ನಿರಂತರ ಸುರಿಯುತ್ತಿರುವ ಮಳೆಯುಂದಾಗಿ ಮುಂಬರುವ ಅಡಿಕೆ ಬೆಳೆ ಭಾಗಶಃ ನಾಶವಾಗಿದ್ದು, ಇದೇ ರೀತಿ ಮಳೆ ಸುರಿದಲ್ಲಿ ಹೆಚ್ಚಿನ ಬೆಳೆ ನಾಶವಾಗಲಿದೆ. ಅಡಿಕೆ ಬೆಳೆನಾಶದ ಬಗ್ಗೆ ಸಮೀಕ್ಷೆ ನಡೆಸಿ , ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುವಂತೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.
ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ , ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಜಾಸ್ತಿ ಮುಂಗಾರು ಮಳೆ ಸುರಿಯುತ್ತಿದೆ. ಈಗಾಗಲೇ ಎರಡು ಬಾರಿ ಔಷಧಿ ಸಿಂಪಡಿಸಿದರೂ ಎಡೆಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮ ಕೊಳೆರೋಗದಿಂದ ಈಗಾಗಲೇ ಅರ್ಧ ಬೆಳೆನಾಶವಾಗಿ ಹೋಗಿದೆ. ಅಳಿದುಳಿದ ಬೆಳೆರಕ್ಷಣೆಗೆ ರೈತರು ಹೆಣಗಾಡುತ್ತಿದ್ದರೂ ಪರಿಣಾಮ ಶೂನ್ಯ. ಹತಾಶೆಯಿಂದ ರೈತರು ಪರಿಹಾರಕ್ಕಾಗಿ ಸರಕಾರದ ಕಡೆ ಆಶಾಭಾವನೆಯಿಂದ ನೋಡುತ್ತಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣವೇ ಗಮನಹರಿಸಬೇಕು. ಬೆಳೆನಷ್ಟದ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಂದ ಸಮೀಕ್ಷೆ ನಡೆಸಬೇಕು. ಬೆಳೆನಾಶದಿಂದ ಉಂಟಾದ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡುವಂತೆ ಕ್ಯಾಂಪ್ಕೊ ಅಧ್ಯಕ್ಷರು ಸಮಸ್ತ ಬೆಳೆಗಾರರ ಪರವಾಗಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.




