ಮಲೆನಾಡಿನ ವಿಶೇಷ ಹಬ್ಬವಾದ ಭೂಮಿ ಹುಣ್ಣಿಮೆ, ರೈತಾಪಿ ಜನರ ಸಂಭ್ರಮ, ಸಡಗರದ ಹಬ್ಬವಾಗಿದ್ದು, ಭೂ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ.
ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ರೈತರು ವಿಶೇಷವಾಗಿ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ. ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ತಯಾರಿಸಿ ಭೂಮಿ ತಾಯಿಗೆ ಅರ್ಪಣೆ ಮಾಡುತ್ತಾರೆ. ಭೂಮಣ್ಣಿ ಬುಟ್ಟಿ ತಯಾರಿಸಿ ಚಿತ್ತಾರ ಬರೆದು ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಣೆ ಮಾಡುತ್ತಾರೆ. ಮನೆಯಲ್ಲಿ ತಯಾರಿಸಿದ ಭೋಜನಗಳನ್ನು ಹೊಲಕ್ಕೆ ಸಮರ್ಪಿಸಿ, ನಂತರ ಹೊಲದಲ್ಲೇ ರೈತ ಕುಟುಂಬ ಸಾಮೂಹಿಕ ಊಟ ಮಾಡುತ್ತದೆ.
ವಿಜಯದಶಮಿ ಕಳೆದು ಬರುವ ಹುಣ್ಣಿಮೆಯೇ ಭೂಮಿ ಹುಣ್ಣಿಮೆ. ಮಲೆನಾಡಿನ ರೈತಾಪಿ ವರ್ಗ ಇದನ್ನು ಭೂಮಿ ಹುಣ್ಣಿಮೆ ಎಂದು ಆರಾಧಿಸಿದರೆ, ಬಯಲು ಸೀಮೆಯ ರೈತರು ಸೀಗೆ ಹುಣ್ಣಿಮೆ ಎಂದು ಆಚರಿಸುತ್ತಾರೆ. ಆಯಾ ಜಿಲ್ಲೆಗಳ ನಿಯಮ, ಸಂಪ್ರದಾಯದ ಪ್ರಕಾರ ಈ ಆಚರಣೆ ನಡೆಯುತ್ತದೆ. ಅಂದರೆ ಹೊಲದಲ್ಲಿ ಇರುವ ಪೈರನ್ನು ಗರ್ಭವತಿ ಎಂದು ಕಲ್ಪಿಸಿಕೊಂಡು ಈ ವಿಶಿಷ್ಟ ಆಚರಣೆ ನಡೆಯುತ್ತದೆ.