ಲೋಕಸಭೆ ಚುನಾವಣೆಗೆ – 2024 (Loka sabha Election) ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಇದೀಗ ಚುನಾವಣೆ ಮುನ್ನ ಮತ್ತೊಮ್ಮೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA Act) ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ಆರಂಭಗೊಂಡಿದ್ದು, ಈಗಾಗಲೇ ಈಶಾನ್ಯದ ಕೆಲವು ರಾಜ್ಯಗಳಲ್ಲಿ ಪ್ರತಿಭಟನೆ ಶುರುವಾಗಿದೆ. ಇದರ ಬೆನ್ನಲ್ಲೇ ಅಮಿತ್ ಶಾ (Amit Shah) ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಕೇಂದ್ರ ಗೃಹ(Home Minister) ಸಚಿವ ಅಮಿತ್ ಶಾ, ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲಾಗುವುದು ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ.
2019ರ ಡಿಸೆಂಬರ್ ತಿಂಗಳಲ್ಲಿ ಸಂಸತ್ತು ಅಂಗೀಕರಿಸಿದ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದು, ಸಿಎಎ ಜಾರಿಗೊಳಿಸುವ ಭರವಸೆಯಿಂದ ಕಾಂಗ್ರೆಸ್ ಹಿಂದೆ ಸರಿಯುತ್ತಿದೆ ಎಂದು ಇದೇ ವೇಳೆ ಆರೋಪಿಸಿದ್ದಾರೆ. ಸಿಎಎ ಕಾಯ್ದೆ ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು ಎಂದಿರುವ ಅಮಿತ್ ಶಾ, ದೇಶ ವಿಭಜನೆಯಾದಾಗ ಮತ್ತು ಆ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಸ್ವಾಗತವಿದೆ ಮತ್ತು ಅವರಿಗೆ ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು ಎಂದು ಹೇಳಿದರು.
2019 ರಲ್ಲಿ ಮೋದಿ ಸರ್ಕಾರವು ಪರಿಚಯಿಸಿದ ಸಿಎಎ ಕಾಯ್ದೆಯು, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದು ಭಾರತಕ್ಕೆ ಆಗಮಿಸಿದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುವ ಗುರಿಯನ್ನು ಹೊಂದಿದೆ. ಏತನ್ಮಧ್ಯೆ, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಮಾತನಾಡಿದ ಶಾ, ಬಿಜೆಪಿ 370 ಮತ್ತು ಎನ್‌ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .
- ಅಂತರ್ಜಾಲ ಮಾಹಿತಿ