ಚಾಲಿ ಅಡಿಕೆ ಮಾರುಕಟ್ಟೆ ಕಳೆದ ದಿನಗಳಿಂದ ನಿರುತ್ಸಾಹ ಕಂಡುಬಂದಿದೆ. ಹೊಸ ಚಾಲಿ ಅಡಿಕೆ 380 ಆಸುಪಾಸಿನಲ್ಲಿ ಹಾಗೂ ಹಳೆ ಚಾಲಿ ಅಡಿಕೆ 440 ಹಾಗೂ ಚೋಲ್ ಅಡಿಕೆ 470 ರೂಪಾಯಿ ಆಸುಪಾಸಿನಲ್ಲಿಯೇ ಇದೆ. ಸದ್ಯ ಯಾವುದೇ ಉತ್ಸಾಹ ಕಾಣುತ್ತಿಲ್ಲ ಮಾರುಕಟ್ಟೆಯಲ್ಲಿ. ಈ ನಡುವೆಯೇ ಬರ್ಮಾ ಅಡಿಕೆಯ ಆಸಕ್ತಿ ಇನ್ನೂ ಕಡಿಮೆಯಾಗಿಲ್ಲ. ಸೋಮವಾರ ಅಸ್ಸಾಂ ಗಡಿಭದ್ರತಾ ಪಡೆ ಮತ್ತೆ 249 ಚೀಲ ಅಡಿಕೆಯನ್ನು ವಶಕ್ಕೆ ಪಡೆದಿದ್ದಾರೆ.
ಅಡಿಕೆ ಕಳ್ಳಸಾಗಣೆ ಚಟುವಟಿಕೆಗಳ ವಿರುದ್ಧ ಅಸ್ಸಾಂ ರೈಫಲ್ಸ್ ನಿರಂತರ ಕೆಲಸ ಮಾಡುತ್ತಿದೆ. ಸೋಮವಾರ ಮಿಜೋರಾಂನ ಚಂಫೈ ಜಿಲ್ಲೆಯ ವಿಲ್ ಚುಂಗ್ಟೆಯ ಪ್ರದೇಶದಲ್ಲಿ 249 ಚೀಲ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ಅಡಿಕೆ ಸೇರಿದಂತೆ ಇತರ ವಸ್ತುಗಳ ಕಳ್ಳಸಾಗಣೆಯು ಮಿಜೋರಾಂ ರಾಜ್ಯ ಮತ್ತು ಇಡೀ ಭಾರತಕ್ಕೆ ಪ್ರಮುಖ ಕಳವಳವಾಗಿದೆ. ಅಸ್ಸಾಂ ರೈಫಲ್ಸ್ ಅಕ್ರಮ ಕಳ್ಳಸಾಗಣೆ ಚಟುವಟಿಕೆಗಳನ್ನು ಎದುರಿಸಲು ಸತತವಾಗಿ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ.
ಕಳೆದ ಕೆಲವು ಸಮಯಗಳಿಂದ ಬರ್ಮಾ ಅಡಿಕೆಯನ್ನು ಈಶಾನ್ಯ ರಾಜ್ಯಗಳ ಮೂಲಕ ಕಳ್ಳಸಾಗಾಣಿಕೆ ಮಾಡಿ ಭಾರತದೊಳಕ್ಕೆ ತರೆಲಾಗುತ್ತಿದೆ. ಇದಕ್ಕೆ ಸತತ ಕಡಿವಾಣ ಬೀಳುತ್ತಿದೆ. ಚಾಲಿ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಮೂಲಕ ತರಲು ಪ್ರಯತ್ನ ನಡೆಯುತ್ತಲೇ ಇದೆ. ಹೀಗೆ ವಶ ಪಡಿಸಿಕೊಂಡ ಅಡಿಕೆಯ ಆಮದುದಾರರು ಹಾಗೂ ಅದರ ಹಿಂದೆ ಇರುವ ಪ್ರಮುಖ ವ್ಯಕ್ತಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಹಾಗಿದ್ದರೂ ಮತ್ತೆ ಈ ಸಾಗಾಣಿಕೆ ನಡೆಯುತ್ತಿದೆ.