ಹಲವು ವಷಗಳಿಂದ ಇಲ್ಲಿನ ಜನರು ಸಂಕಷ್ಟ ಪಡುತ್ತಿದ್ದು, ಮಳೆಗಾಲ ಬಂತೆಂದರೆ ಹೊಳೆ ದಾಟಲಾಗದೆ ಸಂಪರ್ಕವೇ ಕಷ್ಟವಾಗಿತ್ತು. ಅಂತಹ ಸಂಕಷ್ಟದ ಪರಿಸ್ಥಿತಿ ಬಿಳಿನೆಲೆ ಗ್ರಾಮದ ಉದ್ಮಯ ಎಂಬಲ್ಲಿ ಕಂಡುಬಂದಿತ್ತು. ಹೀಗಾಗಿ ಈ ಭಾಗದ ಪುತ್ತಿಲ, ಬೈಲಡ್ಕ ಮೊದಲಾದ ಪ್ರದೇಶದ ಜನರಿಗೆ ಸಂಕಷ್ಟವಾಗಿತ್ತು. ಇದೀಗ ಸುಳ್ಯ ಶಾಸಕ, ಸಚಿವ ಎಸ್ ಅಂಗಾರ ಅವರ ಶಿಫಾರಿಸ್ಸಿನ ಮೇರೆಗೆ ಶಾಲಾ ಸಂಪರ್ಕ ಸೇತುವೆ ಯೋಜನೆಯಡಿಯಲ್ಲಿ ಸೇತುವೆ ನಿರ್ಮಾಣವಾಗಲಿದೆ. ಹಲವು ವರ್ಷಗಳಿಂದ ಜನರು ಸಲ್ಲಿಸುತ್ತಿದ್ದ ಬೇಡಿಕೆಗೆ ಈಗ ಈಡೇರಿದೆ, ಸ್ಥಳೀಯ ಜನಪ್ರತಿನಿಧಿಗಳೂ ಇದಕ್ಕಾಗಿ ಸತತ ಪ್ರಯತ್ನ ಮಾಡಿದ್ದರು.
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ ಹರಿಯುವ ಭಾಗ್ಯ ಹೊಳೆಗೆ ಉದ್ಮಯ ಎಂಬಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿಯಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣವಾಗಲಿದೆ. ಮುಂದಿನ ಎರಡು ತಿಂಗಳಲ್ಲಿ ಸೇತುವೆ ನಿರ್ಮಾಣವಾಗಿ ಲೋಕಾರ್ಪಣೆಯಾಗಲಿದೆ. ಆ ಮೂಲಕ ಹಲವು ವರ್ಷಗಳ ಈ ಭಾಗದ ಜನರ ಬೇಡಿಕೆ ಈಡೇರುತ್ತಿದೆ. ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸೇತುವೆ ಮಳೆಗಾಲದ ಮುನ್ನವೇ ರಚನೆಯಾಗಬೇಕು ಎನ್ನುವ ನೆಲೆಯಲ್ಲಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.
ಮಳೆಗಾಲದಲ್ಲಿ ಇಲ್ಲಿನ ಪುತ್ತಿಲ ಬೈಲಡ್ಕ ಭಾಗದ ಜನರಿಗೆ ಸಂಕಷ್ಟ, ಭಾಗ್ಯ ಹೊಳೆಯಲ್ಲಿ ನೀರು ತುಂಬಿ ಹರಿಯುವ ಕಾರಣ ಸೇತುವೆಯಿಲ್ಲದೆ ದಾಟುವುದೇ ಸಾಹಸದ ಕೆಲಸವಾಗಿತ್ತು. ಹೀಗಾಗಿ ಮಳೆಗಾಲದಲ್ಲಿ ಹೊಳೆಯನ್ನು ದಾಟಲು ಸ್ಥಳಿಯರೇ ಕಾಲು ಸಂಕ ನಿರ್ಮಿಸುತ್ತಿದ್ದರು, ಅದುವೇ ಆಧಾರವಾಗಿತ್ತು, ಶಾಲಾ ಮಕ್ಕಳಿಗಂತೂ ಭಾರೀ ಮಳೆ ಇದ್ದರೆ ಹೊಳೆ ದಾಟಿ ಸಾಗಲು ಭಯದ ವಾತಾವರಣ ಇತ್ತು. ಹೀಗಾಗಿ ಇಲ್ಲೊಂದು ಸರ್ವಋತು ಸೇತುವೆಯಾಗಬೇಕು ಎಂದು ಈ ಭಾಗದ ಜನತೆ ಜನಪ್ರತಿನಿಧಿಗಳಲ್ಲಿ ನಿರಂತರವಾಗಿ ಹೇಳುತ್ತಲೇ ಇದ್ದರು. ವಿವಿಧ ಮಾಧ್ಯಮಗಳು ಕೂಡಾ ಗಮನ ಸೆಳೆದಿದ್ದವು. ಇದೀಗ ಸುಳ್ಯ ಶಾಸಕ, ಸಚಿವ ಎಸ್ ಅಂಗಾರ ಅವರ ಶಿಫಾರಿಸ್ಸಿನ ಮೇರೆಗೆ ಶಾಲಾ ಸಂಪರ್ಕ ಸೇತುವೆ ಯೋಜನೆಯಡಿಯಲ್ಲಿ ಸೇತುವೆ ನಿರ್ಮಾಣವಾಗಲಿದೆ. ಇದರ ಹಿಂದೆ ಸ್ಥಳೀಯ ಜನಪ್ರತಿನಿಧಿಗಳೂ ಕೆಲಸ ಮಾಡಿದ್ದರು.