ಡ್ರೈಫ್ರುಟ್ಸ್ ಗಳ ಹೆಸರಿನಲ್ಲಿ ಹಾಗೂ ಬೇರೆಬೇರೆ ರೂಪದಲ್ಲಿ ವಿದೇಶಗಳಿಂದ ಕಳ್ಳಸಾಗಾಣಿಕೆ ಮೂಲಕ ಭಾರತೀಯ ಮಾರುಕಟ್ಟೆಗೆ ಅಡಿಕೆ ಲಗ್ಗೆ ಇಡುತ್ತಿತ್ತು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಆದಾಯ ಗುಪ್ತಚರ ನಿರ್ದೇಶನಾಲಯದ (DRI) ಕಾರ್ಯವನ್ನು ಕ್ಯಾಂಪ್ಕೋ ಶ್ಲಾಘಿಸಿದೆ.
ವಿದೇಶಿ ಅಡಿಕೆಯು ಡ್ರೈಫ್ರುಟ್ಸ್ ಗಳ ನೆಪದಲ್ಲಿ ಅಡಿಕೆಯನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು. ಭಾರತೀಯ ಅಡಿಕೆ ಮಾರುಕಟ್ಟೆಯ ಮೇಲೆ ಈ ಅಡಿಕೆಯು ಪರಿಣಾಮ ಬೀರುತ್ತಿತ್ತು. ಅಡಿಕೆ ಸ್ಥಿರಧಾರಣೆಯ ಮೇಲೂ ಪರಿಣಾಮ ಬೀರುತ್ತಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಕ್ಯಾಂಪ್ಕೋ ಸೂಕ್ತ ಮಾಹಿತಿಗಳನ್ನು ಕಾಲ ಕಾಲಕ್ಕೆ ನೀಡುತ್ತಾ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿತ್ತು.
ಈ ಬಗ್ಗೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಪತ್ರ ಮುಖೇನ ಮನವಿ ಮಾಡಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆಯ ಮೂಲಕವೂ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಕಳ್ಳಸಾಗಾಣಿಕೆಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನೂ ಕೇಂದ್ರ ಸರ್ಕಾರ ನೀಡಿದೆ.ಕೇಂದ್ರದ ಕೃಷಿ,ಕಂದಾಯ , ವಾಣಿಜ್ಯ ಹಾಗೂ ಹಣಕಾಸು ಸಚಿವರುಗಳು ಆಯಾ ಇಲಾಖೆಗಳಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನಗಳನ್ನು ನೀಡಿರುತ್ತಾರೆ ಎಂದು ಕ್ಯಾಂಪ್ಕೋ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ನಿರ್ದೇಶನದಂತೆ ಆದಾಯ ಗುಪ್ತಚರ ನಿರ್ದೇಶನಾಲಯ (DRI), ಕಟ್ಟುನಿಟ್ಟಾಗಿ ತಪಾಸಣೆ ನಡೆಸುತ್ತಿದೆ. ಪರಿಣಾಮವಾಗಿ ಡ್ರೈಫ್ರುಟ್ಸ್ ಹೆಸರಿನಲ್ಲಿ ಬರುವ ವಿದೇಶಿ ಅಡಿಕೆಯನ್ನು ತಡೆಹಿಡಿದು ತಪಾಸಣೆ ನಡೆಸಿ ವಶಪಡಿಸಿಕೊಳ್ಳುತ್ತಿರುವುದರ ಬಗ್ಗೆ ಕ್ಯಾಂಪ್ಕೊ ಸಂತಸ ವ್ಯಕ್ತಪಡಿಸುತ್ತದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ವಿದೇಶದಿಂದ ಬೇರೆಬೇರೆ ಆಹಾರ ಪದಾರ್ಥಗಳ ಹೆಸರಿನಲ್ಲಿ ಆಮದು ಮಾಡುವ ಅಡಿಕೆಯನ್ನು ತಡೆದು ವಶಪಡಿಸಿಕೊಳ್ಳಲು ಕೇಂದ್ರದ ನಿರ್ದೇಶನವನ್ನು ಕಟ್ಟನಿಟ್ಟಾಗಿ ಜಾರಿಗೆ ತಂದಿರುವುದರ ಕಾರಣ, ಅಡಿಕೆಯ ಕಳ್ಳಸಾಗಾಣಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.ಇದರಿಂದ ಅಡಿಕೆಯ ಧಾರಣೆಯಲ್ಲಿ ಸ್ಥಿರತೆ ಕಾಣಲು ಸಾಧ್ಯವಾಗಿದೆ ಎಂದು ಕಿಶೋರ್ ಕುಮಾರ್ ತಿಳಿಸಿದ್ದಾರೆ.