ಬದುಕು ಪುರಾಣ

ಬೃಹಸ್ಪತಿ ಅಂದರೆ ಜ್ಞಾನವಂತ

Share
ಅಪಾರ ಪಾಂಡಿತ್ಯವುಳ್ಳವರ ಹೆಸರಿನೊಂದಿಗೆ ‘ವಾಚಸ್ಪತಿ, ಬೃಹಸ್ಪತಿ’ ವಿಶೇಷಣ ಹೊಸೆದು ಕೊಂಡಿರುತ್ತದೆ. ಅದು ಪಂಡಿತ ಪರಂಪರೆಗೆ, ಜ್ಞಾನಕ್ಕೆ ಸಾರಸ್ವತ ಲೋಕವು ನೀಡಿದ, ನೀಡುವ ಗೌರವ. ಎಲ್ಲಾ ವಿಚಾರಗಳಲ್ಲೂ ಪರಿಣತಿ ಹೊಂದಿದವರಿಗೆ ‘ಅಭಿನವ ಬೃಹಸ್ಪತಿ’ಯೆಂಬ ಬಿರುದೂ ಪ್ರಾಪ್ತವಾದುದಿದೆ. ಅದು ಜ್ಞಾನಕ್ಕೆ ಸಂದ ಮಾನ. ಇಂತಹ ಹೆಸರನ್ನು ಹೊಸೆದುಕೊಳ್ಳಲು ಬಹುಶಃ ಜೀವಿತದ ಆರ್ಧಾಯುಷ್ಯಕ್ಕಿಂತಲೂ ಹೆಚ್ಚು ಕಠಿಣ ಪರಿಶ್ರಮ ಬೇಕು.
ವರ್ತಮಾನ ಪ್ರಪಂಚವು ಅಸಹನೆಯ ಸೂಚಕವಾಗಿ, ವ್ಯಂಗ್ಯ ಸೂಚಕವಾಗಿ ‘ಬ್ರಹಸ್ಪತಿ’ ಪದವನ್ನು ಬಳಸುವುದಿದೆ.  ಅರ್ಧಂಬರ್ಧ ಕಲಿತು, ತನಗೆ ಎಲ್ಲವೂ ತಿಳಿದಿದೆ ಎಂದು ಕಾಣಿಸಿಕೊಳ್ಳುವ ವ್ಯಕ್ತಿಗಳು ಎಷ್ಟಿಲ್ಲ. ಅನಾವಶ್ಯಕವಾಗಿ ತನ್ನ ಜ್ಞಾನದ (ಅಲ್ಪ) ಪರಿಚಯಕ್ಕೆ ‘ಸಂಭ್ರಮದ ಸ್ಪರ್ಶ’ ನೀಡುವ, ಅಗತ್ಯವಿಲ್ಲದೆಡೆ ನುಸುಳಿ ವಾಚಾಳಿಯಾಗುವ, ಯಾವುದೇ ವಿಷಯದಲ್ಲಿ ನಿರರ್ಗಳವಾಗಿ ಮಾತನಾಡುವ ಮಂದಿಯನ್ನು ‘ಬೃಹಸ್ಪತಿ’ ಸಂಬೋಧನೆಯಿಂದ ಕಿಚಾಯಿಸುತ್ತಾರೆ. ‘ಇದು ತನಗೆ ಸಿಕ್ಕಿದ ಗೌರವ’ ಎಂದು ಬೀಗುವ, ಅದನ್ನು ಜಾಲತಾಣಗಳಲ್ಲಿ ರಂಗುರಂಗಾಗಿ ಬಿತ್ತರಿಸುವ ಮನಸ್ಸುಗಳನ್ನು ಏನೆನ್ನಬೇಕು? ಅರ್ಧ ಬೆಂದ ಅನ್ನ ಎಂದಿಗೂ ಮುಗುಳಕ್ಕಿ. ಅದು ಅನ್ನವಾಗದು. ಉಣ್ಣಲೂ ಆಗದು.
ನನಗೆ ಹೆಚ್ಚು ಹತ್ತಿರದ ಯಕ್ಷಗಾನ ಕ್ಷೇತ್ರದಲ್ಲಿ ನೋಡುತ್ತಿರುತ್ತೇನೆ. ಅವರು ಮದ್ದಳೆ ನುಡಿಸಬಲ್ಲರು, ಚೆಂಡೆ ಬಾರಿಸಬಲ್ಲರು; ಭಾಗವತಿಕೆಯನ್ನೂ ಮಾಡುತ್ತಾರೆ. ಚಕ್ರತಾಳದಲ್ಲೂ ಸೈ. ಇನ್ನು ವೇಷಗಾರಿಕೆಯಲ್ಲೂ ಮುಂದು. ಸಂಘಟನೆಯಲ್ಲಿ ಎತ್ತಿದ ಕೈ. ಕಠಿನ ವಿಮರ್ಶೆ ಅವರ ಬಾಯಲ್ಲೇ ಕೇಳಬೇಕು! ತಮ್ಮ ಆಯುಷ್ಯದ ಕೊನೆಯವರೆಗೂ ಹೀಗೆ ‘ಇದ್ದು ಇಲ್ಲದಂತೆ’ ಇದ್ದುಬಿಡುತ್ತಾರೆ. ಇಂತಹವರು ಆರಕ್ಕೆ ಏರುವುದಿಲ್ಲ, ಮೂರಕ್ಕೆ ಇಳಿಯುವುದಿಲ್ಲ! ಮಾತಿಗೆ ನಿಂತರಂತೂ ದೇವಲೋಕದ ‘ಬೃಹಸ್ಪತಿ’ ನಾಚಬೇಕು ತನಗಿಂತ ಅನುಭವ ಸಂಪನ್ನರ ಮುಂದೆ ವಾಚಾಳಿಯಾಗುವ ಹಲವು ಮನಸ್ಸುಗಳ ಮನಃಸ್ಥಿತಿಗೆ ಅನುಕಂಪ ಉಂಟಾಗುತ್ತದೆ. ಇಂತಹವರ ಚರ್ಯೆಯನ್ನು ‘ಅವ ದೊಡ್ಡ ಬೃಹಸ್ಪತಿ’ ಎಂದು ಗೇಲಿಯಾಡುತ್ತೇವೆ. ಇವರನ್ನು ಒಪ್ಪಿದ ಪಟಲಾಂ ‘ಸವ್ಯಸಾಚಿ’ ಎಂದು ಕರೆದು ಸಂಭ್ರಮಿಸಿದಾಗ ಮುಖ ಮುಚ್ಚಿಕೊಳ್ಳುವ ಸರದಿ ನನ್ನದು!
ಅಕ್ಷರಲೋಕದ ಸಮಾಜವನ್ನು ಗಮನಿಸಿ. ಒಬ್ಬ ವ್ಯಕ್ತಿಯ ಹೇಳಿಕೆಗೆ ಪ್ರತಿಕ್ರಿಯೆ ನೀಡಲು, ಅಸಂತೃಪ್ತಿ ವ್ಯಕ್ತಪಡಿಸುವ ಸಂದರ್ಭದಲ್ಲಿ ‘ಬೃಹಸ್ಪತಿ’ ಪದ ಬಳಕೆ. ಏನೂ ಅರಿಯದ ಪಾಮರನನ್ನು ಗೇಲಿ ಮಾಡುವಾಗಲೂ ‘ಬೃಹಸ್ಪತಿ’ ರೆಡಿ. ಆದರೆ ಪ್ರಖರ ಪಾಂಡಿತ್ಯದವರನ್ನು ಸಂಬೋಧಿಸುವಾಗ ಯಾವ ವಿಶೇಷಣವನ್ನೂ ಸೇರಿಸದೆ ಕೃತಘ್ನರಾಗುತ್ತೇವೆ. ಬೃಹಸ್ಪತಿ ಎಂದರೆ ಅನುಭವ ಸಂಪನ್ನ ಎಂದರ್ಥ. ನಮಗೆ ಬೇಕಾದಂತೆ ಅರ್ಥ ಮಾಡಿಕೊಳ್ಳಲಾಗದು.
ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದ ವಕ್ತಾರರಂತೆ ಕಾಣಿಸಿಕೊಂಡಿದ್ದವರ ಸಂಖ್ಯೆ ಸಣ್ಣದಲ್ಲ.  ಒಂದೆರಡು ಔಷಧಿಯ ಹೆಸರನ್ನು ಕಂಠಪಾಠ ಮಾಡಿಕೊಂಡು ಬೀಗುತ್ತಾ ಗಮನ ಸೆಳೆಯುತ್ತಿದ್ದರು. ಮಾಧ್ಯಮಗಳಲ್ಲಿ ನಿತ್ಯ ಸುದ್ದಿಯಾಗುತ್ತಿತ್ತು. ಅವರಲ್ಲಿ ಯಾವುದೇ ಕಾಯಿಲೆಯ ಸುದ್ದಿಯನ್ನು ಮಾತನಾಡಿ, ತಕ್ಷಣ ಔಷಧಿಯನ್ನು ಪಟಪಟನೆ ಹೇಳುತ್ತಾರೆ. ‘ಇದು ಇಂತಹುದೇ’ ಕಾಯಿಲೆ ಎಂದು ಉಪದೇಶ ಮಾಡುತ್ತಾರೆ. ಅವರ ಮಾತನ್ನು ಕೇಳಿ ಔಷಧಿ ಬಳಸಿದರಂತೂ ಗೋವಿಂದ..! ಇಂತಹವರ ಹಿಂದುಮುಂದೆ ಅರಿಯದೇ ಇದ್ದವರು ‘ಭಯಂಕರ ಮಾರಾಯ್ರೆ.. ಒಳ್ಳೆಯ ಜ್ಞಾನ.. ಥೇಟ್ ಬ್ರಹಸ್ಪತಿಯೇ. ಧನ್ವಂತರಿಯ ಅಪರಾವತಾರ’ ಅಂದುಕೊಳ್ಳುತ್ತಾರೆ.
ಇಂತಹ ಸ್ವಭಾವದವರನ್ನು ಯಾವುದಾದರೂ ಸಭೆಗೆ ಆಹ್ವಾನಿಸಿ. ಎಲ್ಲಾ ವಿಷಯಗಳಲ್ಲೂ ಅಡ್ಡಡ್ಡ ಮಾತನಾಡುತ್ತಾ, ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಸೂಚಿಸುತ್ತಾರೆ! ಅನುಷ್ಠಾನದ ಹೊತ್ತಿಗೆ ನಾಪತ್ತೆಯಾಗುತ್ತಾರೆ. ಅಮೇರಿಕಾದಲ್ಲಿ ಒಂದು ತಂತ್ರಜ್ಞಾನ ಇನ್ನೇನು ಬೀಜಾಂಕುರ ಆಯಿತೆಂಬ ಸುದ್ದಿ ಇವರ ಕಿವಿಗೆ ರಾಚಿದರೆ ಮುಗಿಯಿತು, ಅದರ ಪೂರ್ವಾಪರಗಳನ್ನು ತಿಳಿಯದೆ ಗಂಟೆಗಟ್ಟಲೆ ಮಾತನ್ನು ಸೃಷ್ಟಿಸಿಬಿಡುತ್ತಾರೆ.
ಈಚೆಗೆ ‘ಡಾಕ್ಟರೇಟ್’ ಪದವಿಗಳೂ ಗೇಲಿಗೆ ಒಳಗಾಗುತ್ತಿದೆ. ‘ಡಾಕ್ಟರೇಟ್’ ಪದವಿಯು ಜ್ಞಾನವಂತರಿಗೆ ಪ್ರದಾನಿಸಿದಾಗಲೇ ಅದಕ್ಕೆ ಮಾನ. ಒಂದು ವಿಷಯದ ಕುರಿತು ಕಷ್ಟಪಟ್ಟು ಅಧ್ಯಯನ ಮಾಡಿ ಪಡೆಯುವ ‘ಡಾಕ್ಟರೇಟ್’ ಹಿಂದೆ ಜ್ಞಾನದ ಹಸಿವು ವ್ಯಕ್ತವಾಗುತ್ತದೆ. ಇನ್ನು ಉನ್ನತ ವೈದ್ಯಕೀಯ ಶಿಕ್ಷಣ ಪಡೆದು ಪಡೆಯುವ ‘ಡಾಕ್ಟರೇಟ್’ ಪದವಿಯ ಹಿಂದೆ ಜ್ಞಾನ ಮತ್ತು ಬದುಕಿನ ನಿರೀಕ್ಷೆಗಳಿವೆ. ವಿದೇಶದಲ್ಲಿರುವ ಕೆಲವು ಸಂಸ್ಥೆಗಳು ‘ಡಾಕ್ಟರೇಟ್’ ಪದವಿ ನೀಡುತ್ತಿದ್ದು, ಅದನ್ನು ಹೆಸರಿನ ಹಿಂದೆ ಅಂಟಿಸಿಕೊಂಡವರಿದ್ದಾರೆ. ಆ ಸಂಸ್ಥೆಗಳಿಗೆ ಈ ಪದವಿ ನೀಡುವ ಅರ್ಹತೆ ಇದೆಯೋ ಇಲ್ಲವೋ ಬೇರೆ ಮಾತು. ಇನ್ನು ವಿಶ್ವವಿದ್ಯಾನಿಲಯಗಳು ನೀಡುವ ‘ಗೌರವ ಡಾಕ್ಟರೇಟ್’! ಈ ಪದವಿಯ ಕುರಿತು ಮಾತನಾಡದೇ ಇರುವುದು ಒಳ್ಳಿತು. ಇಂತಹ ಡಾಕ್ಟರೇಟ್ ಪದವಿ ಪಡೆದವರನ್ನು ಹಲವಾರು ವೇದಿಕೆಯಲ್ಲಿ ಅವರನ್ನು ಖುಷಿಪಡಿಸಲು ‘ಇವರು ಬೃಹಸ್ಪತಿಯಷ್ಟು ಜ್ಞಾನವುಳ್ಳವರು’ ಎಂದು ಕೊರೆಯುತ್ತಾರೆ.
ಒಬ್ಬ ನಿಜವಾಗಿಯೂ ಜ್ಞಾನವಂತನಿದ್ದು, ಹತ್ತು ಮಂದಿಯ ಮಧ್ಯೆ ತನ್ನ ವಿಚಾರವನ್ನು ಹೇಳುತ್ತಿರುತ್ತಾನೆ. ಆ ವಿಚಾರಗಳು ಅರ್ಥವಾಗದ ಮಂದಿ ‘ಆತ ಬೃಹಸ್ಪತಿ’ ಎಂದು ಮೂದಲಿಸುತ್ತಾರೆ. ಇಂತಹವರಿಗೆ ಆತನ ಮಟ್ಟಕ್ಕೆ ಅಲ್ಲದಿದ್ದರೂ, ಅವನ ವಿಚಾರಗಳನ್ನು ಸ್ಪರ್ಶ ಮಾಡಬೇಕೆನ್ನುವ ಯೋಚನೆಯೇ ಹುಟ್ಟುವುದಿಲ್ಲ. ಹೀಗೆ ಅನ್ಯಾನ್ಯ ಸನ್ನಿವೇಶಗಳಲ್ಲಿ ‘ಬೃಹಸ್ಪತಿ’ ಪದದ ಮಹತ್ತನ್ನು ಅರಿಯದೇ ಬಳಸುತ್ತಿರುವುದನ್ನು ಬೌದ್ಧಿಕ ಗಟ್ಟಿತನ ಎನ್ನಲಾದೀತೇ?
ಮಾತನಾಡುವವರೆಲ್ಲಾ ‘ಬೃಹಸ್ಪತಿ’ಗಳಲ್ಲ. ಹೆಸರನ್ನು ಹೊಸೆಯಲು ಬಿಡಿ, ಆಡಲೂ ಯೋಗ್ಯತೆ ಬೇಕು. ವರ್ತಮಾನ ಪ್ರಪಂಚದಲ್ಲಿ ಮಾತಿಗೆ ಮಹತ್ತು. ಮಾತು ಹೇಗಿರಬೇಕು, ಹೇಗಿರಬಾರದು; ಎಷ್ಟು ಮಾತನಾಡಬೇಕು, ಹೇಗೆ ಮಾತನಾಡಬೇಕು.. ಎನ್ನುವ ನೀತಿಶಿಕ್ಷಣ ಇಲ್ಲದವರ ಮುಂದೆ ಮೌನವಾಗಿರುವುದು ಲೇಸು. ರಾಜಕೀಯ ವ್ಯಕ್ತಿಗಳ ಬಾಯಲ್ಲಿ ಎಂತೆಂತಹ ಅಣಿಮುತ್ತುಗಳು! ಪುರಾಣ ವಿಚಾರಗಳ ಕತ್ತು ಹಿಸುಕುವ ಮಾತುಗಳು.
‘ಬೃಹಸ್ಪತಿ’ ಎಂದರೆ ಹಗುರವಾದೀತು. ಅವರು ‘ಬೃಹಸ್ಪತಿ ಆಚಾರ್ಯ’ರು. ಅವರ ಸಣ್ಣ ಬಯೋಡಾಟ ಇಲ್ಲಿದೆ.
ಬೃಹಸ್ಪತಿ: ದೇವಗುರು ಬೃಹಸ್ಪತಿಯು ಅಂಗೀರಸ ಮುನಿಯ ಪುತ್ರ. ತಾಯಿ ವಸುಧೆ. ಉಚಥ್ಯ ಮತ್ತು ಸಂವರ್ತರು ಸಹೋದರರು. ದೇವತೆಗಳ ಗುರು. ಬೃಹತ್ತಾದ ಯೋಗ್ಯತೆಯನ್ನು ಹೊಂದಿದ ಕಾರಣ ಅನ್ವರ್ಥನಾಮವಾಗಿ ಬೃಹಸ್ಪತಿ. ಉತ್ತಮ ವಾಕ್ ಸಾಮಥ್ರ್ಯವಿರುವ ಕಾರಣ ‘ವಾಚಸ್ಪತಿ’. ಸುರಾಚಾರ್ಯ, ಧೀಷಣ, ಗೀಷ್ಪತಿ ಎಂಬ ಹೆಸರುಗಳಿವೆ.
ಮಡದಿ ತಾರಾದೇವಿ. ಈಕೆಯಲ್ಲಿ ಚಂದ್ರನಿಂದ ‘ಬುಧ’ ಜನಿಸಿದ. ಚಾಂದ್ರಮಸಿಯೆನ್ನುವ ಮಡದಿಯಲ್ಲಿ ಶಂಯು, ನಿಶ್ಚ್ಯವನ, ವಿಶ್ವಜಿತ್, ವಿಶ್ವಭುಕ್, ಬಡಬಾಗ್ನಿ, ಸ್ವಿಷ್ಟಕೃತರೆಬ ಆರು ಮಂದಿ ಪುತ್ರರೂ, ಸ್ವಾಹಾ ಎನ್ನುವ ಪುತ್ರಿಯೂ ಜನಿಸಿದರು.
ಕಚ ಬೃಹಸ್ಪತಿಯ ಮಗ. ಶುಕ್ರಾಚಾರ್ಯರಲ್ಲಿ ‘ಮೃತಸಂಜೀವಿನಿ’ ವಿದ್ಯೆಯನ್ನು ಕಲಿತ ಸಾಧಕ. ಜ್ಯೋತಿಷ್ಯ ಶಾಸ್ತ್ರದಲ್ಲಿ ‘ಗುರು’ ಅಂದರೆ ಬೃಹಸ್ಪತಿ ಶುಭಗ್ರಹ. ಗುರುವು ಜ್ಞಾನ, ಬುದ್ಧಿವಂತಿಕೆ, ಧರ್ಮ, ಆಧ್ಯಾತ್ಮಕತೆ, ತತ್ವಶಾಸ್ತ್ರಗಳ ಪ್ರತೀಕ. ದೇಶದೆಲ್ಲೆಡೆ ಬೃಹಸ್ಪತಿ ಮಂದಿರಗಳಿವೆ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ

ಅಕ್ರಮವಾಗಿ ಸುಮಾರು 68 ಟನ್‌ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…

2 hours ago

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…

2 hours ago

2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |

ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…

12 hours ago

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…

13 hours ago

ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…

13 hours ago