ಸೇನೆಗೆ ಸೇರಲು 19 ವರ್ಷದ ಯುವಕನೊಬ್ಬ ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋಮೀಟರ್ ಓಡುತ್ತಲೇ ಮನೆ ಸೇರುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಕತೆ ಆಸಕ್ತಿದಾಯಕ ಹಾಗೂ ಪಾಸಿಟಿವ್ ಸಂದೇಶ ನೀಡಿದೆ.
ಯುವಕನೊಬ್ಬ ಓಡುವ ವಿಡಿಯೋ ಭಾರಿ ವೈರಲ್ ಆಗಿದೆ. ಮೂಲತಃ ಉತ್ತರಾಖಂಡದವನಾದ ಪ್ರದೀಪ್ ಮೆಹ್ರಾ (19) ನೋಯ್ಡಾದಲ್ಲಿ ಮೆಕ್‌ಡೋನಾಲ್ಡ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿ ಮಧ್ಯರಾತ್ರಿ ಬರೋಬ್ಬರಿ 10 ಕಿಲೋಮೀಟರ್ ಓಡುತ್ತಲೇ ಬರೋಲಾದಲ್ಲಿರುವ ಮನೆ ಸೇರುತ್ತಾರೆ. ಇದಕ್ಕೆ ಕಾರಣ ಆತ ಭಾರತೀಯ ಸೇನೆ ಸೇರಿಕೊಂಡು ದೇಶ ಸೇವೆ ಮಾಡಬೇಕೆಂಬ ಹಂಬಲ ಹೊಂದಿದ್ದಾನಂತೆ.
ಪ್ರದೀಪ್ ಈ ರೀತಿ ಓಡುತ್ತಿರುವುದನ್ನು ಗಮನಿಸಿದ ಕಾರಿನಲ್ಲಿದ್ದ ಚಲನಚಿತ್ರ ನಿರ್ಮಾಪಕ ಮತ್ತು ಲೇಖಕ ವಿನೋದ್ ಕಪ್ರಿ ಈ ಯುವಕನನ್ನು ಪ್ರಶ್ನಿಸಿದ್ದಾರೆ. ಈ ರೀತಿ ಓಡುತ್ತಿರುವುದು ಯಾಕೆ?, ಕಾರಿನಲ್ಲಿ ಮನೆಗೆ ಬಿಡುತ್ತೇನೆ ಎಂದು ವಿನಂತಿಸಿದ್ದಾರೆ. ಆದರೆ, ಇದು ಸೇನೆ ಸೇರಿಕೊಳ್ಳಲು ನಾನು ಮಾಡುತ್ತಿರುವ ಅಭ್ಯಾಸ ಎಂದು ಓಡುತ್ತಲೇ ಯುವಕ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾನೆ.
ಬೆಳಗ್ಗೆ ವ್ಯಾಯಾಮ, ಜಾಗಿಂಗ್, ಜಿಮ್ಗೆ ಹೋಗಲು ಸಮಯವಿಲ್ಲ. ಹಾಗಾಗಿ, ಮಧ್ಯರಾತ್ರಿ ವರೆಗೂ ಕೆಲಸ ಮಾಡುತ್ತೇನೆ. ನಂತರ ಮನೆಗೆ ಓಡುತ್ತಲೇ ಹಿಂತಿರುಗುತ್ತೇನೆ. ಸಿಗುವ ವೇತನದಲ್ಲೇ ತಾಯಿಯ ಆರೋಗ್ಯ ನೋಡಿಕೊಳ್ಳಬೇಕು, ಮನೆ ಖರ್ಚು ನಿಭಾಯಿಸಬೇಕು. ಜೊತೆಗೆ ನನ್ನ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕೆಂದು ಪ್ರತಿ ರಾತ್ರಿ ನಗರದ ರಸ್ತೆಗಳಲ್ಲಿ 10 ಕಿ.ಮೀ ಓಡುವ ಮೂಲಕ ಆರ್ಮಿ ಸೇರಿಕೊಳ್ಳಲು ತಯಾರಿ ನಡೆಸುತ್ತಿದ್ದೇನೆ ಅಂತಾನೆ ಈ ಯುವಕ.