ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಾಗೂ ಕಾಸರಗೋಡು ಜಿಲ್ಲೆಯ ವಿವಿದೆಡೆ ಅಡಿಕೆ ಹಳದಿ ಎಲೆರೋಗಕ್ಕೆ ಸಂಬಂಧಿಸಿ ತಕ್ಷಣವೇ ಸೂಕ್ತ ಕ್ರಮವಾಗಬೇಕು, ಕ್ಯಾಂಪ್ಕೋ ಮೂಲಕ ಸಂಶೋಧನೆಗೆ ನೆರವು ಅಗತ್ಯ ಇದೆ ಎಂದು ಸದಸ್ಯರು ಕ್ಯಾಂಪ್ಕೋ(CAMPCO) ಮಹಾಸಭೆಯಲ್ಲಿ ಒತ್ತಾಯಿಸಿದರು. ಈ ಬಗ್ಗೆ ಸುದೀರ್ಘ ಚರ್ಚೆ ನಡೆದು, ಮುಂದಿನ ತಿಂಗಳೊಳಗೆ ಕ್ಯಾಂಪ್ಕೋದಲ್ಲಿ ಅಡಿಕೆ ಸಂಶೋಧನಾ ಪ್ರತಿಷ್ಟಾನ (ARDF) ಹಾಗೂ ತಜ್ಞರು ಮತ್ತು ವಿವಿಧ ಸಂಘಟನೆಗಳು ಜೊತೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಮಂಗಳೂರಿನ ಸಂಘನಿಕೇತನದಲ್ಲಿ ಶನಿವಾರ ಕ್ಯಾಂಪ್ಕೋದ 48ನೇ ವಾರ್ಷಿಕ ಮಹಾಸಭೆ (Campco Annual Meet) ನಡೆಯಿತು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಮುಖವಾಗಿ ಅಡಿಕೆ ಹಳದಿ ಎಲೆರೋಗದ ಬಗ್ಗೆ ದಕ ಜಿಲ್ಲೆಯ, ಕಾಸರಗೋಡು ಜಿಲ್ಲೆಯ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪ್ರಮುಖರು ಸಭೆಯಲ್ಲಿ ಮಾತನಾಡಿದರು. ಅಡಿಕೆ ಹಳದಿ ಎಲೆರೋಗದಿಂದ (Arecanut Yellow Leaf Disease) ಕೃಷಿಕರು ಕಂಗಾಲಾಗಿದ್ದಾರೆ. ಸುಳ್ಯದ ಸಂಪಾಜೆಯಲ್ಲಿ ವ್ಯಾಪಕವಾಗಿದೆ, ಕೃಷಿಕರು ಕಂಗೆಟ್ಟಿದ್ದಾರೆ, ಹೀಗಾಗಿ ಕ್ಯಾಂಪ್ಕೋ ಮೂಲಕವೇ ಹಳದಿ ಎಲೆರೋಗಕ್ಕೆ ಸಂಶೋಧನೆ, ಹಳದಿ ಎಲೆರೋಗಕ್ಕೆ ಪರಿಹಾರಕ್ಕೆ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಆದರೆ ಕ್ಯಾಂಪ್ಕೋ ಬೈಲಾ ಪ್ರಕಾರ ಅಡಿಕೆ ಹಳದಿ ಎಲೆರೋಗಕ್ಕೆ ನೇರವಾಗಿ ಯಾವುದೇ ನೆರವು ನೀಡಲು ಸಾಧ್ಯವಾಗುತ್ತಿಲ್ಲ. ಆದರೆ ಅಡಿಕೆ ಸಂಶೋಧನಾ ಪ್ರತಿಷ್ಟಾನ ಮೂಲಕ ಅಡಿಕೆ ಬೆಳೆಗಾರರ ಸಂಘಗಳು ಹಾಗೂ ಇತರ ಸಂಘಗಗಳ ಮೂಲಕ ಅಡಿಕೆ ಹಳದಿ ಎಲೆರೋಗ ಸಂಶೋಧನೆ ಸಾಧ್ಯವಿದೆ. ಇದಕ್ಕಾಗಿ ಮುಂದಿನ ತಿಂಗಳೊಳಗೆ ಕ್ಯಾಂಪ್ಕೋದಲ್ಲಿ ಸಭೆ ನಡೆಸುವುದಾಗಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಕ್ಯಾಂಪ್ಕೋ ಈಗಾಗಲೇ ಅಡಿಕೆ ಹಳದಿ ಎಲೆರೋಗಕ್ಕೆ ಸಂಬಂಧಿಸಿದಂತೆ ರಾಜ್ಯ, ಕೇಂದ್ರ ಸರ್ಕಾರದ ಗಮನಕ್ಕೆ ತಂದಿದೆ. ರಾಜ್ಯ ಸರ್ಕಾರ 25 ಕೋಟಿ ಬಿಡುಗಡೆ ಮಾಡಿದೆ. ಇದಕ್ಕೆ ಕ್ಯಾಂಪ್ಕೋ ಪ್ರಮುಖ ಕಾರಣ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು. ಅಡಿಕೆ ವಿವಿಧ ಸಮಸ್ಯೆಗೆ ಸಂಬಂಧಿಸಿ ARDF ಮೂಲಕವೂ ಹಲವು ಸಂಶೋಧನೆ ನಡೆಸಲಾಗಿದೆ. ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಅಪಾಯ ದೂರ ಮಾಡಲು ಈಗಾಗಲೇ ಅಡಿಕೆ ಸಂಶೋಧನೆ ಹಾಗೂ ಅಭಿವೃಧ್ಧಿ ನಿಧಿಯಿಂದ ಎ ಆರ್ ಡಿ ಎಫ್ ಮೂಲಕ ನೀಡಲಾಗಿದೆ. ಆ ವರದಿಯೂ ಸದ್ಯದಲ್ಲೇ ಬರಲಿದೆ. ಇದೇ ಮಾದರಿಯಲ್ಲಿ ಅಡಿಕೆ ಹಳದಿ ಎಲೆರೋಗದ ಬಗ್ಗೆಯೂ ಅಧ್ಯಯನ ಮಾಡಲು ARDF ಹಾಗೂ ಅಡಿಕೆ ಬೆಳೆಗಾರರ ಪ್ರಮುಖರ ಜೊತೆ ಸಭೆ ನಡೆಸಿ ಮುಂದಿನ ತಿಂಗಳೊಳಗೆ ARDF ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆಯವರನ್ನೂ ಭೇಟಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಅಡಿಕೆ ಬೆಳೆಗಾರರು ಅಡಿಕೆ ಹಳದಿ ಎಲೆರೋಗದ ಬಗ್ಗೆ ಗಂಭೀರವಾಗಿ ಧ್ವನಿ ಎತ್ತಿದರು. ಕ್ಯಾಂಪ್ಕೋ ಈ ಬಗ್ಗೆ ಅತ್ಯಂತ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ಅಡಿಕೆ ಮಾರುಕಟ್ಟೆ ಮಾತ್ರವಲ್ಲ ಅಡಿಕೆ ಬೆಳೆಗಾರರ ಹಿತದ ಕಡೆಗೂ ಗಮನಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಅಡಿಕೆ ಹಳದಿ ಎಲೆರೋಗಕ್ಕೆ ಸಂಬಂಧಿಸಿ ಪ್ರಮುಖರಾದ ಎಂ ಜಿ ಸತ್ಯನಾರಾಯಣ, ಡಿ ಬಿ ಬಾಲಕೃಷ್ಣ ,ಸುಬ್ರಹ್ಮಣ್ಯ, ಅನಂತ ಭಟ್ ಮಚ್ಚಿಮಲೆ, ಶ್ರೀಕೃಷ್ಣ ಭಟ್ ಕೊಪ್ಪರತೋಟ, ನಾಗೇಶ್ ಕುಂದಲ್ಪಾಡಿ, ವಿಶ್ವನಾಥ ರೈ ಕಳಂಜ, ರಾಧಾಕೃಷ್ಣ ಕೋಟೆ, ಮಹೇಶ್ ಪುಚ್ಚಪ್ಪಾಡಿ ಸೇರಿದಂತೆ 1೦ಕ್ಕೂ ಹೆಚ್ಚು ಜನರು ಮಾತನಾಡಿದರು.
ಅಡಿಕೆ ವಹಿವಾಟಿನಲ್ಲಿ ಶೇ.5 ಜಿಎಸ್‍ಟಿ ಸರ್ಕಾರಕ್ಕೆ ಪಾವತಿಸಲಾಗುತ್ತಿದ್ದು, 350 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಮೊತ್ತ ಸರ್ಕಾರಕ್ಕೆ ಪಾವತಿಸಲಾಗಿದೆ. ಇದರಲ್ಲಿ ಶೇ.1 ಮೊತ್ತವನ್ನು ಸಂಶೋಧನೆಗೆ ಬಳಕೆ ಮಾಡಲು
ಕಲ್ಪಿಸುವಂತೆ ಮಹಾಸಭೆಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಒತ್ತಾಯಿಸಿ, ಸರ್ಕಾರದ ಗಮನಕ್ಕೆ ಈಗಾಗಲೇ ತರಲಾಗಿದೆ ಎಂದರು.