ಸುಳ್ಯ :ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ನಗರ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರ ಬಂದ ಬಳಿಕ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್ ಮೂಲಕ ಕೆ.ಪಿ.ಸಿ.ಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ. ರಾಜಿನಾಮೆ ನೀಡಿರುವುದನ್ನು ಜಯಪ್ರಕಾಶ್ ರೈ ಸುಳ್ಯ ನ್ಯೂಸ್.ಕಾಂ ಗೆ ಖಚಿತಪಡಿಸಿದ್ದಾರೆ.
ವಿದೇಶ ಪ್ರವಾಸ ಕೈಗೊಳ್ಳುವುದರಿಂದ ಮೂರು ತಿಂಗಳ ಕಾಲ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿರುವುದಾಗಿ ಜಯಪ್ರಕಾಶ್ ರೈ ಹೇಳಿದ್ದಾರೆ. ನಗರ ಪಂಚಾಯತ್ ಚುನಾವಣಾ ಸೋಲಿನ ಹೊಣೆ ಹೊತ್ತು ರಾಜಿನಾಮೆ ನೀಡಿಲ್ಲ. ವೈಯುಕ್ತಿಕ ಕಾರಣಗಳಿಂದ ರಾಜಿನಾಮೆ ನೀಡಿದ್ದೇನೆ. ಚುನಾವಣಾ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡುವುದಾದರೆ ಅಧ್ಯಕ್ಷರು ಒಬ್ಬರೆ ರಾಜಿನಾಮೆ ನೀಡುವುದಲ್ಲ ಎಲ್ಲರೂ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕಾಗುತ್ತದೆ. ಸೋಲಿಗೆ ಎಲ್ಲರೂ ಹೊಣೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಆಂತರಿಕ ಸಮಸ್ಯೆ ಕಾರಣವೇ.?
ವಿದೇಶ ಪ್ರವಾಸದ ಕಾರಣ ನೀಡಿ ಜಯಪ್ರಕಾಶ್ ರೈ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರೂ ಪಕ್ಷದಲ್ಲಿನ ಕೆಲವೊಂದು ಆಂತರಿಕ ಸಮಸ್ಯೆಯೂ ರಾಜಿನಾಮೆ ಸಲ್ಲಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ. ನಗರ ಪಂಚಾಯತ್ ಚುನಾವಣೆಯಲ್ಲಿ ಎಂಟರಿಂದ ಹತ್ತು ಸ್ಥಾನಗಳವರೆಗೆ ಗೆಲ್ಲುವ ವಿಶ್ವಾಸ ಇದ್ದರೂ ಸೀಟ್ ಹಂಚಿಕೆಯಲ್ಲಿನ ಅಸಮಾಧಾನ, ಆಂತರಿಕ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ಗೆ ಕೇವಲ ನಾಲ್ಕು ಸೀಟ್ ಮಾತ್ರ ಗೆಲ್ಲಲು ಸಾಧ್ಯವಾಗಿದೆ.
ಜಯಪ್ರಕಾಶ್ ರೈ ಅಧ್ಯಕ್ಷರಾದ ಬಳಿಕ ಸುಳ್ಯ ಕಾಂಗ್ರೆಸ್ ಗೆ ಚೈತನ್ಯ ತುಂಬುವ ಪ್ರಯತ್ನವನ್ನು ನಿರಂತರ ನಡೆಸುತ್ತಾ ಬಂದರೂ ಪಕ್ಷವನ್ನು ಚುನಾವಣಾ ಗೆಲುವಿನ ಹಾದಿಗೆ ತರಲು ಸಾಧ್ಯವಾಗಿಲ್ಲ. ಇದಕ್ಕೆ ಕೆಲವು ನಾಯಕರ ಅಸಹಕಾರವೂ ಕಾರಣ ಎಂದು ಹೇಳಲಾಗುತ್ತಿದೆ.