ಬಿಜೆಪಿಯಲ್ಲಿ ಒಬ್ಬ ಕಾರ್ಯಕರ್ತನಿಗೂ ಅವಕಾಶ ಇದೆ ಎಂಬ ದೊಡ್ಡ ಸಂದೇಶವನ್ನು ವರಿಷ್ಠರು ಕರ್ನಾಟಕಕ್ಕೆ ರವಾನೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಐದು ಹಾಲಿ ಶಾಸಕರ ಬದಲು ನಾಲ್ಕು ಹೊಸ ಮುಖಕ್ಕೆ ಅವಕಾಶ ಕೊಡುವ ಮೂಲಕ ಇದು ಕಾರ್ಯಕರ್ತರ ಪಕ್ಷ ಎಂದು ಕಾಂಗ್ರೆಸ್‌ಗೂ ಟಾಂಗ್ ನೀಡಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸುಕುಮಾರ ಶೆಟ್ಟಿಗೆ ಜಾಗಕ್ಕೆ 39 ವರ್ಷದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರಿಗೆ ಬಿಜೆಪಿ ಮಣೆ ಹಾಕಿದೆ. ಪಕ್ಷದ ಪ್ರಮುಖರು, ಸಂಘ ಪರಿವಾರದ ಹಿರಿಯರು, ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿರುವ ಗುರುರಾಜ್ ಗಂಟಿಹೊಳೆ ಹೆಸರು ಈಗ ಬೈಂದೂರು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಗುರುರಾಜ್ ಅವರ ಹುಟ್ಟೂರು ಬೈಂದೂರು ತಾಲೂಕು ಉಪ್ಪುಂದದ ಗಂಟಿಹೊಳೆ. ಗುರುರಾಜ್ ಶೆಟ್ಟಿ ಆರಂಭಿಕ ಶಿಕ್ಷಣವನ್ನು ಪೂರೈಸುವಾಗಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಪ್ಪುಂದ ನಿತ್ಯ ಶಾಖೆಗೆ ಹೋಗುತ್ತಿದ್ದರು. ನಂತರ ಉನ್ನತ ಶಿಕ್ಷಣಕ್ಕಾಗಿ ಮಂಗಳೂರಿನತ್ತ ಮುಖ ಮಾಡಿ ಸಂಘನಿಕೇತನದಲ್ಲಿ ಬೆಳೆದರು. ಪತ್ರಿಕೋದ್ಯಮದಲ್ಲಿ ಎಂ.ಎ ಪೂರೈಸಿದ ನಂತರ 10 ವರ್ಷಗಳ ಕಾಲ ಆರ್‌ಎಸ್‌ಎಸ್‌ನ ಪೂರ್ಣಾವಧಿ ಕಾರ್ಯಕರ್ತರಾಗಿ ಓಡಾಡಿದರು.
ಈ ದೇಶಕ್ಕಾಗಿ ಕೆಟ್ಟದನ್ನು ನಾನೇ ಮೆಟ್ಟಿ ನಿಲ್ಲುತ್ತೇನೆ ಎಂದು ಶಪಥ ಮಾಡಿದ ಗುರುರಾಜ್ ಶೆಟ್ಟಿ ಗಂಟಿಹೊಳೆ ಕಾಲಿಗೆ ಚಪ್ಪಲಿ ಹಾಕುವುದಿಲ್ಲ. ಸಂಘಟನೆ ಒಳಗೆ ಬರಿಗಾಲ ಸಂತ ಎಂದೇ ಫೇಮಸ್ ಆಗಿದ್ದಾರೆ. ಪೂರ್ಣಾವಧಿ ಕಾರ್ಯಕರ್ತನಾಗಿ ಮಡಿಕೇರಿಯ ಉಳಿದುಕೊಂಡಿದ್ದ ಇವರು ನಂತರ ಬೆಳ್ತಂಗಡಿಗೆ ಬಂದು, ಸಂಘದ ಕಾರ್ಯಕ್ಕೆ ಮುಡಿಪಾಗಿಟ್ಟರು. ಸಂಘಟನೆಯಲ್ಲಿ ತಾಲೂಕು, ಜಿಲ್ಲಾ ಜವಾಬ್ದಾರಿಗಳು ನಿಭಾಯಿಸಿದ್ದಾರೆ. ನಾಗಪುರದಲ್ಲಿ ಒಟಿಸಿ ಕ್ಯಾಂಪ್ ಮುಗಿಸಿ ಶಿಕ್ಷಣ ಪೂರೈಸಿ ಬಂದ ಗುರುರಾಜ್ ಗೆ 3 ವರ್ಷ ಉಡುಪಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ 3 ವರ್ಷ ಬಿಜೆಪಿ ಉಪಾಧ್ಯಕ್ಷ ಹುದ್ದೆ ಸಿಕ್ಕಿತ್ತು.
ಈ ಮಧ್ಯೆ ಉದ್ಯಮದತ್ತ ಹೊರಳಿ ನೂರಾರು ಜನರಿಗೆ ಉದ್ಯೋಗ ಕೊಟ್ಟರು. ಉದ್ಯಮ ವಿಸ್ತರಿಸಲು ಪ್ರಯತ್ನಿಸಿ ಸೋತರು. ಮಣಿಪುರ ಭಾಗದ ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆಯಿತ್ತು. ಆ ಮಕ್ಕಳಿಗೆ ಹಣವಿಲ್ಲ ಎಂಬ ಕಾರಣಕ್ಕೆ ವಿದ್ಯಾಭ್ಯಾಸ ನಿಲ್ಲಿಸಬೇಡಿ ಎಂದು ಭರವಸೆ ನೀಡಿದರು. ಆ ಮಕ್ಕಳನ್ನು ಬೈಂದೂರಿಗೆ ಕರೆತಂದು ಮಣಿಪುರ ನೂರಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ.
ಎರಡು ಪುಸ್ತಕ ಬರೆದಿದ್ದಾರೆ. ನೂರಾರು ಆರ್‌ಎಸ್‌ಎಸ್ ಶಾಖೆ ತೆರೆದು ಸಂಘಟನೆ ಮಾಡಿದ್ದಾರೆ. 2013 ಮತ್ತು 2018ರಲ್ಲಿಯೇ ಶಾಸಕರಾಗುವ ಆಯ್ಕೆಗಳು ಇತ್ತು. ಪಕ್ಷ ಸಂಘಟನೆಯೇ ಎಲ್ಲಕ್ಕಿಂತ ಮಿಗಿಲು ಎಂಬ ಕಾರಣಕ್ಕೆ ಬೈಂದೂರಿನ ಪ್ರತಿ ಹಳ್ಳಿ ಹಳ್ಳಿಗೂ ಸಂಚರಿಸಿ ಕಾರ್ಯಕರ್ತರನ್ನು ಗುರುತಿಸಿ, ಪ್ರಮುಖರನ್ನು ಹುರಿದುಂಬಿಸಿ ಬಿಜೆಪಿಯನ್ನು ಚಿಗುರಿಸಿದ್ದಾರೆ ಎಂದು ಗುರುರಾಜ್ ಶೆಟ್ಟಿ ಗಂಟಿಹೊಳೆ ಬಗ್ಗೆ ಆಪ್ತ ಪ್ರವೀಣ್ ಮಾಹಿತಿ ನೀಡಿದರು.