ಇದು ಆಕಸ್ಮಿಕವೇ, ಅಪಘಾತವೇ, ಅನಿರೀಕ್ಷಿತವೇ, ಅನಿವಾರ್ಯವೇ, ಅಜ್ಞಾನವೇ, ಮೂರ್ಖತನವೇ, ಸ್ವಯಂಕೃತಾಪರಾಧವೇ, ಸಹಜವೇ, ಅಸಹಜವೇ, ಸಾಮಾನ್ಯವೇ ಹೀಗೆ ಹಲವರಲ್ಲಿ ಹಲವಾರು ಪ್ರಶ್ನೆಗಳು ಹೇಳಬಹುದು…. ವಾಸ್ತವದಲ್ಲಿ ಬೋಲೇ ಬಾಬಾ(Bhole Baba) ಎಂಬ ಸ್ವಯಂಘೋಷಿತ ದೇವಮಾನವನ(self-proclaimed godman)ದೈವವಾಣಿ ಅಥವಾ ಉಪನ್ಯಾಸ(satsanga) ಕೇಳಲು ಹೋಗಿ ಅತಿಯಾದ ಜನಸಂಖ್ಯೆಯ ಒತ್ತಡದ ಕಾರಣ ಕಾಲ್ತುಳಿತಕ್ಕೆ(stampede) ಸಿಲುಕಿ ಸತ್ತವರು ಇಷ್ಟು ಜನ. ಗಾಯಗೊಂಡವರು ಮತ್ತಷ್ಟು ಜನ. ಅದರಲ್ಲಿ ಮಹಿಳೆಯರೇ(Women) ಅತಿ ಹೆಚ್ಚು. ಕೆಲವು ಮಕ್ಕಳು ಸಹ ಸೇರಿದ್ದಾರೆ…..
ಇದಕ್ಕೆ ಸರ್ಕಾರ ಹೊಣೆಯೇ, ಅಧಿಕಾರಿಗಳು ಜವಾಬ್ದಾರಿಯೇ, ಧಾರ್ಮಿಕ ಮುಖಂಡನ ಬೇಜವಾಬ್ದಾರಿಯೇ, ಸಮಾಜದ ಹೊಣೆಯೇ ವೈಯಕ್ತಿಕವಾಗಿ ವ್ಯಕ್ತಿಗಳ ನಿರ್ಲಕ್ಷ್ಯವೇ, ಧಾರ್ಮಿಕ ನಂಬಿಕೆಗಳ ಕಾರಣವೇ ಹೀಗೆ ಸಾಲು ಸಾಲು ಅನುಮಾನಗಳು ಸಹ ಮೂಡುತ್ತವೆ….. ಉತ್ತರ ಅಷ್ಟು ಸುಲಭವಲ್ಲ ಅಥವಾ ಸರಳವಲ್ಲ. ಈ ದುರ್ಘಟನೆಯನ್ನು ಅಲ್ಲಿನ ಸರ್ಕಾರ ತನಿಖೆ ಮಾಡಿ ಮುಂದೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲೂಬಹುದು. ಆದರೆ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ನಿಜವಾದ ತಪ್ಪಿಸಸ್ಥರು ಯಾರು ಎಂಬುದು ಮುಖ್ಯವಾಗುತ್ತದೆ. ಈ ಬಗ್ಗೆ ಸಮಗ್ರ ಅಧ್ಯಯನ ಮತ್ತು ಆತ್ಮಾವಲೋಕನದ ಅವಶ್ಯಕತೆ ಇದೆ……
ಇದು ದಿಢೀರನೆ ಆದ ಘಟನೆ ಇರಬಹುದು. ಹಾಗಂತ ಈ ಕ್ಷಣಕ್ಕೆ ಅನಿಸುತ್ತದೆ. ಆಡಳಿತ ವ್ಯವಸ್ಥೆ ಇದಕ್ಕಾಗಿ ಇನ್ನಷ್ಟು ಭದ್ರತಾ ವ್ಯವಸ್ಥೆ ಮಾಡಬಹುದಿತ್ತು ಎಂದೂ ಅನಿಸಬಹುದು. ಆದರೆ ಆಳದಲ್ಲಿ ಈ ದುರ್ಘಟನೆಗೆ ಅನೇಕ ಕಾರಣಗಳು ಗೋಚರಿಸುತ್ತದೆ. ಕೇವಲ ಭದ್ರತಾ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ. ಇದೊಂದು ಬಹಳ ಆಯಾಮದ, ಆಳವಾದ ಚಿಂತನೆ ಮತ್ತು ಅಧ್ಯಯನಕ್ಕೆ ಯೋಗ್ಯವಾದ ವಿಷಯ…. ಭಾರತದ ಸಾಮಾಜಿಕ ವ್ಯವಸ್ಥೆಯೇ ಅಸಮಾನತೆ ಮತ್ತು ಅಮಾನವೀಯ ರಚನೆಯಿಂದ ಕೂಡಿದೆ, ಅದರೊಳಗೆ ಮೌಢ್ಯ, ಅಜ್ಞಾನ, ಭಕ್ತಿ, ಭಾವನೆ, ಭ್ರಮೆಗಳೇ ತುಂಬಿಕೊಂಡಿದೆ. ಎಷ್ಟೇ ಅಕ್ಷರ ಜ್ಞಾನ ಹೊಂದಿದರು ವೈಚಾರಿಕ, ವೈಜ್ಞಾನಿಕ, ಪ್ರಗತಿಪರ, ಪ್ರಶ್ನಿಸುವ ಮನೋಭಾವ ಜನರಲ್ಲಿ ಬೆಳೆಯುತ್ತಲೇ ಇಲ್ಲ. ಪ್ರಾಕೃತಿಕ ಸಹಜ ನಿಯಮಗಳು ಸಹ ಇವರಿಗೆ ಅರ್ಥವಾಗುತ್ತಿಲ್ಲ……
ಪ್ರಕೃತಿಯನ್ನೇ ದೇವರೆಂದು, ಆ ಶಕ್ತಿಯೇ ದೈವಿಕ ಶಕ್ತಿ ಎಂದು ನಂಬುವ ಅದೇ ಜನ ಅದಕ್ಕೆ ವಿರುದ್ಧವಾದ ಅತಿಮಾನುಷ ಶಕ್ತಿಯನ್ನು ನಂಬುತ್ತಾರೆ. ಅಸ್ವಾಭಾವಿಕ, ಅಸಹಜ, ಕಾಲ್ಪನಿಕ ಶಕ್ತಿಯನ್ನು ಯಾವುದೋ ವ್ಯಕ್ತಿ ದೇವಮಾನವನ ರೂಪದಲ್ಲಿ ಅತ್ಯಂತ ಆಕರ್ಷಕವಾಗಿ, ಕಲಾತ್ಮಕವಾಗಿ, ಕ್ರಿಯಾತ್ಮಕವಾಗಿ, ಉದಾಹರಣೆಗಳ ಸಹಿತ ವಿಜೃಂಭಿಸಿ ಜನರ ಭಾವನೆಗಳನ್ನು ಉದ್ರೇಕಿಸಿ ಇಲ್ಲಸಲ್ಲದ ವಿಷಯಗಳನ್ನು ಹೇಳಿದರೆ ಈ ಜನ ನಂಬುತ್ತಾರೆ. ತಮ್ಮ ಕಷ್ಟಗಳಿಗೆ ಇಲ್ಲಿ ಪರಿಹಾರವಿದೆ ಎಂದು ಭ್ರಮಿಸುತ್ತಾರೆ…….
ತಾವು ಜ್ಞಾನಿಗಳಾಗದೆ, ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳದೆ, ಈ ರೀತಿಯ ವಂಚಕ, ವಾಣಿಜ್ಯೀಕರಣಗೊಂಡ ಆಧ್ಯಾತ್ಮಿಕ ವ್ಯಕ್ತಿಗಳ ಮಾತುಗಳಿಗೆ ಮರುಳಾಗಿ ಅವರನ್ನೇ ದೇವಮಾನವರೆಂದು ನಂಬುತ್ತಾರೆ. ಅದರ ಪರಿಣಾಮ ಈ ಕ್ಷಣದ ಕಾಲ್ತುಳಿತ ಮಾತ್ರವಲ್ಲ, ಶತಶತಮಾನದ ಅಜ್ಞಾನದ ಕಾಲ್ತುಳಿತಗಳಿಗೆ ಈ ಜನ ಬಲಿಯಾಗುತ್ತಿದ್ದಾರೆ. ಈಗ ಪ್ರಾಣ ಕಳೆದುಕೊಂಡವರು ಕೆಲವೇ ಜನರಿರಬಹುದು. ಆದರೆ ತಮ್ಮ ಜೀವನವನ್ನೇ ಜೀತಕ್ಕಿಟ್ಟು ಅಜ್ಞಾನದಿಂದ, ಕಷ್ಟಕಾರ್ಪಣ್ಯಗಳಿಂದ ನರಳುತ್ತಿರುವ ಅಸಂಖ್ಯಾತ ಜನರಿದ್ದಾರೆ…….
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪ್ರಾಮುಖ್ಯತೆ, ತಮ್ಮ ಮತದ ಮಹತ್ವ, ತಾವು ಮಾಡಬಹುದಾದ ಬದಲಾವಣೆ, ತಮ್ಮ ಹಕ್ಕು ಮತ್ತು ಕರ್ತವ್ಯಗಳು, ಸಂವಿಧಾನಾತ್ಮಕ ಜವಾಬ್ದಾರಿ ಮತ್ತು ಅನುಕೂಲಗಳು ಯಾವುದನ್ನು ಸರಿಯಾಗಿ ಯೋಚಿಸುವುದಿಲ್ಲ. ಎಲ್ಲಿಂದಲೋ, ಹೇಗೋ ತಮಗೆ ಆರ್ಥಿಕ ಅನುಕೂಲಗಳಾದರೆ ಸಾಕು, ತಮಗೆ ಯಾವುದೇ ಸಾವು ನೋವುಗಳಾಗಬಾರದು ಎಂಬ ಸಂಕುಚಿತ, ಭಯದ, ಮನಸ್ಥಿತಿಗೆ ಸಿಲುಕಿ ಈ ರೀತಿಯ ಅವಘಡಗಳಿಗೆ ಕಾರಣರಾಗುತ್ತಿದ್ದಾರೆ.….
ಇದನ್ನು ರಾಜಕಾರಣಿಗಳು, ಅಧಿಕಾರಿಗಳು, ಮಾಧ್ಯಮಗಳು, ಧಾರ್ಮಿಕ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ನಿರಂತರವಾಗಿ ಪೋಷಿಸಿಕೊಂಡು ಬರುತ್ತಲೇ ಇದ್ದಾರೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು, ಜವಾಬ್ದಾರಿಯನ್ನು, ಕರ್ತವ್ಯವನ್ನು ಯಾರು ಮಾಡುತ್ತಿಲ್ಲ. ಎಲ್ಲೋ ಕೆಲವು ಅಪರೂಪದ ವ್ಯಕ್ತಿಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಯಾವ ಮೂಲೆಗೂ ಸಾಕಾಗುತ್ತಿಲ್ಲ. ಮೌಢ್ಯದ ವಿಜೃಂಭಣೆಯೇ ಜನಪ್ರಿಯತೆ ಗಳಿಸುತ್ತಿದೆ. ಈ ರೀತಿಯ ದೇವಮಾನವರು ಮತ್ತೆ ಮತ್ತೆ ಸೃಷ್ಟಿಯಾಗುತ್ತಲೇ ಇರುತ್ತಾರೆ…
ಇದು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಬಹುತೇಕ ಎಲ್ಲ ಧರ್ಮಗಳಲ್ಲೂ ಈ ರೀತಿಯ ದೇವಮಾನವರ ಸೃಷ್ಟಿಯಾಗಿ ಇಡೀ ಸಮಾಜದಲ್ಲಿ ಅಶಾಂತಿ, ಅಜ್ಞಾನ, ಬಡತನ ಹೆಚ್ಚಾಗಲು ಕಾರಣರಾಗುತ್ತಿದ್ದಾರೆ. ಈ ಅಧುನಿಕ ಕಾಲದಲ್ಲೂ, ಈ ಅದ್ಭುತ ತಂತ್ರಜ್ಞಾನದ ಬೆಳವಣಿಗೆಯ ಸಂದರ್ಭದಲ್ಲೂ, ಅಪಾರ ಅನುಭವದ ಮನುಷ್ಯ ಜೀವಿ ಇನ್ನೂ ಅನಾಗರಿಕ ಗುಣಲಕ್ಷಣಗಳನ್ನು ಹೊಂದಿರುವುದು ನಿಜಕ್ಕೂ ವಿಷಾದನೀಯ…… ದಯವಿಟ್ಟು ತಿಳಿದವರಾದ, ಪ್ರಬುದ್ಧರಾದ ಕೆಲವರಾದರು ಎಚ್ಚೆತ್ತುಕೊಳ್ಳಿ ಮತ್ತು ನಮ್ಮವರನ್ನು ಎಚ್ಚರಗೊಳಿಸಿ. ಈ ರೀತಿಯ ಅನಾಹುತಗಳನ್ನು ತಪ್ಪಿಸಲು ಪ್ರಯತ್ನಿಸಿ…….