ಅಸ್ಸಾಂ ಮೂಲಕ ಬರ್ಮಾದಿಂದ ಅಡಿಕೆ ಮಾತ್ರವಲ್ಲ ಕಾಳುಮೆಣಸು ಕೂಡಾ ಕಳ್ಳಸಾಗಾಣಿಕೆಯಾಗುತ್ತಿದೆ. ಈಚೆಗೆ ಪೊಲೀಸರು ಬಿಗು ತಪಾಸಣೆ ಮಾಡುವ ವೇಳೆ ಸುಮಾರು 1 ಕೋಟಿ ರೂಪಾಯಿ ಮೌಲ್ಯದ 13,500 ಕೆಜಿ ಬರ್ಮಾ ಕಾಳುಮೆಣಸನ್ನು ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ಪೊಲೀಸರು ನಾಗಾಲ್ಯಾಂಡ್‌ನ ಗಡಿಯಲ್ಲಿರುವ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಚೆಕ್ ಗೇಟ್‌ನಲ್ಲಿ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಕಾಳುಮೆಣಸು ವಶಪಡಿಸಿಕೊಂಡಿದ್ದಾರೆ. ಕಾಳುಮೆಣಸು ದಿಮಾಪುರ್‌ನಿಂದ ತರಲಾಗುತ್ತಿತ್ತು. ಮೇಘಾಲಯಕ್ಕೆ ಬಂದು ಅಲ್ಲಿಂದ ಉತ್ತರ ಭಾರತಕ್ಕೆ ಕಳ್ಳಸಾಗಾಣೆಯಾಗುತ್ತದೆ ಎಂದು ಪೊಲೀಸರು ತಪಾಸಣೆ ಬಳಿಕ ತಿಳಿಸಿದ್ದಾರೆ. ಈ ಅಕ್ರಮ ಸಾಗಾಟದಲ್ಲಿ ರಾಜಸ್ಥಾನ ಮೂಲಕ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನ ಹೇಳಿಕೆಯ ಆಧಾರದ ಮೇಲೆ ಪೊಲೀಸರು ನಾಗಾಲ್ಯಾಂಡ್‌ನ ದಿಮಾಪುರದಿಂದ ನಿರ್ಮಲ್‌ಜೀತ್ ಸಿಂಗ್ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕ್ಯಾಂಪ್ಕೋ ಪತ್ರದಿಂದ ತಪಾಸಣೆ ಬಿಗು : ಅಡಿಕೆ ಕಳ್ಳಸಾಗಾಣಿಕೆ ನಿಲ್ಲಿಸಬೇಕು ಎಂದು ಕ್ಯಾಂಪ್ಕೋ ಮೇ ತಿಂಗಳಲ್ಲಿ ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿತ್ತು. ಭಾರತ ಮಾಯನ್ಮಾರ್ ಗಡಿಯ ಮೂಲಕ ಅಡಿಕೆ ಕಳ್ಳಸಾಗಾಣಿಕೆ ಆಗುತ್ತಿದೆ, ಇದನ್ನು ತಡೆಯಬೇಕು ಎಂದು ಒತ್ತಾಯಿಸಿತ್ತು. ಅದರ ಜೊತೆಗೆ ಕಾಳುಮೆಣಸು ಕೂಡಾ ಕಳ್ಳಸಾಗಾಣಿಕೆಯಾಗುತ್ತಿದೆ. ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಹೀಗಾಗಿ ಕಳ್ಳಸಾಗಾಣಿಕೆ ನಿರ್ಬಂಧಿಸಬೇಕು ಎಂದು ಪತ್ರದಲ್ಲಿ ತಿಳಿಸಿತ್ತು. ಹೀಗಾಗಿ ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಮಣಿಪುರದ ಗೇಟ್‌ಗಳಲ್ಲಿ ಬಿಗಿ ತಪಾಸಣೆಯಾಗುತ್ತಿದೆ. ಹಾಗಿದ್ದರೂ ಕಳ್ಳ ದಾರಿಗಳ ಮೂಲಕ ಪ್ರಯತ್ನ ನಡೆಯುತ್ತಿದೆ. ತ್ರಿಪುರಾ ಸೇರಿದಂತೆ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರನ್ನು ಕೂಡಾ ಯೋಜಿಸಿಕೊಂಡು ಅಡಿಕೆ ಕಳ್ಳಸಾಗಾಣಿಕೆಯ ಸತತ ಪ್ರಯತ್ನ ನಡೆಯುತ್ತಲೇ ಇದೆ. ಕಾಳುಮೆಣಸು ಹಾಗೂ ಅಡಿಕೆಯು ಕಳ್ಳಸಾಗಾಣಿಕೆ ಮೂಲಕ ಭಾರತದ ಮಾರುಕಟ್ಟೆಗೆ ಪ್ರವೇಶಿಸದಂತೆ ತಡೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕ್ಯಾಂಪ್ಕೋ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಬಳಿಕ ತಪಾಸಣೆ ಬಿಗುವಾಗಿದೆ. ಈ ಕಾರಣದಿಂದ ಕಳ್ಳಸಾಗಾಣಿಕೆ ಪ್ರಯತ್ನಗಳು ಈಗ ಬೆಳಕಿಗೆ ಬರುತ್ತಿವೆ ಹಾಗೂ ತಡೆಯೂ ಹೆಚ್ಚಾಗಿದೆ.