ಭೀಮ್’ಕುಂಡ್..(Bheem Kund) ಈ ಕೆರೆಯನ್ನು(Lake) ನಿರ್ಮಿಸಿದವನು ಭೀಮನಂತೆ(Bheema)… ಇದರ ಆಳ(Depth) ಎಷ್ಟಿದೆಯೆಂದು ಯಾರಿಗೂ ಗೊತ್ತಿಲ್ಲ…! ಇದೊಂದು ಪುರಾತನ ಕೆರೆ. ಜನ ಇದನ್ನು `ಭೀಮ್ ಕುಂಡ್’ ಎಂದು ಕರೆಯುತ್ತಾರೆ.
ಆದರೆ, ಈ ಬಾವಿ ಅಥವಾ ಕೆರೆ ಬರೀ ನೀರಿನ ಮೂಲವಾಗಿ ಉಳಿದಿಲ್ಲ… ಇದರ ಹಿಂದೆ ದೊಡ್ಡ ದೊಡ್ಡ ರಹಸ್ಯದ ಕತೆಗಳೇ ಇವೆ… ಮಧ್ಯಪ್ರದೇಶದ ಚತರ್ಪುರ್ ಜಿಲ್ಲೆಯ ಭಜನಾ ಗ್ರಾಮದಲ್ಲಿದೆ ಭೀಮ್ ಕುಂಡ್. ಬಂಡೆಗಳ ನಡುವಣ ಗುಹೆಯಂತಹ ಜಾಗದಲ್ಲಿ ಈ ನೀರಿನ ಸೆಲೆ ಇದೆ. ಪುರಾತನ ಕಾಲದಿಂದಲೂ ಇದು ಸಾಧು ಸಂತರ, ಋಷಿ ಮುನಿಗಳ ಅಚ್ಚುಮೆಚ್ಚಿನ ಜಾಗವಾಗಿತ್ತು. ಸದ್ಯ ಈ ಬಾವಿ ಪ್ರವಾಸಿತಾಣ ಮತ್ತು ಪ್ರಮುಖ ಅಧ್ಯಯನದ ಕೇಂದ್ರವಾಗಿ ಮಾರ್ಪಟ್ಟಿದೆ.
ತರ್ಕಕ್ಕೆ ನಿಲುಕದ ರಹಸ್ಯ : ಭಾರತ ಹಲವು ವಿಶೇಷತೆಗಳನ್ನು ಹೊಂದಿರುವ ದೇಶ. ತನ್ನ ಅದ್ಭುತ ಕಲೆ, ಸಂಸ್ಕೃತಿ, ಸಂಪ್ರದಾಯ, ಆಧ್ಯಾತ್ಮ, ಆಚಾರ ವಿಚಾರಗಳಿಂದ ಭಿನ್ನವಾಗಿ ನಿಲ್ಲುವ ದೇಶ ನಮ್ಮದು. ಇಷ್ಟೆ ಅಲ್ಲ, ಇಲ್ಲಿನ ಇತಿಹಾಸ ತನ್ನೊಳಗೆ ಅದೆಷ್ಟೋ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಇದರಲ್ಲಿ ಒಂದು ಭೀಮ್ ಕುಂಡ್. ಈ ಭೀಮ್ ಕುಂಡ್‌ನ ವಿಶೇಷತೆ ಏನೆಂದರೆ ಇದುವರೆಗೆ ಈ ಬಾವಿಯ ಆಳ ಎಷ್ಟಿದೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ದೊಡ್ಡ ದೊಡ್ಡ ವಿಜ್ಞಾನಿಗಳೇ ಈ ಬಗ್ಗೆ ಅಧ್ಯಯನ ನಡೆಸಿದ್ದರೂ, ವಿದೇಶದ ತಂಡ ಬಂದು ಪರಿಶೀಲನೆ ನಡೆಸಿದರೂ ನೀರಿನ ಆಳ ಕಂಡು ಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲವಂತೆ.
ಭೀಮ ನಿರ್ಮಿಸಿದ್ದ ಬಾವಿಯಂತೆ : ಈ ಬಾವಿಯ ಕತೆ ಮಹಾಭಾರತಕ್ಕೂ ಸಂಬಂಧ ಹೊಂದಿದೆ. ವನವಾಸದ ಸಂದರ್ಭದಲ್ಲಿ ಪಾಂಡವರು ಇಲ್ಲಿಗೆ ಬಂದಿದ್ದರಂತೆ. ಈ ವೇಳೆ, ದ್ರೌಪದಿಗೆ ತುಂಬಾ ಬಾಯಾರಿಕೆಯಾಯಿತಂತೆ. ಹೀಗಾಗಿ, ನೀರನ್ನು ಹುಡುಕಿಕೊಂಡು ಪಾಂಡವರು ಕಾಡಲ್ಲಿ ಎಷ್ಟು ಅಲೆದಾಡಿದರೂ ಒಂದೇ ಒಂದು ನೀರಿನ ಮೂಲ ಸಿಕ್ಕಿಲ್ಲವಂತೆ. ಇದರಿಂದ ದ್ರೌಪದಿ ಸೇರಿದಂತೆ ಪಾಂಡವರ ದಾಹ ಹೆಚ್ಚಾಗಿತ್ತಂತೆ. ಈ ವೇಳೆ, ಭೀಮ ಕೋಪದಿಂದ ತನ್ನ ಗಧೆಯನ್ನು ಜೋರಾಗಿ ಭೂಮಿಗೆ ಬಡಿದಾಗ ಈ ಬಾವಿ ನಿರ್ಮಾಣವಾಗಿ ನೀರು ಹೊರಚಿಮ್ಮಿತ್ತಂತೆ. ಹೀಗಾಗಿ, ಈ ಕೆರೆಗೆ ಭೀಮ್ ಕುಂಡ್ ಎಂಬ ಹೆಸರು ಬಂದಿದೆ ಎನ್ನುತ್ತದೆ ಐತಿಹ್ಯ. ಇಲ್ಲಿರುವ ಗುಹೆಯಲ್ಲಿ ಒಂದಷ್ಟು ಕಾಲ ಪಾಂಡವರು ತಮ್ಮ ಅಜ್ಞಾತವಾಸವನ್ನು ಕಳೆದಿದ್ದರಂತೆ. ಇನ್ನು, ಇದೇ ಕೆರೆಯನ್ನು ನಾರದ್ ಕುಂಡ್ ಅಥವಾ ನೀಲ ಕುಂಡ್ ಎಂದೂ ಕರೆಯಲಾಗುತ್ತಿದೆ. ಆದರೆ, ಅತೀ ಹೆಚ್ಚಾಗಿ ಈ ಕೆರೆಯನ್ನು ಭೀಮ ಕುಂಡ್ ಎಂದೇ ಎಲ್ಲರೂ ಕರೆಯುತ್ತಾರೆ.
ಆಳ ಎಷ್ಟಿದೆಯೆಂದು ಗೊತ್ತಿಲ್ಲ:
ಈ ಭೀಮ್ ಕುಂಡದ ದೊಡ್ಡ ರಹಸ್ಯ ಎಂದರೆ ಈ ಕೆರೆ ಎಷ್ಟು ಆಳ ಇದೆಯೆಂದು ಇದುವರೆಗೆ ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಅದೆಷ್ಟೋ ಅಧ್ಯಯನ ನಡೆದರೂ, ಮುಳುಗುತಜ್ಞರೂ ಪ್ರಯತ್ನಿಸಿದರೂ ಇದರ ಆಳ ತಿಳಿಯಲು ಸಾಧ್ಯವಾಗಲಿಲ್ಲವಂತೆ. ಈ ವಿಷಯ ತಿಳಿದು ವಿದೇಶಿ ಚಾನೆಲ್‌ನ ತಂಡ ತಜ್ಞರೊಂದಿಗೆ ಇಲ್ಲಿಗೆ ಬಂದಿತ್ತಂತೆ. ಆದರೆ, ಇವರು ಕೂಡಾ ಈ ಭೀಮ್ ಕುಂಡದ ಆಳವನ್ನು ತಿಳಿಯುವಲ್ಲಿ ಸಫಲರಾಗಿರಲಿಲ್ಲ. ಮುಳುಗುತಜ್ಞರು 80 ಮೀಟರ್ ಆಳದ ತನಕ ತಲುಪಿದ ಬಳಿಕ ಅವರಿಗೆ ಮುಂದೆ ಹೋಗಲು ಸಾಧ್ಯವಾಗಲಿಲ್ಲವಂತೆ. ಕಾರಣ ಅತೀ ವೇಗದಲ್ಲಿ ನೀರು ಇಲ್ಲಿ ಹರಿದುಬರುತ್ತಿತ್ತಂತೆ.
ಮೃತದೇಹ ಮೇಲೆ ಬರುವುದಿಲ್ಲ…! : ಸಾಮಾನ್ಯವಾಗಿ ಕೆರೆ, ಬಾವಿ, ಸಮುದ್ರದಲ್ಲಿ ಈಜಲು ಹೋದಾಗ ಕೆಲವರು ಮುಳುಗಿ ಸಾವನ್ನಪ್ಪುತ್ತಾರೆ. ಆದರೆ, ಒಂದಷ್ಟು ದಿನಗಳಲ್ಲಿ ಇವರ ಮೃತದೇಹ ಮೇಲೆ ಬರುತ್ತದೆ. ಆದರೆ, ಭೀಮ ಕುಂಡದ ವಿಷಯದಲ್ಲಿ ಇದು ಸರಿ ಉಲ್ಟಾ ಇದೆ. ಅದೇನೆಂದರೆ, ಇಲ್ಲಿ ಮುಳುಗಿದವರ ಮೃತದೇಹ ಮೇಲೆ ಬರುವುದೇ ಇಲ್ಲವಂತೆ…!
ಪ್ರಾಕೃತಿಕ ವಿಪತ್ತುಗಳ ಮುನ್ಸೂಚನೆ…! : ಈ ಬಾವಿ ಪ್ರಾಕೃತಿಕ ವಿಕೋಪಗಳ ಮುನ್ಸೂಚನೆಯನ್ನೂ ನೀಡುತ್ತದೆಯಂತೆ. ಸುನಾಮಿ, ಭೂಕಂಪದಂತಹ ವಿಕೋಪಗಳು ಸಂಭವಿಸುತ್ತದೆ ಎಂದಾದರೆ ಈ ಭೀಮ ಕುಂಡದ ನೀರು ಇದ್ದಕ್ಕಿದ್ದಂತೆಯೇ ಹೆಚ್ಚಾಗುತ್ತದೆಯಂತೆ. ಸಾಮಾನ್ಯವಾಗಿ ಈ ಕೆರೆಯ ನೀರು ಎಲ್ಲಾ ಸಂದರ್ಭದಲ್ಲೂ ಒಂದೇ ಮಟ್ಟದಲ್ಲಿ ಇರುತ್ತದೆ. ಆದರೆ, ಇಂತಹ ವಿಪತ್ತುಗಳ ಮುನ್ಸೂಚನೆ ನೀಡುವ ಸಂದರ್ಭದಲ್ಲಿ ಮೇಲಕ್ಕೆ ಬರುತ್ತದೆ ಎಂಬುದು ಇಲ್ಲಿನ ಸ್ಥಳೀಯರ ಮಾತು. ಜಪಾನ್, ಇಂಡೋನೇಷ್ಯಾದಲ್ಲಿ ಭೂಕಂಪ, ಸುನಾಮಿ ಸಂಭವಿಸಿದಾಗಲೂ ಇಲ್ಲಿನ ನೀರಿನ ಮಟ್ಟ ಏರಿಕೆಯಾಗಿತ್ತಂತೆ.
ಆಳ ನೋಡುವ ಯತ್ನ : ಈ ಭೀಮ ಕುಂಡದ ಆಳ ನೋಡುವ ಪ್ರಯತ್ನ ಆಗಾಗ ನಡೆಯುತ್ತಲೇ ಇರುತ್ತದೆ. ಮುಳುಗು ತಜ್ಞರಿಂದ ಈ ರಹಸ್ಯ ಭೇದಿಸಲು ಸಾಧ್ಯವಾಗದೇ ಇದ್ದಾಗ ಪಂಪ್ ಮೂಲಕ ನೀರು ಹೊರ ತೆಗೆದು ಆಳ ನೀಡುವ ಪ್ರಯತ್ನ ಮಾಡಲಾಗಿತ್ತಂತೆ. ಆದರೆ, ಎಷ್ಟು ನೀರು ಹೊರತೆಗೆದರೂ ಅಷ್ಟೇ ನೀರು ಮತ್ತೆ ತುಂಬುತ್ತಿತ್ತಂತೆ. ಹೀಗಾಗಿ, ಈ ಪ್ರಯತ್ನವೂ ಕೈಗೂಡಿರಲಿಲ್ಲ ಎನ್ನಲಾಗುತ್ತಿದೆ. ಇನ್ನೊಂದೆಡೆ, ಈ ಕೆರೆ ನೇರವಾಗಿ ಸಮುದ್ರದೊಂದಿಗೆ ಸಂಪರ್ಕ ಹೊಂದಿದೆ ಎಂಬ ಮಾತುಗಳೂ ಇವೆ. ಇಲ್ಲಿ ನೀರು ಬರಲು ಒಂದು ಮಾರ್ಗವಿದ್ದು, ಕೆರೆಯಿಂದ ನೀರು ಹೊರಹೋಗಲು ಇನ್ನೊಂದು ದಾರಿ ಇದೆಯಂತೆ. ಹೀಗಾಗಿ, ಎಷ್ಟು ನೀರು ತೆಗೆದರೂ, ಎಷ್ಟೇ ನೀರು ಜಾಸ್ತಿಯಾಗುವ ಸನ್ನಿವೇಶ ಎದುರಾದರೂ ಭೀಮ ಕುಂಡದ ನೀರಿನ ಮಟ್ಟ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಕೆಲವರು ಹೇಳುತ್ತಾರೆ. ಅದೇನೇ ಇದ್ದರೂ ಇದೊಂದು ಅದ್ಭುತ ಜಾಗವಾಗಿದೆ. ಗುಹೆಯ ಒಳಗಿನ ಈ ಸ್ಪಟಿಕ ಜಲ ಎಂತವರನ್ನೂ ಸೆಳೆದು ಬಿಡುತ್ತದೆ.
Source : ಶಿವಾರ್ಪಣಮಸ್ತು ಸದ್ವಿಚಾರ ಸಂಗ್ರಹ