ಕೆಲವೊಮ್ಮೆ ಇಚ್ಛೆಗಳು ಮತ್ತು ಗುರಿ ಪ್ರಾಮಾಣಿಕವಾಗಿ ಇದ್ದರೆ ಯಾವುದೇ ಕಾರ್ಯದಲ್ಲಿ ಯಶಸ್ಸು ದೊರೆಯುತ್ತದೆ ಅಂತ ಪ್ರತಿಯೊಬ್ಬರಿಗೂ ಹಲವಾರು ಸಂದರ್ಭಗಳಲ್ಲಿ ಕಂಡಿರಬಹುದು. ಕಾಲ ಕೂಡಿ ಬರಬೇಕು ಎಂಬ ಮಾತಿನಲ್ಲಿ ನಾವು ಅದನ್ನು ಯಾವಾಗಲೂ ಹೇಳುತ್ತಿರುತ್ತೇವೆ. ಅದೇ ರೀತಿ ಪ್ರಕೃತಿಯೂ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಮತ್ತು ತನ್ನ ಸೃಷ್ಟಿಯನ್ನು ಕಾಪಾಡಿಕೊಳ್ಳಲು ಹಲವರನ್ನು ಹಲವಾರು ಸಂದರ್ಭಗಳಲ್ಲಿ ಉಪಯೋಗಿಸಿಕೊಳ್ಳುತ್ತದೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚಿನ ಗೋ ಪೂಜಾ ಕಾರ್ಯಕ್ರಮ ಸಾಕ್ಷಿಯಾಗಿದೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಮಲೆನಾಡು ಗಿಡ್ಡ ದೇಶಿ ದನದ ಮನೆ ಎಂಬ ವಾಟ್ಸಪ್ ಗುಂಪೊಂದು ಎಣ್ಮೂರು ಪ್ರಸನ್ನ ಭಟ್ಟರ ನೇತೃತ್ವದಲ್ಲಿ ರಚಿತವಾಗಿತ್ತು. ಸಮಾನಾಸಕ್ತ ಗೋಪ್ರೇಮಿಗಳು ಮಾಹಿತಿಗಳನ್ನು ಹಂಚಿಕೊಂಡು ಹೆಚ್ಚಾದ ಗೋವುಗಳಿಗೆ ಗತಿ ಏನೆಂದು ಪ್ರಶ್ನಿಸಿಕೊಂಡು ಪ್ರಶ್ನೆಯಾಗಿಯೇ ಉಳಿದಿತ್ತು. ಕಾಲದ ಮಹಿಮೆಯೋ, ಗೋ ಕುರಿತಾಗಿ ನಿರಾಸಕ್ತಿಯೋ, ಗಿಡ್ಡ ದನಗಳ ಉಪೇಕ್ಷೆಯೋ, ದುಡಿಯುವ ಮಂದಿಯ ಔದಾಸೀನ್ಯವೋ ಗೊತ್ತಿಲ್ಲ ಮಲೆನಾಡುಗಿಡ್ಡ ದನಗಳಂತೂ ವಿನಾಶದತ್ತ ಹೊರಟೇ ಬಿಟ್ಟಿತ್ತು. ತಿನ್ನುವ ಬಾಯಿಗಳಿಗೆ ಕೊರತೆ ಇಲ್ಲದ ಕಾರಣ ತಿಂದದ್ದೇ ಜಾಸ್ತಿ ಇರಬಹುದು.
ಇದೇ ಗುಂಪಿನ ಕೆಲವರ ಆಸಕ್ತಿಯಿಂದಾಗಿ ಗಿಡ್ಡವನ್ನು ಉಳಿಸಲು ಮಲೆನಾಡ ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನ ಎಂಬ ಹೊಸ ತಂಡ ಒಂದು ಉದಯಿಸಿ ಬಂತು. ರಾಜ್ಯದ ನಾನಾ ಊರುಗಳ ಗೋ ಆಸಕ್ತರು ಸದಸ್ಯರಾದರು. ಹಾಲಿಗೆ,ಗೊಬ್ಬರಕ್ಕೆ, ಗೌವ್ಯ ಉತ್ಪನ್ನಗಳಿಗೆ ಬೇಡಿಕೆಯ ಬಗ್ಗೆ ಒಂದಷ್ಟು ಪ್ರಚಾರ ನಡೆದರೂ ನಿರೀಕ್ಷಿತ ಪರಿಣಾಮವೆನ್ನೇನೂ ಬೀರಿರಲಿಲ್ಲ.
ಗುಂಪಿನ ಸದಸ್ಯರಾದ ನಾರಾಯಣ ಹೆಗಡೆ ಮತ್ತು ಶಾಂತಕ್ಕ ಎಂಬಿಬ್ಬರ ಆಸಕ್ತಿ ಗೋ ದಾನದ ಕಡೆಗೆ ವಾಲಿತು. ಮಲೆನಾಡ ಭಾಗವಾದ ಹೊನ್ನಾವರದ ಆಸುಪಾಸಿನಲ್ಲಿ ಇನ್ನೂ ಒಂದಷ್ಟು ಗಿಡ್ಡಗಳು ಉಳಿದಿವೆಯಂತೆ. ಸಾಕುವವರ ಸಂಖ್ಯೆ ವಿರಳ, ಗೋಮಾಳಗಳ ವಿನಾಶ, ಮೇವು ತಂದು ಹಾಕುವರೇ ಆರ್ಥಿಕ ಕೊರತೆ, ಮೇಯಲು ಬಿಟ್ಟಲ್ಲಿ ನಡೆಯುವ ನಿರಂತರ ಗೋಕಳ್ಳತನ ಈ ಎಲ್ಲದರ ಸಂಕಷ್ಟದಿಂದ ಪಾರಾಗಲು ರೈತರಿಗಿರುವ ದಾರಿಯೆಂದರೆ ಯಾರು ಕೊಳ್ಳುತ್ತಾರೋ ಅವರಿಗೆ ಕೊಡುವುದು ಅಥವಾ ದಾನವಾಗಿ ನೀಡುವುದು. ಗೋವಿನ ನೋವಿನ ಮತ್ತು ಗೋವಿನ ಕೂಗಿನ ಅರಿವಿದೆ. ಆದರೆ ರೈತನ ಕೂಗು ಕೇಳದಾಗಿದೆ. ಈ ಇಬ್ಬರು ಮಹನೀಯರು ದಾನಕ್ಕೆ ಕೈ ಓಡ್ಡುವವರು ಯಾರಾದರೂ ಇದ್ದಲ್ಲಿ ಗೋವನ್ನು ಕೊಡಿಸುವ ಜವಾಬ್ದಾರಿ ಹೊತ್ತರು. ಅದರ ಪರಿಣಾಮವಾಗಿ ದಕ್ಷಿಣ ಕನ್ನಡದ ಪುತ್ತೂರು ಸುಳ್ಯ ಆಸು ಪಾಸಿಗೆ ಒಂದಷ್ಟು ಜೋಡಿಗಳು( ಮನೆಗೊಂದು ಗಂಡು-ಹೆಣ್ಣು ಒಟ್ಟಾಗಿ ) ಬಂದವು. ಗೋ ಪೂಜೆ ಎಂಬ ಸರಳ ಕಾರ್ಯಕ್ರಮವನ್ನು ಸುಳ್ಯ ತಾಲೂಕು, ಮುರುಳ್ಯ ಗ್ರಾಮದ ಅಕ್ಷಯ ಆಳ್ವ ಎಂಬ ಗೋ ಪ್ರೇಮಿ ರೈತರ ಮನೆಯಲ್ಲಿ ನಡೆಸಿ ಆರತಿ ಬೆಳಗಿ ಮೇವು ಹಾಕಿ ಗೋದಾನ ನಡೆಯಿತು. ಆ ಗೋಪೂಜೆ ಕಾರ್ಯಕ್ರಮದ ಇಚ್ಛೆಯ ಮೊರೆ ಮತ್ತು ಗೋವಿನ ಮೊರೆ ದೇವ ದೇವನಿಗೆ ಕೇಳಿರಬೇಕು. ಕರ್ನಾಟಕದ ವಿವಿಧ ಮೂಲೆ ಮೂಲೆಗಳಿಂದ ಗಿಡ್ಡ ಗೋವಿನ ಬಗ್ಗೆ ಬೇಡಿಕೆಗಳು ಬಂದವು. ನಲವತ್ತು ಜೋಡಿಗಳಷ್ಟು ರಾಜ್ಯದ ಬೇರೆಬೇರೆ ಕಡೆಗಳಿಗೆ ಗೋ ದಾನ ಮಾಡಿ ಗೋವಿಗೆ ಜೀವದಾನವಾಗಿದೆ.
ಪ್ರಚಾರ ಯುಗದಲ್ಲಿ ಈ ಕಾರ್ಯಕ್ರಮಗಳಿಗೆ ಪ್ರಚಾರವು ಸಿಕ್ಕಿತು. ದೂರದ ಕಿತ್ತೂರು ಚೆನ್ನಮ್ಮನ ಊರಿಗೆ, ಕಿತ್ತೂರು ಮಠದ ವೀರೇಶ್ವರ ಸ್ವಾಮಿಗಳ ಕಿವಿಗೂ ಈ ಸುದ್ದಿ ಬಿತ್ತು. ಮಲೆನಾಡು ಗಿಡ್ಡದ ಬಗ್ಗೆ ಆಸಕ್ತಿ ಇತ್ತು, ಸಾಕಬೇಕೆಂಬ ಹಂಬಲ ಇತ್ತು, ವಿಶೇಷತೆಯ ಬಗ್ಗೆ ಕೇಳಿ ಗೊತ್ತಿತ್ತು. ಸ್ವತಹ ಸ್ವಾಮೀಜಿಗಳೇ ಹೊನ್ನಾವರದ ಆಸುಪಾಸಿಗೆ ಬಂದರು. ಗೋ ದಾನವನ್ನು ಸ್ವೀಕರಿಸಿದರು. ಮನ ತುಂಬಾ ಹರಸಿದರು. ಇದುವೇ ಅಲ್ಲವೇ ಗೋ ಪೂಜೆಯ ಮಹಾತ್ಮೆ.
ನಾನು ಮೇಲೆ ಹೇಳಿದ ಇಚ್ಛೆ ಮತ್ತು ಗುರಿ ಪ್ರಾಮಾಣಿಕವಾಗಿ ಇದ್ದರೆ ದೈವ ಸಹಾಯ ಹೇಗೆ ಒದಗಿ ಬರುತ್ತದೆ ಎಂಬುದಕ್ಕೆ ಈ ಘಟನೆಗಳೆಲ್ಲ ಸಾಕ್ಷಿಯಾಗಿದೆ. ಮನುಷ್ಯರ ಬದುಕಿಗಾಗಿ, ಭೂಮಿಯ ಆರೋಗ್ಯಕ್ಕಾಗಿ ಪ್ರಕೃತಿ ತಾನೇ ಸೃಷ್ಟಿಸಿದ ಅಮೂಲ್ಯ ಗೋಸಂಪತ್ತು ತನ್ನ ತವರಿನಲ್ಲಿ ವಿನಾಶದತ್ತ ಹೊರಟಿದ್ದರೂ ಮತ್ತೊಂದು ಊರಿನಲ್ಲಿ ತನ್ನ ಅಸ್ಮಿತೆಯನ್ನು ಸ್ಥಾಪಿಸಿಕೊಂಡು ಬೆಳಗ ಹೊರಟಿದೆ. ಮಥುರೆಯಲ್ಲಿ ಹುಟ್ಟಿದ ಶ್ರೀ ಕೃಷ್ಣ ನಂದಗೋಕುಲದಲ್ಲಿ ಬೆಳೆದಂತೆ ಮತ್ತು ಬೆಳಗಿದಂತೆ.
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಮಲೆನಾಡು ಗಿಡ್ಡವಾಗಿರು….. ಜೈ ಗೋಮಾತಾ.🙏