊಡುವ ಅಭ್ಯಾಸ ಹಲವು ಕಡೆಯಿದೆ. ಇವುಗಳನ್ನು ಆಗತಾನೇ ಬಟ್ಟಿ ಇಳಿಸಿ ಒಂದು ದಿನದೊಳಗೆ ದನಗಳಿಗೆ ತಿನ್ನಿಸುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಅದನ್ನು ದಾಸ್ತಾನು ಮಾಡಿ ನಂತರ ಬಳಸುವುದರಿಂದ ಅದು ಹುಳಿಯಾಗುವುದಷ್ಟೇ ಅಲ್ಲದೆ ಬೂಷ್ಟು ಬೆಳೆಯುವುದಕ್ಕೆ ಅವಕಾಶವಿರುತ್ತದೆ. ಇಂತಹ ಆಹಾರವನ್ನು ತಿಂದ ದನಗಳು ಸಾಯುವ ಸಾಧ್ಯತೆ ಹೆಚ್ಚು. ಇದರೊಂದಿಗೆ ಕೊಳೆತಿರುವ ಪಶು ಆಹಾರ, ಕಾಳುಗಳು, ಹೋಟೆಲ್‌ಗಳಲ್ಲಿ ತಿಂದುಬಿಟ್ಟಿರುವ ಆಹಾರ ಪದಾರ್ಥಗಳು, ಹಳಸಿದ ಪದಾರ್ಥ, ಕೆಟ್ಟಿರುವ ಸೈಲೇಜ್, ಬೂಷ್ಟು ಹಿಡಿದಿರುವ ಪಶು ಆಹಾರ ಮತ್ತು ಒದ್ದೆಯಾದ ಹುಲ್ಲನ್ನು ದನಗಳಿಗೆ ನೀಡಬಾರದು. ನೆನೆದ ಹುಲ್ಲಿನಲ್ಲಿ ಬೂಷ್ಟು ಉತ್ಪತ್ತಿಯಾಗಿದ್ದಲ್ಲಿ ಅದನ್ನು ತಿನ್ನಿಸುವುದರಿಂದ ತೊಂದರೆ ಆಗುವ ಅವಕಾಶವೇ ಹೆಚ್ಚು.

ಹುಲ್ಲನ್ನು ತುಂಬಾ ಸಣ್ಣದಾಗಿ ತುಂಡು ಮಾಡಿ ದನಗಳಿಗೆ ತಿನ್ನಿಸುವುದರಿಂದ ಹೆಚ್ಚಿನ ದನಗಳು ಹುಲ್ಲನ್ನು ತಿನ್ನದೇ ಇರಬಹುದು. ಇದರಿಂದಲೂ ದನ ಸಾಯುವ ಸಾಧ್ಯತೆ ಇರುತ್ತದೆ. ಪಶು ತಜ್ಞರ ಪ್ರಕಾರ ಸಣ್ಣದಾಗಿ ಅಂದರೆ ಸುಮಾರು ಕಾಲು ಅಂಗುಲದಷ್ಟು ಕತ್ತರಿಸಿದ ಹುಲ್ಲನ್ನು ದನಗಳಿಗೆ ಕೊಡುವುದು ಅಪಾಯ. ಹೀಗೆ ಕತ್ತರಿಸಿದ ಹುಲ್ಲು ದನದ ಮೊದಲನೆ ಹೊಟ್ಟೆಯಲ್ಲಿ ಹೆಚ್ಚು ಹೊತ್ತು ನಿಲ್ಲದೆ ಬೇಗನೇ ಮೂರನೆಯ ಹೊಟ್ಟೆಗೆ ಹೋಗುತ್ತದೆ. ಹೀಗಾಗಿ ಕನಿಷ್ಠ ಒಂದು ಅಂಗುಲದಷ್ಟು ಉದ್ದ ಕತ್ತರಿಸಿದ ಹುಲ್ಲನ್ನೇ ಕೊಡಬೇಕು. ಇನ್ನು ಸೈಲೇಜ್ ಕೊಡುವ ವಿಚಾರದಲ್ಲೂ ಎಚ್ಚರವಿರಬೇಕು. ಸೈಲೇಜ್ ತಯಾರಿಸುವ ಜೋಳದ ತೆನೆಯನ್ನು ಮುರಿದು ಅದರಲ್ಲಿ ಒಂದು ಕಾಳನ್ನು ಕಿತ್ತು ಹಿಸುಕಿದರೆ ಅದು ಮೆತ್ತಗೆ ಇದ್ದು, ಅದರಲ್ಲಿರುವ ಹಾಲು ಹೊರಗೆ ಬರುವಂತಿರಬೇಕು. ಹಾಗೆಂದು ಜೋಳದ ಕಾಳು ತುಂಬಾ ಮೆತ್ತೆಗೆ ಇದ್ದರೂ ಪ್ರಯೋಜನವಿಲ್ಲ. ಅದು ಎಳೆಯದಾಗಿದ್ದು ಅದರಿಂದ ತಯಾರಿಸಿದ ಸೈಲೇಜ್ ಸಹ ಅಪಾಯವನ್ನು ತರಬಹುದು. ಒಟ್ಟಿನಲ್ಲಿ ಸೈಲೇಜ್ ತಯಾರಿಕೆಯ ಸಂದರ್ಭದಲ್ಲಿ ಹುಲ್ಲು ತುಂಬಾ ಚಿಕ್ಕದಾಗಿ ಕತ್ತರಿಸಲ್ಪಟ್ಟಿರಬಾರದು ಮತ್ತು ಹುಲ್ಲಿನಲ್ಲಿ ಹೆಚ್ಚಿನ ನೀರಿನಂಶ ಇರಬಾರದು. ಹೀಗೆ ತಯಾರಾದ ಸೈಲೇಜ್ ದನಗಳ ಸಾವಿಗೆ ಕಾರಣವಾಗಬಹುದು.

ದನಗಳು ಹೊಲದಲ್ಲಿ ಚೆನ್ನಾಗಿ ಬೆಳೆದ ಅಲಸಂದಿ, ಹೆಸರು, ಅವರೆ ಮೊದಲಾದ ಹುಲ್ಲುಗಳನ್ನು ಬೇಗ ಬೇಗ ತಿನ್ನುವುದರಿಂದ ಅವು ಹೊಟ್ಟೆಯಲ್ಲಿನ ಕ್ರಿಮಿಗಳು ಅವುಗಳನ್ನು ಜೀರ್ಣಮಾಡಿಕೊಳ್ಳುವ ಬದಲಾಗಿ ಕೊಳೆಯುವಂತೆ ಮಾಡುತ್ತವೆ. ಆಗ ಸಣ್ಣದಾಗಿ ನೊರೆ ಉತ್ಪತ್ತಿಯಾಗಿ ತಿಂದ ಹುಲ್ಲುಗಳ ಮಧ್ಯೆ ಸೇರಿಕೊಂಡು ಹೊಟ್ಟೆಯಲ್ಲಿ ಊತ ಉಂಟಾಗುವಂತೆ ಮಾಡುತ್ತದೆ. ಇದರಿಂದಲೂ ದನಗಳು ಸಾಯುವ ಸಾಧ್ಯತೆ ಇರುತ್ತದೆ. ಇಂತಹ ಕಾಳುಗಳ ಹುಲ್ಲನ್ನು ಸರಿಯಾಗಿ ಒಣಗಿಸದೆ ಇಟ್ಟಾಗ ಮತ್ತು ಮಳೆಗೆ ನೆನೆಸಿದ್ದಾಗ ಹಾಗೂ ತೇವಾಂಶವಿದ್ದಾಗ ಇದರಲ್ಲಿ ಬೂಜು ಅಥವಾ ಬೂಷ್ಟಿನ ಕ್ರಿಮಿ ಹುಟ್ಟಿ ವಿಷವನ್ನು ಉತ್ಪತ್ತಿಮಾಡುತ್ತದೆ. ನಂತರ ಇಂತಹ ಹುಲ್ಲನ್ನು ಶೇಖರಿಸಿಟ್ಟು ದನಗಳಿಗೆ ತಿನ್ನಿಸುವುದರಿಂದ ಅವುಗಳ ಲಿವರ್ ಸರಿಯಾಗಿ ಕೆಲಸ ಮಾಡದಂತಾಗುವ ಸಾಧ್ಯತೆ ಇರುತ್ತದೆ. ಇದರೊಂದಿಗೆ ಇಂತಹ ಹುಲ್ಲನ್ನು ತಿನ್ನಿಸುವುದರಿಂದ ಪದೇ ಪದೇ ಹೊಟ್ಟೆ ಊತ ಬರುವ ಸಾಧ್ಯತೆ ಹೆಚ್ಚಿರುತ್ತದೆ.

ತುಂಬಾ ಬಲಿತಿರುವ ಹುಲ್ಲು, ಮಳೆಯಲ್ಲಿ ನೆನೆದಿರತಕ್ಕಂತ ಒಣ ಹುಲ್ಲು, ಫಾಸ್ಪರಸ್ ಖನಿಜಾಂಶ ಕಡಿಮೆ ಇರುವ ಜಮೀನಿನಲ್ಲಿ ಬೆಳೆದ ಹುಲ್ಲನ್ನು ಕೊಡುವುದು ಸಹ ಅಪಾಯಕಾರಿ. ಎಳೇ ಹುಲ್ಲುಗಳನ್ನು ತಿನ್ನಿಸುವುದರಿಂದ ಹೊಟ್ಟೆ ಸರಿಯಾಗಿ ಕದಲುವುದಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ದನಗಳು ಮೆಲುಕು ಹಾಕಲಾಗುವುದಿಲ್ಲ. ಹೀಗಾಗಿ ಹೊಟ್ಟೆ ಬಾತುಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ. ಎಳೇ ಹುಲ್ಲುಗಳಲ್ಲಿ ಸಾಕಷ್ಟು ನಾರಿನಂಶ ಇರುವುದಿಲ್ಲ. ತುಂಬಾ ಬಲಿತ ಹುಲ್ಲುಗಳಲ್ಲಿ ಹೆಚ್ಚು ಲಿಗ್ನಿನ್ ಅಂಶ ಇರುತ್ತದೆ. ಇದನ್ನು ದನಗಳು ಜೀರ್ಣಿಸಿಕೊಳ್ಳುವುದಿಲ್ಲ. ಈ ಕಾರಣಗಳಿಂದ ಹುಲ್ಲನ್ನು ಸರಿಯಾದ ಹಂತದಲ್ಲಿ ಕಟಾವು ಮಾಡಿ ಕೊಡುವುದು ಉತ್ತಮ. ಬಹು ಮುಖ್ಯವಾಗಿ ಯೂರಿಯಾ ಮತ್ತು ರಾಸಾಯನಿಕ ಗೊಬ್ಬರ ಹಾಕಿ ಬೆಳೆದ ಹುಲ್ಲನ್ನು ನೀಡುವುದು ದನಗಳಿಗೆ ನಿಧಾನ ಗತಿಯ ವಿಷವನ್ನು ನೀಡಿದಂತೆ ಎಂಬುದು ಅರಿವಿರಲಿ.

ಇನ್ನು ರಬ್ಬರ್ ಬೆಳೆದ ತೋಟಕ್ಕೆ ದನಗಳನ್ನು ಬಿಡದೇ ಇರುವುದು ಬಹಳ ಒಳ್ಳೆಯದು. ಏಕೆಂದರೆ ರಬ್ಬರ್ ಹಾಲು ಜಾನುವಾರುಗಳಿಗೆ ಅಪಾಯಕಾರಿಯಾದುದು. ಇದರೊಂದಿಗೆ ಅತಿಯಾಗಿ ರಬ್ಬರ್ ಸೊಪ್ಪನ್ನು ದನಗಳು ತಿಂದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಗಿಡದ ಹಸಿರು ಸೊಪ್ಪನ್ನು ಸುಮಾರು 2 ರಿಂದ 4 ಕೆಜಿಯಷ್ಟು ತಿಂದ ದನ ಉಳಿಯುವ ಸಾಧ್ಯತೆ ಬಹಳ ಕಡಿಮೆ ಎನ್ನಲಾಗಿದೆ. ಈ ಸೊಪ್ಪಿನಲ್ಲಿ ಸಯನೈಡ್‌ನ ಅಂಶವಿರುವುದರಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ದನಗಳು ಸಾಯುವುದು ನಿಶ್ಚಿತ. ಈ ಮರದಿಂದ ಸಂಗ್ರಹಿಸಿದ ಸಿಹಿಯಾಗಿರುವ ಹಾಲನ್ನು ಜಾನುವಾರುಗಳು ನೀರೆಂದು ಕುಡಿದಲ್ಲಿ ಆಗುವ ಮಾರಣಾಂತಿಕ ಪರಿಣಾಮದ ಕುರಿತಂತೆ ತ್ಯಾಗರ್ತಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಾದ ಡಾ. ಎನ್.ಎಚ್. ಶ್ರೀಪಾದರಾವ್‌ರವರು 2013ರಲ್ಲಿ ಬರೆದ ಸುದೀರ್ಘ ಲೇಖನವೊಂದು ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರಲ್ಲಿ ಅವರು ಹೇಳುವಂತೆ ದನಗಳು ರಬ್ಬರ್ ಹಾಲನ್ನು ನೀರೆಂದು ಭಾವಿಸಿ ಪೂರ್ತಿಯಾಗಿ ಕುಡಿಯುವ ಸಾಧ್ಯತೆ ಬಹಳ ಹೆಚ್ಚಿದ್ದು ತುರ್ತಾಗಿ ಪಶುವೈದ್ಯರ ಸಹಾಯ ಪಡೆಯಲೇ ಬೇಕಂತೆ. ಇದಕ್ಕೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವಾಗಿದ್ದು, ಅದನ್ನೂ ಆದಷ್ಟು ಬೇಗ ಮಾಡಿದರೆ ಒಳ್ಳೆಯದೆಂದು ತಿಳಿಸಿದ್ದಾರೆ.

ಒಂದೊಮ್ಮೆ ರಬ್ಬರ್ ಹಾಲನ್ನು ದನಗಳು ಕುಡಿದಿದ್ದೇ ಆದಲ್ಲಿ ಅವುಗಳು ಬದುಕುಳಿಯುವ ಸಾಧ್ಯತೆ ಶೇಕಡಾ 50ರಷ್ಟು ಮಾತ್ರ ಎಂಬುದಾಗಿ ಹೇಳಲಾಗುತ್ತದೆ. ಹೀಗೆ ರಬ್ಬರ್ ಹಾಲು ಒಮ್ಮೆ ದನದ ಹೊಟ್ಟೆ ಸೇರಿದ ಕೂಡಲೇ ಅದು ಅಸಿಟಿಕ್ ಆಮ್ಲ, ಬ್ಯುಟಿರಿಕ್ ಆಮ್ಲಗಳ ಜೊತೆ ಸೇರಿಕೊಂಡು ಕಲ್ಲಿನಂತೆ ಹೊರಗೆ ತೆಗೆಯಲಾರದಷ್ಟು ಗಟ್ಟಿಯಾಗುತ್ತದೆ. ಇದಕ್ಕೆ ನುರಿತ ವೈದ್ಯರಿಂದ ಸಾಕಷ್ಟು ತಾಸುಗಳ ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಿರುತ್ತದೆ. ಒಮ್ಮೊಮ್ಮೆ ದನದ ಎರಡನೇ ಮತ್ತು ಮೂರನೇ ಉದರದಲ್ಲಿ ರಬ್ಬರ್ ತುಂಡಿನಂತೆ ಇದು ಶೇಖರಣೆಗೊಂಡಾಗ ಇದನ್ನು ಹೊರಗೆ ತೆಗೆಯಲು ಸಾಧ್ಯವಾಗುವುದೇ ಇಲ್ಲ. ಬಹುತೇಕ ದನಗಳು ಚಿಕಿತ್ಸೆಯ ನಂತರವೂ ಸಾವು ಬದುಕಿನ ನಡುವೆ ಹೋರಾಡುತ್ತಲೇ ಇರುತ್ತವೆ.

ಇನ್ನು ಕೆಲವರು ವೈದ್ಯರ ಸಲಹೆಯಂತೆ ಚಿಕಿತ್ಸೆಗೊಳಗಾದ ಆ ದನಕ್ಕೆ ಸತ್ತ ಕುರಿಯ ಹೊಟ್ಟೆಯಲ್ಲಿರುವ ಮೇವು ಅಥವಾ ಕಸರನ್ನು ಐದು ದಿನ ತಿನ್ನಿಸುವ ಪ್ರಯತ್ನವನ್ನು ಮಾಡುತ್ತಾರೆ. ಹೀಗೆ ಮಾಡಿದಾಗ ಕುರಿಯ ಆ ಮೇವಿನಲ್ಲಿರುವ ಕೋಟ್ಯಾಂತರ ಉಪಕಾರಿ ಜೀವಾಣುಗಳು ಹಸುವಿನ ಹೊಟ್ಟೆಯನ್ನು ಸಹಜ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ನಂತರದ ಕೆಲ ದಿನಗಳಲ್ಲಿ ನಿಧಾನವಾಗಿ ದನ ಸಹಜ ಸ್ಥಿತಿಗೆ ಮರಳುವ ಅವಕಾಶವಿರುತ್ತದೆ. ಹೀಗಾಗಿ ರಬ್ಬರ್ ಬೆಳೆಗಾರರು ಸಂಗ್ರಹಿಸಿದ ಹಾಲನ್ನು ವಿಶೇಷವಾಗಿ ಬೇಸಿಗೆ ದಿನಗಳಲ್ಲಿ ಜಾನುವಾರುಗಳಿಗೆ ಸಿಗದಂತೆ ದೂರವಿಟ್ಟರೆ ಒಳಿತು. ಇಷ್ಟರ ನಡುವೆಯೂ ಅಕಸ್ಮಾತ್ ದನಗಳು ರಬ್ಬರ್ ಹಾಲನ್ನು ಕುಡಿದಲ್ಲಿ ಆದಷ್ಟು ಬೇಗ ಅಂದರೆ 2 ರಿಂದ 4 ತಾಸಿನೊಳಗೆ ಅಂತಹ ದನವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು. ಆಗ ಮಾತ್ರ ಅವು ಬದುಕುಳಿಯುವ ಸಾಧ್ಯತೆ ಇರುತ್ತದೆ.

ಬರಹ :
ಕೆ. ಎನ್. ಶೈಲೇಶ್ ಹೊಳ್ಳ

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 06-04-2025 | ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ | ಎ.7 ರಿಂದ ಮಳೆಯ ಪ್ರಮಾಣ ಕಡಿಮೆ |
April 6, 2025
6:08 PM
by: ಸಾಯಿಶೇಖರ್ ಕರಿಕಳ
ಒಂದೆಡೆ ಮಳೆ-ಇನ್ನೊಂದೆಡೆ ಹೀಟ್‌ವೇವ್‌ | ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
April 6, 2025
11:00 AM
by: ದ ರೂರಲ್ ಮಿರರ್.ಕಾಂ
ಮ್ಯಾನ್ಮಾರ್‌ನ ಭೂಕಂಪ | ಭಾರತೀಯ ಸೇನಾ ಆಸ್ಪತ್ರೆಯಲ್ಲಿ 700 ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ
April 6, 2025
10:00 AM
by: ದ ರೂರಲ್ ಮಿರರ್.ಕಾಂ
ಮಾನವ-ಆನೆ ಸಂಘರ್ಷ ತಡೆಗೆ ಕ್ರಮ | 200 ಕೋ. ರೂ. ವೆಚ್ಚದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ
April 6, 2025
9:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group