*ಸ್ಪೆಷಲ್ ಕರೆಸ್ಪಾಂಡೆಂಟ್, ಸುಳ್ಯನ್ಯೂಸ್.ಕಾಂ
ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಸುಳ್ಯ ಜೆಡಿಎಸ್ ನಿರ್ಧರಿಸಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಂದು ರಾಜ್ಯ ರಾಜಕೀಯವೂ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಸುಳ್ಯದಲ್ಲಿ ಉಂಟಾಗಿರುವ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಸಂಚಲನ ಮೂಡಿಸಿದೆ. ವಾರ್ಡ್ ಸಂಖ್ಯೆ 17(ಬೋರುಗುಡ್ಡೆ)ರಲ್ಲಿ ಕಾಂಗ್ರೆಸ್ ಗೆ ಬಂಡಾಯವಾಗಿ ಸ್ಪರ್ಧಿಸುವ ಪಕ್ಷೇತರ ಅಭ್ಯರ್ಥಿ ಆರ್.ಕೆ.ಮಹಮ್ಮದ್, ವಾರ್ಡ್ ಸಂಖ್ಯೆ13(ಬೂಡು) ರಲ್ಲಿ ಕಾಂಗ್ರೆಸ್ ಬಂಡಾಯವಾಗಿ ಸ್ಪರ್ಧಿಸುವ ಪಕ್ಷೇತರ ಅಭ್ಯರ್ಥಿ ರಿಯಾಜ್ ಕಟ್ಟೆಕ್ಕಾರ್, 19ನೇ ವಾರ್ಡ್ (ಮಿಲಿಟ್ರಿ ಗ್ರೌಂಡ್) ನಲ್ಲಿ ಬಿಜೆಪಿ ಬಂಡಾಯವಾಗಿ ಸ್ಪರ್ಧಿಸುವ ಪಕ್ಷೇತರ ಅಭ್ಯರ್ಥಿ ಮೋಹಿನಿ ಮತ್ತು 6ನೇ ವಾರ್ಡ್(ಬೀರಮಂಗಲ) ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಶಾರಿಕ್ ಡಿ.ಎಂ. ಅವರನ್ನು ಜೆಡಿಎಸ್ ಬೆಂಬಲಿಸಲಿದೆ. ಈ ಕುರಿತು ಜೆಡಿಎಸ್ ತಾಲೂಕು ಅಧ್ಯಕ್ಷರ ಅಧಿಕೃತ ಪ್ರಕಟಣೆ ಸುಳ್ಯ ನ್ಯೂಸ್.ಕಾಂಗೆ ಲಭಿಸಿದೆ.
ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಇಲ್ಲ:
ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ 17ನೇ ವಾರ್ಡ್ ಬೋರುಗುಡ್ಡೆ ಯಿಂದ ಸ್ಪರ್ಧಿಸುತ್ತಿರುವ ಅಬ್ದುಲ್ ರಹಿಮಾನ್ ಫ್ಯಾನ್ಸಿ ಇವರಿಗೆ ಜೆಡಿಎಸ್ ಬೆಂಬಲ ನೀಡುತ್ತಿಲ್ಲ. ಇಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆರ್.ಕೆ.ಮಹಮ್ಮದ್ ಅವರಿಗೆ ಪಕ್ಷ ಅಧಿಕೃತವಾಗಿ ಬೆಂಬಲ ಘೋಷಿಸಿದೆ. ಅಬ್ದುಲ್ ರಹಿಮಾನ್ ಫ್ಯಾನ್ಸಿ ಅವರನ್ನು ಕಣದಿಂದ ನಿವೃತ್ತಿ ಹೊಂದಲು ಪಕ್ಷ ಸೂಚಿಸಿದೆ ಎಂದು ಈ ಕುರಿತು ಪಕ್ಷವು ನೀಡುವ ಸ್ಪಸ್ಟನೆ. 5ನೇ ವಾರ್ಡ್ ಜಯನಗರದಿಂದ ಸುರೇಶ್ ಕಾಮತ್ ಮತ್ತು 17ನೇ ವಾರ್ಡ್ ನಿಂದ ಅಬ್ದುಲ್ ರಹಿಮಾನ್ ಫ್ಯಾನ್ಸಿ ಜೆಡಿಎಸ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಬಳಿಕ ನ.ಪಂ.ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿ ನಾಮಪತ್ರ ಹಿಂಪಡೆಯಲು ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು. ಸುರೇಶ್ ಕಾಮತ್ ನಾಮಪತ್ರ ಹಿಂಪಡೆದರೂ ಅಬ್ದುಲ್ ರಹಿಮಾನ್ ನಾಮಪತ್ರ ಹಿಂಪಡೆಯದೆ ಕಣದಲ್ಲಿ ಉಳಿದಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ.
ಮುರಿದು ಬಿದ್ದ ಮೈತ್ರಿ ಪ್ರಯತ್ನ.
ರಾಜ್ಯದಲ್ಲಿ ಇರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಜಾಡು ಹಿಡಿದು ಸ್ಥಳೀಯ ಸಂಸ್ಥೆಯಲ್ಲಿಯೂ ಮೈತ್ರಿಯ ಪ್ರಯತ್ನ ನಡೆದಿತ್ತು. ಈ ಕುರಿತು ಎರಡೂ ಪಕ್ಷಗಳ ಮುಖಂಡರ ಮಧ್ಯೆ ಮಾತುಕತೆಯೂ ನಡೆದಿತ್ತು. ಮೂರು ಸ್ಥಾನಗಳ ಬೇಡಿಕೆಯನ್ನು ಜೆಡಿಎಸ್ ಮುಂದಿಟ್ಟಿತ್ತು. ನಾಮಪತ್ರ ಸಲ್ಲಿಸಿದ ಬಳಿಕ ಎರಡನೇ ಹಂತದ ಮಾತುಕತೆ ನಡೆಸಿ ಸ್ಥಾನ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಜೆಡಿಎಸ್ ಬೇಡಿಕೆ ಇಟ್ಟಿದ್ದ ವಾರ್ಡ್ ಗಳು ಕಾಂಗ್ರೆಸ್ ಗೂ ಪ್ರತಿಷ್ಠೆಯ ಕಣವಾಗಿತ್ತು. ಬಳಿಕ ಯಾವುದೇ ಮಾತುಕತೆ ನಡೆಯದೆ ಮೈತ್ರಿ ಮುರಿದು ಬಿತ್ತು ಮತ್ತು ಜೆಡಿಎಸ್ ಚುನಾವಣಾ ಕಣದಿಂದಲೇ ಹಿಂದೆ ಸರಿದಿತ್ತು.
ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ:
ಮಿತ್ರ ಪಕ್ಷವಾದ ಕಾಂಗ್ರೆಸ್ ನಗರ ಪಂಚಾಯತ್ ಚುನಾವಣೆಯಲ್ಲಿ ವಚನ ಮುರಿದು ದೊಡ್ಡಣ್ಣನ ರೀತಿಯಲ್ಲಿ ವರ್ತಿಸಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ವ್ಯವಸ್ಥೆಯನ್ನು ಬದಲಿಸಲು ಇಚ್ಛಾಶಕ್ತಿ ಪ್ರದರ್ಶಿಸದ ಕಾಂಗ್ರೆಸ್ ತನ್ನ ಪ್ರಭಾವಿ ನಾಯಕರಿಗೆ ಶರಣಾಗಿ ತನ್ನ ಸೋಲಿಗೆ ತಾವೇ ಮುನ್ನುಡಿ ಬರೆದಿದೆ.
ಕಳೆದ ಮೂರು ಬಾರಿ ನಗರ ಪಂಚಾಯತ್ ಆಡಳಿತ ನಡೆಸಿದ ಬಿಜೆಪಿಯ ದುರಾಡಳಿತದಿಂದ ಜನರು ಬೇಷತ್ತಿದ್ದಾರೆ. ಮೂಲಭೂತ ಅವಶ್ಯಕತೆಗಳಾದ ನೀರು, ಬೆಳಕು, ರಸ್ತೆ ನಿರ್ವಹಣೆ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಸಾರ್ವಜನಿಕ ಆರೋಗ್ಯ, ಶುಚಿತ್ವಕ್ಕೆ ಗಮನ ಹರಿಸಿಲ್ಲ, ಬಡವರಿಗೆ ನಿವೇಶನ, ವಸತಿ, ಶೌಚಾಲಯವನ್ನು ನೀಡಿಲ್ಲ ಎಂದು ವಾಗ್ದಾಳಿ ನಡೆಸಿದೆ. ಬದ್ಧತೆ, ಪಾರದರ್ಶಕತೆ, ಶುದ್ಧ ಹಸ್ತದ ನೈತಿಕ ಬಲ ಹೊಂದಿದ ಕ್ರಿಯಾಶೀಲರು, ಸೇವಾ ಹುಮ್ಮಸ್ಸು ಮತ್ತು ಆಸಕ್ತಿ ಇರುವ ಸದಸ್ಯರ ತಂಡ ನಗರಾಡಳಿತದ ಜವಬ್ದಾರಿ ಹೊರಬೇಕಾಗಿದೆ. ಈ ನಿಟ್ಟಿನಲ್ಲಿ ಆ ರೀತಿಯ ಹುಮ್ಮಸ್ಸು ಇರುವ ಅಭ್ಯರ್ಥಿಗಳಿಗೆ ಜೆಡಿಎಸ್ ಬಾರಿ ಬೆಂಬಲ ನೀಡಲಿದೆ ಎಂದು ಜೆಡಿಎಸ್ ಅಧ್ಯಕ್ಷ ದಯಾಕರ ಆಳ್ವ ತಿಳಿಸಿದ್ದಾರೆ.
ಈ ಮಧ್ಯೆ ಉಳಿದ ವಾರ್ಡ್ ಗಳಲ್ಲಿ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ.