ಭಾರತದ ಆತ್ಮ ಹಳ್ಳಿಗಳು. ಅಂದರೆ ಗ್ರಾಮೀಣ ಭಾರತವೇ ದೇಶದ ಶಕ್ತಿ…!. ಇಲ್ಲಿ ನೋಡಿದರೆ ಒಂದು ಮಳೆಗೆ ಸೇತುವೆ ಕೊಚ್ಚಿ ಹೋಗಿದೆ, ಹಳ್ಳಿಯ ಜನರು 9 ದಿನಗಳಿಂದ ಸಂಪರ್ಕದಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳೆಲ್ಲಾ ಬಂದಿದ್ದಾರೆ..! ಪ್ರಯೋಜನ ಶೂನ್ಯ…!.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರ ಎನ್ನುವುದು ತೀರಾ ಗ್ರಾಮೀಣ ಭಾಗ. ಕಳೆದ ವರ್ಷ ಭಾರೀ ಮಳೆ ಹಾಗೂ ಜಲಸ್ಫೋಟದ ಕಾರಣದಿಂದ ಹಲವಾರು ಕಿರು ಸೇತುವೆ, ಸೇತುವೆ, ಕೃಷಿ ಭೂಮಿ ನಾಶವಾಗಿತ್ತು. ಈ ಸಂದರ್ಭ ಬೆಂಡೋಡಿ ಎನ್ನುವ ಪುಟ್ಟ ಹಳ್ಳಿಯನ್ನು ಸಂಪರ್ಕ ಮಾಡುವ ಸೇತುವೆ ಕೊಚ್ಚಿ ಹೋಗಿತ್ತು. ಈ ಪುಟ್ಟ ಹಳ್ಳಿ ಬೆಂಡೋಡಿಯು ಕೊಲ್ಲಮೊಗ್ರ ಹಾಗೂ ಹರಿಹರ ಗ್ರಾಮವನ್ನು ಸಂಪರ್ಕ ಮಾಡಲೇಬೇಕು. ಇಲ್ಲದೇ ಇದ್ದರೆ ಈ ಹಳ್ಳಿಗೆ ಯಾವ ಸಂಪರ್ಕವೂ ಇಲ್ಲವಾಗುತ್ತದೆ. ಜನರು ಪ್ರತೀ ದಿನ ಏನಾದರೂ ಕೆಲಸಕ್ಕೆ ಇಲ್ಲಿಗೆ ಬರಲೇಬೇಕು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಬೆಂಡೋಡಿ ಎಂಬಲ್ಲಿ ಸೇತುವೆ ಕೊಚ್ಚಿ ಹೋಗಿ 9 ದಿನಗಳಾದವು. ಗ್ರಾಮೀಣ ಜನರು ಸಂಪರ್ಕ ಕಡಿತಗೊಂಡು ಪರದಾಡುತ್ತಿದ್ದಾರೆ.@dineshgrao @utkhader @DCDK9 @osd_cmkarnataka @CMofKarnataka @SEOC_Karnataka @BJPBhagirathi @nalinkateel pic.twitter.com/aQLrBTnL3z
— theruralmirror (@ruralmirror) July 28, 2023
Advertisement
ಕಳೆದ ವರ್ಷ ಜಲಸ್ಫೋಟದ ಕಾರಣದಿಂದ ಹಾನಿಯಾದ ಬಳಿಕ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಉಸ್ತುವಾರಿ ಸಚಿವರು ಈ ಸೇತುವೆ ಕಾಮಗಾರಿ ತಕ್ಷಣವೇ ಮಾಡಿ ಎಂದರು. ಸ್ಥಳೀಯರು ಸೇರಿಕೊಂಡು ಸುಮಾರು 11 ಲಕ್ಷ ರೂಪಾಯಿ ವೆಚ್ಚದಲ್ಲಿ 16 ಮೋರಿಗಳನ್ನು ತಂದು ಮರಳು ಚೀಲ ಇರಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿದರು. ಆದರೆ ಇದಕ್ಕೆ ಇದುವರೆಗೂ ಅನುದಾನ ಸಿಕ್ಕಿಲ್ಲ…!. ಅಂತೂ ಒಟ್ಟು ಸುಮಾರು 1.20 ಲಕ್ಷ ಅನುದಾನ ಭಾಗ್ಯ ದೊರೆತದ್ದು ಬಿಟ್ಟರೆ ಬೇರೆ ಯಾವುದೇ ಹಣ ದೊರೆತಿಲ್ಲ. ಹಾಗಿದ್ದೂ ಊರಿನ ಕೆಲಸ ಎಂದು ಕಾಮಗಾರಿ ನಡೆಸಿದರೂ ಸಹಿಸಿಕೊಂಡು ಅನುದಾನದಕ್ಕಾಗಿ ಬೇಡಿಕೆ ಸಲ್ಲಿಸುತ್ತಿದ್ದರು.
ಈ ಬಾರಿ ಮತ್ತೆ ಸುರಿದ ಭಾರೀ ಮಳೆಗೆ ಸೇತುವೆ ಕೊಚ್ಚಿ ಹೋಗಿದೆ. ಸಂಪರ್ಕ ಕಡಿತಗೊಂಡಿದೆ. ಈಗಲೂ ಭೇಟಿ ನೀಡಿದ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿ ಮಾಡಿ ಅನುದಾನ ಒದಗಿಸುವ ಎಂದರೆ ಯಾವೊಬ್ಬ ಗುತ್ತಿಗೆದಾರರೂ ಕೆಲಸಕ್ಕೆ ಬಂದಿಲ್ಲ. ಮಳೆಹಾನಿಯಲ್ಲಿ ಮಂಜೂರು ಮಾಡುವ ಭರವಸೆ ನೀಡಿದರೂ ಕಳೆದ ವರ್ಷದ ಕಹಿ ಅನುಭವದಲ್ಲಿ ಸ್ಥಳೀಯರು ಕೆಲಸ ಮಾಡುತ್ತಿಲ್ಲ.
ಈಗ ಬೆಂಡೋಡಿ ಪ್ರದೇಶದ ಜನರು ಸಂಕಷ್ಟಲ್ಲಿದ್ದಾರೆ. ಹೊರಜಗತ್ತಿನ ಸಂಪರ್ಕ ಇಲ್ಲದೆ ಪರದಾಟ ನಡೆಸುತ್ತಿದ್ದಾರೆ. ಈಚೆಗೆ ಸಹಾಯಕ ಕಮೀಶನರ್ ಭೇಟಿ ನೀಡಿದರು, ಇಲಾಖೆಯ ಇಂಜಿನಿಯರ್ ಭೇಟಿ ನೀಡಿದರು. ಒಟ್ಟು ಈಗಾಗಲೇ 9 ದಿನಗಳು ಕಳೆದು ಹೋದವು. ಜನರು ಮಳೆ ಇದ್ದರೆ ನಡೆದು ಬಾರಲಾಗದ ಸ್ಥಿತಿಯಲ್ಲಿದ್ದಾರೆ.
ಇದೀಗ ಜನರೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇಲಾಖೆ, ಸರ್ಕಾರ ಈ ಸೇತುವೆಯನ್ನು ತಾತ್ಕಾಲಿಕ ವ್ಯವಸ್ಥೆಯಾದರೂ ಮಾಡಿಕೊಡಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಒಂದು ವೇಳೆ ಇಲಾಖೆಗಳು, ಸರ್ಕಾರ ಮಾಡದೇ ಇದ್ದರೆ ಸ್ವಂತ ಹಣದಿಂದಲಾದರೂ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣ ಭಾರತದ ಅಭಿವೃದ್ಧಿಯ ಕಡೆಗೆ ಗಮನಹರಿಸಬೇಕಾದ ಇಲಾಖೆಗಳು, ಆಡಳಿತವು ಏಕಿಷ್ಟು ನಿರ್ಲಕ್ಷ್ಯ ಮಾಡುತ್ತಿದೆ ?