ರಾಜ್ಯದಲ್ಲಿ ಹಿಜಾಬ್, ಕೇಸರಿ ಶಾಲು, ಟಿಪ್ಪು ಪ್ರತಿಮೆ, ಶಾಲೆಗಳಿಗೆ ಕೇಸರಿ ಬಣ್ಣ ವಿವಾದದ ಬೆನ್ನಲ್ಲೇ ಮೈಸೂರಿನಲ್ಲಿ ಇನ್ನೊಂದು ವಿವಾದ ಸೃಷ್ಟಿಯಾಗುವ ಬೆನ್ನಲ್ಲೇ ಶಮನ ಮಾಡಲಾಗಿದೆ. ಮೈಸೂರಿನಲ್ಲಿ ಮಸೀದಿ ಮಾದರಿಯ ಬಸ್ ಶೆಲ್ಟರ್ ಗಳ ನಿರ್ಮಾಣ ಹೊಸದೊಂದು ವಿವಾದವನ್ನು ಹುಟ್ಟು ಹಾಕಿತ್ತು. ಇದಕ್ಕೆ ಹಲವೆಡೆಯಿಂದ ವಿರೋಧ ವ್ಯಕ್ತವಾಗಿತ್ತು. ಸಂಸದ ಪ್ರತಾಪ್ ಸಿಂಹ್ ಇಂತಹ ನಿಲ್ದಾಣಗಳನ್ನು ಒಡೆದು ಹಾಕುವುದಾಗಿ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಬಸ್ ಶೆಲ್ಟರ್ ವಿನ್ಯಾಸ ಬದಲಾಗಿದೆ. ಹೀಗಾಗಿ ವಿವಾದವೊಂದು ತಣ್ಣಗಾಗಿದೆ.
ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಹಲವೆಡೆಗಳಲ್ಲಿ ಮಸೀದಿ ಮಾದರಿಯ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದ್ದು, ಸಂಸದ ಪ್ರತಾಪ್ ಸಿಂಹ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟಿಪ್ಪು ಪ್ರತಿಮೆ ನಿರ್ಮಾಣ ವಿಚಾರಗಳ ಬೆನ್ನಲ್ಲೇ ಈಗ ಇಂಥದ್ದೊಂದು ಬೆಳವಣಿಗೆಗಳು ನಡೆಯುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದರು.ಈ ಬೆನ್ನಲ್ಲೇ ರಾತ್ರೋ ರಾತ್ರಿ ಬಸ್ ಶೆಲ್ಟರ್ ಮಾದರಿ ಬದಲಾಗಿದೆ.ಇದೀಗ ಬಸ್ ಶೆಲ್ಟರ್ ಗುಂಬಜ್ ಮೇಲೆ ಕಳಶ ಪ್ರತಿಷ್ಠಾಪನೆ ಮಾಡಲಾಗಿದೆ. ಶಾಸಕ ಎಸ್ಎ ರಾಮದಾಸ್ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣದ ಶೆಲ್ಟರ್ನಲ್ಲಿ ಮೂರು ಗುಂಬಜ್‌ಗಳ ಮೇಲೆ ಕಳಸ ಮಾದರಿಯ ಆಕೃತಿ ನಿರ್ಮಾಣ ಮಾಡಲಾಗಿದೆ.