ರಾಮನಗರ ಜಿಲ್ಲೆ ಕನಕಪುರದ ಮರಸಪ್ಪ ರವಿ ಎಂಬುವರು ಹಕ್ಕಿಗಳ ರಕ್ಷಣೆ ಅದರಲ್ಲೂ ಗುಬ್ಬಚ್ಚಿ ರಕ್ಷಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಮರಸಪ್ಪ ಅವರು ತಮ್ಮ ಪುಟ್ಟ ಮನೆಯ ಮುಂಭಾಗದ ಮರದಲ್ಲಿ ರಂಧ್ರಗಳನ್ನು ಕೊರೆದು ಗುಬ್ಬಚ್ಚಿಗಳು ನೆಲೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಪಕ್ಷಿ ಪ್ರೇಮಿ ಮರಸಪ್ಪ ರವಿ ಅವರು ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳ ಉಳಿವಿಗಾಗಿ ಈ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ.
ನಿತ್ಯ ಪಕ್ಷಿಗಳಿಗೆ ಧಾನ್ಯ, ಕಾಳುಗಳನ್ನು ಹಾಕಿ ನೀರು ಒದಗಿಸುವ ಮೂಲಕ ಪಕ್ಷಿಗಳನ್ನು ಪೋಷಿಸಲಾಗುತ್ತಿದೆ. ಮನೆಯ ಸುತ್ತಲು ಸ್ಥಳದಲ್ಲಿ ಹತ್ತಾರು ಬಗೆಯ ಮರ, ಹೂವಿನ ಗಿಡಗಳನ್ನು ಬೆಳೆಸಿದ್ದಾರೆ.
ಗುಬ್ಬಿ, ಗುಬ್ಬಚ್ಚಿ, ಕಾಜಾಣ, ಕೋಗಿಲೆ, ಗಿಣಿ ಹಾಗೂ ಅಪರೂಪದ ಸನ್ ಬರ್ಡ್ ಪಕ್ಷಿಗಳು ಇವರ ಕಿರು ಉದ್ಯಾನಕ್ಕೆ ನಿತ್ಯ ಆಗಮಿಸುತ್ತವೆ. ಪರಿಸರ ಸಂರಕ್ಷಣೆಯ ಬಗ್ಗೆಯೂ ಅಪಾರ ಆಸಕ್ತಿ ಹೊಂದಿರುವ ಮರಸಪ್ಪ ರವಿ ಅವರು ಪ್ರತಿ ವರ್ಷ ಹತ್ತಾರು ಶಾಲೆಗಳಿಗೆ ಹಾಗೂ ಹಳ್ಳಿಗಳಿಗೆ ಸಸಿಗಳನ್ನು ವಿತರಿಸಿ, ಗಿಡಗಳನ್ನು ಬೆಳೆಸಲು ಉತ್ತೇಜನ ನೀಡುತ್ತಿದ್ದಾರೆ.
ಕನಕಪುರ ಸ್ಥಳೀಯ ಲಯನ್ಸ್ ಸಂಸ್ಥೆಯ ಪರಿಸರ ಸಮಿತಿ ಅಧ್ಯಕ್ಷರಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಮರಸಪ್ಪರವಿ, ಹತ್ತಾರು ಹಳ್ಳಿಯಲ್ಲಿ ಜಗತಿಕಟ್ಟೆ ನಿರ್ಮಿಸಿ ಮಾದರಿಯಾಗಿದೆ.