ಸಂಜೀವ್ ಕುದ್ಪಾಜೆ ಅವರಿಗೆ ವಿಶ್ವ ರಕ್ತದಾನಿಗಳ ದಿನದಂದು ಬೆಂಗಳೂರಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ, ಅವರು ಮಾಡಿದ ರಕ್ತದಾನ ಮಹೋನ್ನತ ಸಾಧನೆಗಾಗಿ ರಾಜ್ಯಮಟ್ಟದ ಗೌರವವನ್ನು ನೀಡಿ ಸನ್ಮಾನಿಸಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಿರುವ ಸಮಾಜಮುಖಿ, ಸರಳ ಜೀವಿ. ಎನ್ಎಂಸಿ ಕಾಲೇಜಿನ ಯೂತ್ ರೆಡ್ ಕ್ರಾಸ್ ಯುನಿಟ್ ನ ಪ್ರೋಗ್ರಾಮ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕಿನ ಸಕ್ರಿಯ ನಿರ್ದೇಶಕರಾದ ಸಂಜೀವ ಕುದ್ಪಾಜೆ ರಾಜ್ಯಮಟ್ಟದ ರಕ್ತದಾನಿಯಾಗಿ ಗುರುತಿಸಿಕೊಂಡಿದ್ದು, ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಿಲ್ಲೆಯಾದ್ಯಂತ ರಕ್ತದಾನಿಗಳನ್ನು ಸಂಘಟಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅಲ್ಲದೆ ಕಾಲೇಜು ವಿದ್ಯಾರ್ಥಿಗಳಿಗೆ ರಕ್ತದಾನ ಮಾಡುವಂತೆ ಹುರಿದುಂಬಿಸುತ್ತಿದ್ದಾರೆ. ಅನೇಕ ಕಠಿಣ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಂದ ರಕ್ತದಾನ ಮಾಡಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅದಲ್ಲದೆ ಸ್ವತಃ ಇವರೇ ರಕ್ತದಾನಿಯಾಗಿದ್ದು ಸುಮಾರು 28 ಬಾರಿ ರಕ್ತದಾನ ಮಾಡಿ ಅನೇಕರಿಗೆ ಜೀವದಾನ ನೀಡಿದ್ದಾರೆ.
ಸುಮಾರು 26 ವರ್ಷಗಳಿಂದ ಎನ್ ಎಸ್ ಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕುದ್ಪಾಜೆಯವರು, ತಮ್ಮ ಕಾಲೇಜಿನ 25ನೇ ಕ್ಯಾಂಪಿನ ಮುಂದಾಳತ್ವವನ್ನು ಇದೇ ತಿಂಗಳು ವಹಿಸಿಕೊಳ್ಳಲಿದ್ದಾರೆ. ಈ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಿದ್ದಾರೆ. ಇದರ ಜೊತೆಗೆ ರೋಟರಿ ಕ್ಲಬ್ ನಲ್ಲಿ 22 ವರ್ಷಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕುದ್ಪಾಜೆಯವರು, ಅಧ್ಯಕ್ಷರಾಗಿದ್ದ ವೇಳೆ ಬಳ್ಪ ಗ್ರಾಮಕ್ಕೆ 8 ಲಕ್ಷ ವೆಚ್ಚದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ, ರೋಟರಿ, ಜಿಲ್ಲೆಯ ಅತ್ಯುತ್ತಮ ಸಮಾಜ ಸೇವಕ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮರ ಸುಳ್ಯ ರಮಣೀಯ ಸುಳ್ಯ ಎಂಬ ನಗರ ಪಂಚಾಯತ್ ಸಹಭಾಗಿತ್ವದಲ್ಲಿ ಪ್ರತಿ ಗುರುವಾರ ನಡೆಯುವ ಸ್ವಚ್ಚತಾ ಕಾರ್ಯಕ್ರಮದಲ್ಲೂ ಕೈ ಜೋಡಿಸಿದ್ದಾರೆ.
ಜನಸಾಮಾನ್ಯರಿಗೆ ಅತ್ಯಂತ ಅನುಕೂಲ ಆಗುವಂತಹ ಹಣ್ಣು, ತರಕಾರಿ, ಜೇನು, ಅಣಬೆ, ಗಿಡ ಮತ್ತು ಬೀಜ ವಿನಿಮಯ ಇತ್ಯಾದಿ 25ಕ್ಕೂ ಹೆಚ್ಚು ವಿವಿಧ ಉಪಯುಕ್ತ ವಾಟ್ಸಾಪ್ ಗುಂಪು ರಚಿಸಿ, ಜನರನ್ನು ಒಗ್ಗೂಡಿಸಿ `ಮರಳಿ ಪರಿಸರಕ್ಕೆ ಬನ್ನಿ’ಎನ್ನುವ ಸಂದೇಶ ಸಾರುತ್ತಿದ್ದಾರೆ. ತಮ್ಮ ಮನೆಯಲ್ಲೂ ನೂರಾರು ಬಗೆಯ ಕಳ್ಳಿ ಗಿಡಗಳು, ಜೇನು ಸಾಕಾಣಿಕೆ, ವಿವಿಧ ಹಣ್ಣು, ಹೂವಿನ ಗಿಡಗಳಿಗೆ ಕಸಿ ಕಟ್ಟುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಪತ್ನಿ ಮುಖ್ಯಶಿಕ್ಷಕಿ ಧನಲಕ್ಷಿ ಕುದ್ಪಾಜೆ ಹಾಗೂ ಮಕ್ಕಳ ಸಹಕಾರದಿಂದ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ಸಂಜೀವ್ ಕುದ್ಪಾಜೆ ಅವರ ಸೇವೆ ಒಂದಷ್ಟು ಮಂದಿಗೆ ಪ್ರೇರಣೆಯಾಗಿದೆ.