ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಅಸ್ಸಾಂ ರೈಫಲ್ಸ್ ಸಿಬ್ಬಂದಿಗಳ ತಂಡವು ಆಗಸ್ಟ್ 22 ಮತ್ತು 24 ರಂದು ಮಣಿಪುರದ ಕಾಮ್‌ಜಾಂಗ್ ಜಿಲ್ಲೆಯಲ್ಲಿ ಅಕ್ರಮ ಅಡಿಕೆ ಸಾಗಾಟವನ್ನು ಪತ್ತೆ ಮಾಡಿದ್ದಾರೆ. ಸುಮಾರು 4.8 ಕೋಟಿ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ 3 ಜನರನ್ನು ಬಂಧಿಸಲಾಗಿದೆ.
ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟದ ಮಾಹಿತಿ ಆಧಾರದಲ್ಲಿ ಅಸ್ಸಾಂ ರೈಪಲ್ಸ್ ತಂಡವು ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭ 209 ಚೀಲಗಳ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡಿದೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಆಧಾರದಲ್ಲಿ ತನಿಖೆ ನಡೆಸಿದ ಇಲಾಖೆಗಳಿಗೆ ಮಹತ್ವದ ಮಾಹಿತಿ ದೊರೆತಿದೆ. ಕಳೆದ ಕೆಲವು ಸಮಯಗಳಿಂದ ಬರ್ಮಾ ಅಡಿಕೆಯನ್ನು ಟನ್ ಗಟ್ಟಲೆ ಮಣಿಪುರದ ಮೂಲಕ ಭಾರತದ ಹೈದರಾಬಾದ್ , ಮಂಗಳೂರು ಹಾಗೂ ಅಹಮದಾಬಾದ್ ಮತ್ತು ಬೆಂಗಳೂರು ಕಡೆಗೆ ರವಾನೆಯಾಗಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು IFP ವರದಿ ಮಾಡಿದೆ.
ಮಣಿಪುರದಲ್ಲಿ ಗಲಭೆ ಹಾಗೂ ಆ ಕಾರಣದಿಂದ ನೂರಾರು ಜನರು ಸಾವಿಗೀಡಾದ ಸಂದರ್ಭದಲ್ಲಿ ಸುಮಾರು ಒಂಬತ್ತು ಟನ್ ಬರ್ಮಾ ಅಡಿಕೆಯನ್ನು ವಿಮಾನ ಸರಕು ಸೇವೆಯ ಮೂಲಕ ನಿಯಮಿತವಾಗಿ ಸಾಗಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಏಳು ಸದಸ್ಯರನ್ನೊಳಗೊಂಡ ಸಿಂಡಿಕೇಟ್ ಇಂಫಾಲ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ಕಾರ್ಗೋ ಸೇವೆಯ ಮೂಲಕ ಮ್ಯಾನ್ಮಾರ್ ಅಡಿಕೆಯ ವ್ಯಾಪಾರವನ್ನು ಇತರ ರಾಜ್ಯಗಳಿಗೆ ರಫ್ತು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು IFP ವರದಿಯಲ್ಲಿ ತಿಳಿಸಿದೆ. ಈ ಅಡಿಕೆಯನ್ನು ಕಾಮ್‌ಜಾಂಗ್ ಜಿಲ್ಲೆಯ ಕಸ್ಸೋಮ್ ಖುಲ್ಲೆನ್‌ನಿಂದ ಸಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಾಗಾಣಿಕೆಯಲ್ಲಿ ಪ್ರಮುಖ ರಾಜಕಾರಣಿಗಳು ಸೇರಿದಂತೆ ಕೆಲವು ಉನ್ನತ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ಆರು ವರ್ಷಗಳಲ್ಲಿ, ಅಸ್ಸಾಂ ಮತ್ತು ಅದರ ನೆರೆಯ ರಾಜ್ಯಗಳಾದ ಮಿಜೋರಾಂ ಮತ್ತು ಮಣಿಪುರದ ಹಲವಾರು ಸ್ಥಳಗಳಲ್ಲಿ ಶಂಕಿತ ಬರ್ಮಾ ಅಡಿಕೆಗಳನ್ನು ತುಂಬಿದ ಟ್ರಕ್‌ಗಳು ಮತ್ತು ರೈಲು ವ್ಯಾಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನೆರೆಯ ದೇಶಗಳಿಂದ ಅಡಿಕೆ ಕಳ್ಳಸಾಗಣೆ ಕುರಿತು ಭಾರತದಲ್ಲಿ 2021 ರಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಯಿತು. ಹಾಗಿದ್ದರೂ ಅಡಿಕೆ ಕಳ್ಳಸಾಗಾಣಿಕೆಗೆ ತಡೆಯಾಗಲಿಲ್ಲ.