ಇಲ್ಲಿ ಹಕ್ಕಿಗಳು ಬಂದು ಗೂಡುಕಟ್ಟಿವೆ. ರಾಜ್ಯದ ವಿವಿದೆಡೆ ಇರುವ, ನಮ್ಮ ನಡುವೆಯೇ ಹಾರಾಡುವ ಹಕ್ಕಿಗಳು ಇಲ್ಲಿ ಕಾಣುತ್ತವೆ. ಪುತ್ತೂರಿನ ಪರ್ಪುಂಜದ ಸೌಗಂಧಿಕಾದಲ್ಲಿ ಈಗ ಹಕ್ಕಿಗಳ ಲೋಕ ಇದೆ. ನವೆಂಬರ್ 21 ರ ವರೆಗೆ ಈ ಹಕ್ಕಿಗಳು ಇಲ್ಲಿರಲಿದೆ. ಅಂದ ಹಾಗೆ ಇದು ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ಕ್ಲಿಕ್ಕಿಸಿರುವ ಹಕ್ಕಿಗಳ ಚಿತ್ರ ಪ್ರದರ್ಶನ…!
ಪುತ್ತೂರಿನ ಪರ್ಪುಂಜ ಬಳಿಕ ಸೌಗಂಧಿಕಾ ವನವು ಪರಿಸರ ಲೋಕ. ವಿವಿಧ ಬಗೆಯ ಗಿಡಗಳು ಇಲ್ಲಿ ಮಾರಾಟ ಹಾಗೂ ಪ್ರದರ್ಶನ ಇರುತ್ತದೆ. ಅದರ ಜೊತೆಗೇ ಇಲ್ಲಿ ಕಲೆಯ ಆರಾಧನೆ ನಡೆಯುತ್ತಿದೆ. ಪರಿಸರಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆ, ಕೃಷಿ ಸಂಬಂಧಿಕ ಕಾರ್ಯಾಗಾರ, ಕಲೆ, ನಾಟಕ ಹೀಗೇ ವಿವಿಧ ಚಟುವಟಿಕೆಗಳೂ ಇಲ್ಲಿ ನಡೆಯುತ್ತದೆ. ಚಂದ್ರ ಅವರ ನೇತೃತ್ವದಲ್ಲಿ ಅವರ ಗೆಳೆಯರ ತಂಡ ಸದಾ ಇಲ್ಲಿ ಕ್ರಿಯಾತ್ಮಕ ಚಟುವಟಿಕೆ ನಡೆಸುತ್ತಿದ್ದಾರೆ. ಈ ಬಾರಿ ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ತೆಗೆದಿರುವ ಹಕ್ಕಿಗಳ ಚಿತ್ರ ಪ್ರದರ್ಶನ ನಡೆಯುತ್ತಿದೆ. ನವೆಂಬರ್ 21 ರ ವರೆಗೆ ಈ ಪ್ರದರ್ಶನ ನಡೆಯಲಿದೆ. ಅದ್ಭುತ ಚಿತ್ರಗಳ ಲೋಕ ಇಲ್ಲಿದ್ದು ಸುಮಾರು 40 ಹಕ್ಕಿಗಳ ಚಿತ್ರ ಇಲ್ಲಿದೆ.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ, ಹಕ್ಕಿಗಳು ಇಲ್ಲದ ಜಗತ್ತು ಹೇಗಿರಬಹುದು ? ಊಹಿಸಲೂ ಕಷ್ಟವಿದೆ. ಹಕ್ಕಿಗಳ ಕಲರವ ಸದಾ ಇದ್ದರೆ ಮಾತ್ರವೇ ಪರಿಸರವೂ ಸಹ್ಯ. ಈಗಾಗಲೇ ಗುಬ್ಬಚ್ಚಿಯಂತಹ ಹಕ್ಕಿಗಳು ಮಾಯವಾಗುತ್ತಿವೆ, ಇನ್ನೂ ಅನೇಕ ಹಕ್ಕಿಗಳೂ ಕಾಣೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಹಕ್ಕಿಗಳ ಲೋಕವನ್ನು ಇಲ್ಲಿ ಶಿವಸುಬ್ರಹ್ಮಣ್ಯ ಸೃಷ್ಟಿಸಿದ್ದಾರೆ. ನಾವೆಲ್ಲರೂ ಇದನ್ನು ನೋಡಿ ನೈಜ ಹಕ್ಕಿಗಳ ರಕ್ಷಣೆಯ ಜವಾಬ್ದಾರಿ ಹೊರಬೇಕು ಎಂದರು.ʼ
ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ, ಹಕ್ಕಿಗಳ ವೀಕ್ಷಣೆಯ ಆಸಕ್ತಿಯನ್ನು ಮಕ್ಕಳಿಗೆ ಕಲಿಸಬೇಕು. ಮಕ್ಕಳಲ್ಲಿ ಹಕ್ಕಿ ಪ್ರೀತಿ ಹೆಚ್ಚಾದಷ್ಟು ಮುಂದೆ ಪರಿಸರವೂ ಉಳಿಯಲೂ, ಬೆಳೆಯಲೂ ಸಾಧ್ಯವಿದೆ ಎಂದರು. ಈ ದೇಶದ ಎಲ್ಲಾ ಹಕ್ಕಿಗಳೂ ಕೃಷಿಕ ಸ್ನೇಹಿಯಾಗಿವೆ. ಹಕ್ಕಿಗಳು ಹಣ್ಣುಗಳನ್ನು ತಿಂದು ಹಿಕ್ಕೆ ಹಾಕುವಲ್ಲಿ ಗಿಡಗಳೂ ಬೆಳೆಯಲು ಸಾಧ್ಯವಿದೆ. ಹೀಗಾಗಿ ಹಕ್ಕಿಗಳು ಹೆಚ್ಚಾದಷ್ಟು ಗೊತ್ತಿಲ್ಲದೆಯೇ ಪರಿಸರ ಬೆಳೆಯುತ್ತದೆ ಎಂದರು.
ಶೋಭಾ ಪುತ್ತೂರು ಸ್ವಾಗತಿಸಿ, ವಿನಿತಾ ಶೆಟ್ಟಿ ಮಾಣಿ ವಂದಿಸಿದರು. ಸೌಗಂಧಿಕಾದ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಚಿತ್ರ ಪ್ರದರ್ಶನದ ತಯಾರಿಗೆ ಮಾಧವ, ಕಿರಣ್ ಮಯ್ಯ, ವಿನಾಯಕ ನಾಯಕ್, ರಾಜೇಶ್ ಶರ್ಮ, ಅನ್ನಪೂರ್ಣ ರಾವ್, ಶೋಭಾ , ಅಂಜಲಿ , ಪೃಥ್ವಿ, , ವಿದ್ಯಾ, ಅಜಿತ್ ರೈ ಸಹಕರಿಸಿದ್ದರು.
ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರ ಮೂರನೇ ಕಣ್ಣು ಸೆರೆ ಹಿಡಿದ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ ನೋಡುಗರಿಗೆ ಆಸಕ್ತಿ ಹೆಚ್ಚಿಸಿತು. ಕೆಲವು ಹಕ್ಕಿಗಳ ಬಗ್ಗೆ ಅವರು ವಿವರಿಸುತ್ತಿದ್ದುದು ಕೇಳಿ ಅಚ್ಚರಿ ಪಟ್ಟರು. ” ಒಂದು ಹಕ್ಕಿಯ ಚಿತ್ರ ತೆಗೆಯಲು ಸುಮಾರು 15 ದಿನಗಳ ಕಾಲ ಸತತವಾಗಿ ನಾನು ಹೋಗಿದ್ದೆ. ಕೊನೆಗೊಂದು ದಿನ ಹಕ್ಕಿಯೇ ಬಂದು ನನ್ನ ಹೆಗಲ ಮೇಲೆ ಕೂತಿತು. ಆ ದಿನ ನಾನು ಸಂತಸಪಟ್ಟೆ ” ಎಂದಾಗ ಸಭೆಯಲ್ಲಿದ್ದ ಅಷ್ಟೂ ಮಂದಿ ಹುಬ್ಬೇರಿಸಿದರು.
ಹಕ್ಕಿಯ ಚಿತ್ರ ತೆಗೆಯುವುದು ಅಂದರೆ ಅದೊಂದು ತಪಸ್ಸು. ಧ್ಯಾನಸ್ಥರಾಗಿ ಕುಳಿತುಕೊಳ್ಳಬೇಕು, ಹಕ್ಕಿ ಬರುವವರೆಗೆ ಕಾಯಬೇಕು, ಕಾದರೂ ಗಡಿಬಿಡಿ ಮಾಡಬಾರದು, ಇನ್ನೊಮ್ಮೆ ಬರಬೇಕು… ಹೀಗೇ ಅದೊಂದು ಧ್ಯಾನಸ್ಥ ಮನಸ್ಸು. ಈ ಬಗ್ಗೆ ಹೇಳಿದ ಶಿವಸುಬ್ರಹ್ಮಣ್ಯ, ” ಒಂದು ಹಕ್ಕಿಯ ಫೋಟೊ ತೆಗೆಯುವುದಕ್ಕೆ ತಿಂಗಳುಗಟ್ಟಲೆ ಹೋಗಿದ್ದೆ, ಮನೆಯಲ್ಲಿ ಸುಳ್ಳು ಹೇಳಿಯೂ ಹೋಗಿದ್ದಿದೆ, ಒಂದು ಹಕ್ಕಿಯ ಫೋಟೊ ತೆಗೆಯಲು 45 ಸಾವಿರ ಖರ್ಚು ಮಾಡಿದ್ದಿದೆ ” ಎಂದು ವಿವರಿಸಿದರು.
ಕನ್ನಡಪ್ರಭ, ಹೊಸ ದಿಗಂತ, ಉದಯವಾಣಿ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಶಿವಸುಬ್ರಮಣ್ಯ ಕಲ್ಮಡ್ಕ ಅವರದು ಮೂರು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಕನ್ನಡ ಪತ್ರಿಕೋದ್ಯಮದಲ್ಲಿದ್ದವರು. ಇವರು ಸಂಪಾದಕರಾಗಿದ್ದ ಸಂದರ್ಭದಲ್ಲಿ ವಿವಿಧ ಪತ್ರಿಕೆಗಳ ಮುಖಪುಟದಲ್ಲಿ ಪಕ್ಷಿಗಳ, ವನ್ಯ ಜೀವಿಗಳ ಚಿತ್ರಗಳು ರಾರಾಜಿಸುತ್ತಿದ್ದವು. ” ಹಕ್ಕಿಗಳ ಚಿತ್ರ ತೆಗೆಯಬೇಕು ಎಂದಾಕ್ಷಣ ಮಕ್ಕಳಿಗೂ ಕ್ಯಾಮರಾ ತೆಗೆದುಕೊಡಬೇಡಿ. ಒಂದಷ್ಟು ಕಾಲ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಲಿ. ನಂತರ ಫೋಟೊ ತೆಗೆಯುವಂತೆ ಕಲಿಸಿಕೊಡಿ ಎನ್ನುವ ಶಿವಸುಬ್ರಹ್ಮಣ್ಯ, ಸುಮಾರು 10 ಲಕ್ಷದಷ್ಟು ಹಕ್ಕಿಗಳ ಚಿತ್ರವನ್ನುತೆಗೆಯಲು ಖರ್ಚು ಮಾಡಿದ್ದೇನೆ, ಕ್ಯಾಮರಾ, ಟೆಲಿಲೆನ್ಸ್ ಸೇರಿದಂತೆ ಇತ್ಯಾದಿಗಳು ಖರ್ಚಾಗುತ್ತವೆ. ಆದರೆ ಒಂದು ರೂಪಾಯಿಯ ಆದಾಯವೂ ಅದರಲ್ಲಿಲ್ಲ. ಅದೊಂದು ಆಸಕ್ತಿ ಹಾಗೂ ಹವ್ಯಾಸ ಅಷ್ಟೇ. ಅದರಲ್ಲಿ ಖುಷಿ ಸಿಗುತ್ತದೆ” ಎನ್ನುತ್ತಾ ಅವರು.
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…