ಅಡಿಕೆ ಕೃಷಿಕ ಸಮುದಾಯದ ಸಮಸ್ಯೆ ಕುಗ್ಗಿಸಲು ಮಂಗಳೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ ದೋಟಿಯ ಮೂಲಕ ಅಡಿಕೆ ಕೌಶಲ್ಯ ಪಡೆ ತರಬೇತಿ ನೀಡಲು ನಿರ್ಧರಿಸಿದೆ. ಈ ಕಾರ್ಯಕ್ರಮಕ್ಕೆ ಕೃಷಿಕರ ಮಾಧ್ಯಮ ಅಡಿಕೆ ಪತ್ರಿಕೆ ಹಾಗೂ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ಗಳು ಸಹಭಾಗಿತ್ವ ನೀಡಲಿವೆ.
ಈ ಬಗ್ಗೆ ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ , ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ , ಪತ್ರಿಕೆಯ ಸಂಪಾದಕ – ಪ್ರಕಾಶಕ ರಾಮಕೃಷ್ಣ ಶಾಸ್ತ್ರಿ ಸಲಹೆ ನೀಡಿದರು.
ತರಬೇತಿಯು ಜನವರಿ ತಿಂಗಳಲ್ಲಿ ವಿಟ್ಲದ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನೆ ಸಂಸ್ಥೆಯಲ್ಲಿ(CPCRI) ನಡೆಯಲಿದೆ. ಮೂರು ದಿನಗಳ ಈ ತರಬೇತಿಯಲ್ಲಿ ಆಯ್ದ ಇಪ್ಪತ್ತು ಜನರಿಗೆ ಅವಕಾಶ ಇರುತ್ತದೆ.
ಅನುಭವಿ ತರಬೇತುದಾರರು ಫೈಬರ್ ಕಾರ್ಬನ್ ದೋಟಿ ಬಳಸಿ ಅಡಿಕೆ ಕೊಯ್ಲು ಮತ್ತು ಸಿಂಪಡಣೆ ಮಾಡಲು ಕಲಿಸಲಿದ್ದಾರೆ. ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸದಸ್ಯರು ಶಿಬಿರದಲ್ಲಿ ಭಾಗವಹಿಸಬಹುದು. ಉಳಿದ ವಿವರಗಳನ್ನು ಮುಂದೆ ತಿಳಿಸಲಾಗುತ್ತದೆ ಎಂದು ಕ್ಯಾಂಪ್ಕೋ ತಿಳಿಸಿದೆ.
ಮೂರು ವರ್ಷ ಹಿಂದೆ ಕ್ಯಾಂಪ್ಕೋ ಅಡಿಕೆ ಮರ ಏರಿ ಕೊಯ್ಲು – ಸಿಂಪಡಣೆ ಮಾಡಲು ಎರಡು ತರಬೇತಿ ಶಿಬಿರ ನಡೆಸಿತ್ತು. ಈ ಶಿಬಿರದಲ್ಲಿ ಕೊನೆಗಾರ ವಿದ್ಯೆ ಕಲಿತ ಹಲವರು ಈ ವೃತ್ತಿ ಮುಂದುವರಿಸಿದ್ದು ಬದುಕನ್ನೂ ಹಸನು ಮಾಡಿಕೊಂಡಿದ್ದಾರೆ.