ಕಾಳುಮೆಣಸು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ದೊಡ್ಡ ಪರಿವರ್ತನೆಯನ್ನು ತರಲಾರಂಭಿಸಿದ್ದು, ಇಳುವರಿ ಹೆಚ್ಚಿಸಿ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವ ಸಾಧ್ಯತೆ ಕಂಡುಬಂದಿದೆ. ಅಂಗಾಂಶ ಸಂಸ್ಕೃತಿ (ಟಿಶ್ಯೂ ಕಲ್ಚರ್) ಹಾಗೂ ಆಧುನಿಕ ಕೃಷಿ ವಿಧಾನಗಳ ಮೂಲಕ ಸಾಂಪ್ರದಾಯಿಕ ಕೃಷಿಯ ಮಿತಿಗಳನ್ನು ಮೀರಿ ಉತ್ಪಾದನೆಯನ್ನು ಹಲವು ಪಟ್ಟು ಹೆಚ್ಚಿಸಲಾಗುತ್ತಿದೆ. ಈ ಪ್ರಯೋಗವನ್ನು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವೀಕ್ಷಿಸಿದರು.
ಭಾರತದಲ್ಲಿ ಸಂಪ್ರದಾಯಬದ್ಧವಾಗಿ ಕಾಳುಮೆಣಸು ಬೆಳೆ ದಕ್ಷಿಣ ರಾಜ್ಯಗಳಲ್ಲಿ ಮರಗಳ ಆಧಾರದಲ್ಲಿ ಬೆಳೆಸಲಾಗುತ್ತದೆ. ಈ ವಿಧಾನದಲ್ಲಿ ಸಾಮಾನ್ಯವಾಗಿ 500 ರಿಂದ 700 ಕಿಲೋಗ್ರಾಂ ಉತ್ಪಾದನೆ ದೊರೆಯುತ್ತದೆ. ಆದರೆ, ಜಲಗಾವಿನ ಜೈನ್ ಇರಿಗೇಶನ್ ಫಾರ್ಮ್‌ನಲ್ಲಿ, ಕಂಬಗಳ (ಪೋಲ್) ಆಧಾರದಲ್ಲಿ ಅದೇ ಕಾಳುಮೆಣಸು ಜಾತಿಯನ್ನು ಬೆಳೆಸಿ ಸುಮಾರು 3 ಟನ್ (ಅಂದರೆ 30 ಕ್ವಿಂಟಾಲ್) ವರೆಗೆ ಉತ್ಪಾದನೆ ಪಡೆಯಲಾಗಿದೆ. ಈ ಪ್ರಯೋಗವು ಉತ್ಪಾದನೆ ಹೆಚ್ಚಿಸುವುದಕ್ಕೂ, ರೈತರ ಆದಾಯವನ್ನು ಹೆಚ್ಚಿಸುವುದಕ್ಕೂ ಹಾಗೂ ದೇಶವನ್ನು ಮಸಾಲೆ ಉತ್ಪಾದನೆಯಲ್ಲಿ ಸ್ವಾವಲಂಬಿ ಮಾಡುವತ್ತ ಮಹತ್ವದ ಹೆಜ್ಜೆಯಾಗಲಿದೆ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಸಾಂಪ್ರದಾಯಿಕ ಕೃಷಿಯಲ್ಲಿ ಕಡಿಮೆ ಇಳುವರಿ : ಭಾರತದಲ್ಲಿ ಕಾಳುಮೆಣಸನ್ನು ಹಲವು ವರ್ಷಗಳಿಂದ ಸಾಂಪ್ರದಾಯಿಕವಾಗಿ ಮರಗಳಿಗೆ ಬಳ್ಳಿ ಹತ್ತಿಸಿ ಬೆಳೆಯಲಾಗುತ್ತಿದ್ದು, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಈ ವಿಧಾನ ಹೆಚ್ಚು ಪ್ರಸಿದ್ಧವಾಗಿದೆ. ಈ ಪದ್ಧತಿಯಲ್ಲಿ ಪ್ರತಿ ಹೆಕ್ಟೇರ್‌ಗೆ ಸುಮಾರು 500 ರಿಂದ 700 ಕೆಜಿ ಮಾತ್ರ ಇಳುವರಿ ದೊರೆಯುತ್ತದೆ. ಇದರಿಂದ ದೇಶವು ಕೆಲವೊಮ್ಮೆ ಮಸಾಲೆಗಳನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ.
ಹೊಸ ತಂತ್ರಜ್ಞಾನದಿಂದ ಇಳುವರಿ ಮೂರು ಪಟ್ಟು : ಇತ್ತೀಚೆಗೆ ಪಾಲಿಹೌಸ್ ಹಾಗೂ ಸಿಮೆಂಟ್ ಕಂಬಗಳಿಂದ ಬೆಂಬಲಿತ ವ್ಯವಸ್ಥೆಯಲ್ಲಿ ಟಿಶ್ಯೂ ಕಲ್ಚರ್ ಸಸಿಗಳನ್ನು ಬಳಸುವ ಮೂಲಕ ಮೆಣಸು ಬೆಳೆಸುವ ಪ್ರಯೋಗ ಯಶಸ್ವಿಯಾಗಿದೆ. ಇದರ ಪರಿಣಾಮವಾಗಿ ಪ್ರತಿ ಹೆಕ್ಟೇರ್‌ಗೆ ಸುಮಾರು 3 ಟನ್ (30 ಕ್ವಿಂಟಾಲ್) ಇಳುವರಿ ಪಡೆಯಲು ಸಾಧ್ಯವಾಗಿದೆ. ಇದು ಸಾಂಪ್ರದಾಯಿಕ ವಿಧಾನಕ್ಕಿಂತ ಹಲವು ಪಟ್ಟು ಹೆಚ್ಚು ಆಗಿದ್ದು, ರೈತರ ಆದಾಯವನ್ನು ವೇಗವಾಗಿ ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ.
ದಕ್ಷಿಣ ಭಾರತವೇ ಕಾಳುಮೆಣಸು ಉತ್ಪಾದನೆಯ ಕೇಂದ್ರ : ದೇಶದಲ್ಲಿಕಾಳು ಮೆಣಸು ಉತ್ಪಾದನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ವರ್ಷಕ್ಕೆ ಸುಮಾರು 81,000 ಟನ್ ಉತ್ಪಾದನೆ ಆಗುತ್ತದೆ. ಕೊಡಗು, ದಕ್ಷಿಣ ಕನ್ನಡ ಹಾಗೂ ಉಡುಪಿ ಪ್ರಮುಖ ಪ್ರದೇಶಗಳಾಗಿವೆ. ಕೇರಳ ಎರಡನೇ ಸ್ಥಾನದಲ್ಲಿ ಸುಮಾರು 70,000 ಟನ್ ಉತ್ಪಾದನೆ ಮಾಡುತ್ತಿದ್ದು, ತಮಿಳುನಾಡು ಸುಮಾರು 15,000 ಟನ್ ಉತ್ಪಾದನೆಯೊಂದಿಗೆ ಮೂರನೇ ಸ್ಥಾನದಲ್ಲಿದೆ.
ಸರಿಯಾದ ಕೃಷಿ ಮಾಡಿದರೆ ಎಕರೆಗೆ ಲಕ್ಷಗಳ ಆದಾಯ : ಮೆಣಸು ಬೆಳೆ 20–30°C ತಾಪಮಾನ ಮತ್ತು ಆರ್ದ್ರ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಫಲವತ್ತಾದ ಹಾಗೂ ನೀರು ಸರಿಯಾಗಿ ಹರಿಯುವ ಮಣ್ಣಿನಲ್ಲಿ, ಸಮರ್ಪಕ ಗೊಬ್ಬರ ಮತ್ತು ನೀರಾವರಿ ವ್ಯವಸ್ಥೆ, ನಿರ್ವಹಣೆಯೊಂದಿಗೆ ರೈತರು ಉತ್ತಮ ಆದಾಯ ಗಳಿಸುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಬೇಡಿಕೆಯಿಂದ ಈ ಬೆಳೆ ಭವಿಷ್ಯದಲ್ಲಿ ಇನ್ನಷ್ಟು ಲಾಭದಾಯಕವಾಗುವ ನಿರೀಕ್ಷೆಯಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
New agricultural technologies such as tissue culture planting and polyhouse-based cultivation are significantly increasing black pepper yields in India. With productivity rising up to three times compared to traditional methods, farmers can potentially earn higher incomes, strengthening India’s self-reliance in spice production.

