ಸುಳ್ಯ ಮೀಸಲು ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತೆಗೆ ಮಣೆ ಹಾಕಿದೆ. ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಮೂಲಕ ಪಕ್ಷವು ಹೊಸ ಭಾಷ್ಯ ಬರೆದಿದೆ.
ಭಾಗೀರಥಿ ಮುರುಳ್ಯ ಅವರು ಸುಳ್ಯದ ಮುರುಳ್ಯ ಗ್ರಾಮದ ಶಾಂತಿನಗರ ನಿವಾಸಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2ನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಆದಿ ದ್ರಾವಿಡ ಸಮುದಾಯದವರು. ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ ಎಂಬಲ್ಲಿ ನಾಲ್ಕು ವರ್ಷಗಳ ಕಾಲ ಮೇಸ್ಟ್ರು ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮಕ್ಕಳಿಗೆ ಪಾಠ ಹೇಳಿಕೊಟ್ಟ ಅನುಭವ ಅವರದು. ಬಳಿಕ ಟೈಲರಿಂಗ್ ಮತ್ತು ಹೈನುಗಾರಿಕೆಗೂ ತೊಡಗಿಸಿಕೊಂಡಿದ್ದಾರೆ.
ಸುಳ್ಯ ಬಿಜೆಪಿಯಲ್ಲಿಗುರುತಿಸಿಕೊಂಡಿರುವ ಇವರು, ಹಲವು ಸಂಘ ಸಂಸ್ಥೆಗಳ್ಲಲಿ ಉನ್ನತ ಸ್ಥಾನ ಸಮರ್ಥವಾಗಿ ನಿಭಾಯಿಸಿದವರು. ಜಿಲ್ಲಾ ಪಂಜಾಯತ್ ಸದಸ್ಯೆ ಹಾಗೂ ತಾಲೂಕು ಪಂಚಾಯತ್ ಸದಸ್ಯೆ ಆಗಿ ಕಾರ್ಯನಿರ್ವಹಿಸಿದವರು. ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾದ ಉಪಾಧ್ಯಕ್ಷೆ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಮತ್ತು ಕಾರ್ಯದರ್ಶಿ, ಬೆಳ್ತಂಗಡಿ ಮತ್ತು ಪುತ್ತೂರು ಬಿಜೆಪಿ ಘಟಕದ ಸಹ ಪ್ರಭಾರಿ ಆಗಿ ಕಾರ್ಯನಿರ್ವಹಿಸಿದ ಅನುಭವದ ಇವರದು. ಈಗ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಹಾಗೂ ಕೊಡಗು ಮತ್ತು ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿ ಆಗಿ ಕೂಡ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಸುಳ್ಯದಲ್ಲಿ ಜಾತಿ ರಾಜಕೀಯ ಕೆಲಸ ಮಾಡುತ್ತಿದ್ದು, ಸುಳ್ಯದಲ್ಲಿ ನಿರ್ಣಾಯಕವಾಗಿರುವ ಆದಿದ್ರಾವಿಡ ಸಮುದಾಯದ ಜನರಿಗೆ 30 ವರ್ಷಗಳಿಂದ ಇಲ್ಲಿಯತನಕ ಒಮ್ಮೆಯೂ ಅವಕಾಶ ನೀಡಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ ಆದಿದ್ರಾವಿಡ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕು. ಒಂದು ವೇಳೆ ಟಿಕೆಟ್ ತಪ್ಪಿದ್ದಲ್ಲಿ ಇದರ ಪರಿಣಾಮ ಬಿಜೆಪಿ ಎದುರಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆದಿದ್ರಾವಿಡ ಸಂಘದ ಪ್ರಮುಖರು ಎಚ್ಚರಿಕೆ ನೀಡಿದ್ದರು.
ಆದಿದ್ರಾವಿಡ ಸಮುದಾಯಕ್ಕೆ ಟಿಕೆಟ್ ನೀಡಿದರೇ ಪಕ್ಷಾತೀತವಾಗಿ ನಮ್ಮ ಸಮುದಾಯದ ಮತವನ್ನು ವರ್ಗೀಕರಣ ಆಗದಂತೆ ನೋಡಿಕೊಳ್ಳುವುದಾಗಿಯೂ ಸಮುದಾಯದವರು ಘಂಟಾಘೋಷವಾಗಿ ಹೇಳಿಕೊಂಡಿದ್ದರು. ಅಂದುಕೊಂಡತೆ ಭಾಗೀರಥಿ ಅವರಿಗೆ ಟಿಕೆಟ್ ನೀಡಿರುವುದು ಈ ಸಮುದಾಯಕ್ಕೆ ಖುಷಿ ತಂದಿದೆ.