ಅಡಿಕೆ ಬೆಳೆಗಾರರ ಸಂಸ್ಥೆ ಆರಂಭವಾದ್ದು ಅಡಿಕೆ ಧಾರಣೆಯ ಸಂಕಷ್ಟ ಕಾಲದಲ್ಲಿ. ಅಂದಿನಿಂದ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಕ್ರಿಯ ಪಾತ್ರ ವಹಿಸುವ ಮೂಲಕ ಅಡಿಕೆ ಬೆಳೆಗಾರರ ರಕ್ಷಣೆಗೆ ಮುಂದಾಗಿದೆ. ಇದೀಗ ಈ ಸಂಸ್ಥೆಗೆ 50 ವರ್ಷದ ಸಂಭ್ರಮ. ಈ ಸಂಭ್ರಮದ ನಡುವೆ ಇನ್ನೊಂದು ಮಹತ್ವದ ಹಜ್ಜೆಯನ್ನು ಕ್ಯಾಂಪ್ಕೋ ಇರಿಸಿತ್ತು. ಆಮದು ಅಡಿಕೆ ದರವನ್ನು 350 ರೂಪಾಯಿಗೆ ಏರಿಕೆ ಮಾಡಬೇಕು ಎಂದು ಒತ್ತಾಯವನ್ನು ಕ್ಯಾಂಪ್ಕೋ ಮಾಡಿತ್ತು. ಸುವರ್ಣ ಸಂಭ್ರಮದಲ್ಲಿ ಅಡಿಕೆ ಮಾರುಕಟ್ಟೆಗೆ ಈ ಕೊಡುಗೆಯನ್ನು ಸರ್ಕಾರ ನೀಡಬಹುದೇ ಎಂಬ ನಿರೀಕ್ಷೆ ಬೆಳೆಗಾರರಲ್ಲಿದೆ.
1971-72 ರ ಸುಮಾರಿಗೆ ನಾಡಿನ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದರು. ಅಡಿಕೆ ಧಾರಣೆ ಕುಸಿತವಾಗಿ ಬೆಳೆಗಾರರು ಕಂಗಾಲಾಗಿದ್ದರು. 2-3 ರೂಪಾಯಿಗೆ ಕೆಜಿ ಅಡಿಕೆ ಖರೀದಿ ನಡೆಯುವ ಸಮಯ ಅದಾಗಿತ್ತು. ಆ ಸಮಯದಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರೂ, ಎಸ್‌ಕೆಸಿಎಂಎಸ್ , ಎಪಿಎಂಸಿ ಅಧ್ಯಕ್ಷರೂ ಆಗಿದ್ದ ವಾರಣಾಸಿ ಸುಬ್ರಾಯ ಭಟ್ ಹಾಗೂ ಅವರ ಜೊತೆ ಸಮಾನ ಮನಸ್ಕರ ಸಕ್ರಿಯ ತಂಡ ಜೊತೆಯಾಗಿ ಅಡಿಕೆ ಖರೀದಿ ನಡೆಸಲು ಹಾಗೂ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಅಂತರ್ ರಾಜ್ಯ ಸಹಕಾರಿ ಸಂಸ್ಥೆಯನ್ನು ಸ್ಥಾಪಿಸಲು ಮುಂದಾದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಎಲ್ಲಾ ಪದಾಧಿಕಾರಿಗಳು ಅಂದು ಒಂದು ವರ್ಷಗಳ ಕಾಲ ಓಡಾಟ ನಡೆಸಿ, ಮನೆ ಮನೆಗೆ ತೆರಳಿ ಶೇರು ಸಂಗ್ರಹ ಮಾಡಿ 1973 ರಲ್ಲಿ ಕ್ಯಾಂಪ್ಕೋ ಸ್ಥಾಪನೆ ಮಾಡಿದ್ದರು. ಅಂದಿನಿಂದ ವಾರಣಾಸಿ ಸುಬ್ರಾಯ ಭಟ್ಟರು ಕ್ಯಾಂಪ್ಕೋ ಅಧ್ಯಕ್ಷರಾದರು, ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗಿತು. ಅಂದಿನಿಂದ ಅಡಿಕೆ ಬೆಳೆಗಾರರ ಹಿತವನ್ನು ಕ್ಯಾಂಪ್ಕೋ ಕಾಯ್ದುಕೊಂಡಿದೆ. ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿ ಕ್ಯಾಂಪ್ಕೋ ಇದೆ.
ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯನ್ನು ಬೀಳದಂತೆ ಯಾವತ್ತೂ ಹಿಡಿದಿದೆ. ಒಂದು ಸಮಯದಲ್ಲಿ ಅಡಿಕೆ ಆಮದು ಸಮಸ್ಯೆ ವಿಪರೀತವಾಗಿ ಕಾಡಿದಾಗ ಅಡಿಕೆ ಆಮದು ದರ ನಿಗದಿಗೆ ಸರ್ಕಾರದ ಜೊತೆ ಒತ್ತಾಯ ಮಾಡಿತ್ತು, ಸದ್ಯ ಅದು ಏರಿಕೆಯಾಗಿ 251 ರೂಪಾಯಿ ಪ್ರತೀ ಕೆಜಿಗೆ ಇದೆ. ಈ ದರವನ್ನು ಏರಿಕೆ ಮಾಡಿ 350 ರೂಪಾಯಿ ನಿಗದಿ ಮಾಡಬೇಕು ಎಂಬ ಒತ್ತಾಯವನ್ನು ಕ್ಯಾಂಪ್ಕೋ ಈಗಿನ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ನೇತೃತ್ವದ ತಂಡ ಸರ್ಕಾವನ್ನು ಒತ್ತಾಯ ಮಾಡಿತ್ತು. ಈ ಬಗ್ಗೆ ಸರ್ಕಾರವು ಹಲವು ಹಂತದ ಪ್ರಯತ್ನ ನಡೆಸಿದ ಇದೀಗ ಕ್ಯಾಂಪ್ಕೋ ಸುವರ್ಣ ಮಹೋತ್ಸವದ ಸಂಭ್ರಮದ ಹೊತ್ತಿಗೆ ಆಮದು ಅಡಿಕೆ ದರ ಪ್ರತೀ ಕೆಜಿಗೆ 350 ರೂಪಾಯಿ ನಿಗದಿ ಮಾಡುವ ನಿರೀಕ್ಷೆ ಇದೆ.
ಕೇಂದ್ರ ಗೃಹ ಸಚಿವ, ಸಹಕಾರಿ ಸಚಿವ ಅಮಿತ್ ಶಾ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡುವ ವೇಳೆ ಅಡಿಕೆ ಆಮದು ದರವನ್ನು 350 ರೂಪಾಯಿ ಘೋಷಣೆ ಮಾಡುವ ನಿರೀಕ್ಷೆ ಬೆಳೆಗಾರರಿಗೆ ಇದೆ. ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಅಡಿಕೆ ಬೆಳೆಗಾರರಿಗೆ ಖುಷಿಯ ಸಂಗತಿಯನ್ನು ಕ್ಯಾಂಪ್ಕೋ ನೀಡುತ್ತದೆ ಎನ್ನುವುದು ನಿರೀಕ್ಷೆಯೂ ಹೌದು. ಅಡಿಕೆ ಮಾರುಕಟ್ಟೆ ಈಚೆಗೆ ಕೆಲವು ದಿನಗಳಿಂದ ಕುಸಿತದ ಹಾದಿಯಲ್ಲಿದೆ. ಅಡಿಕೆ ಬೇಡಿಕೆ, ಪೂರೈಕೆ ಸರಪಳಿಯಲ್ಲೂ ವ್ಯತ್ಯಾಸ ಇದೆ. ಈ ಎಲ್ಲದರ ನಡುವೆಯೇ ಅಡಿಕೆ ಆಮದು ನಡೆಯುತ್ತಿದೆ. ಬರ್ಮಾ ಅಡಿಕೆ ಕಳ್ಳ ಸಾಗಾಣಿಕೆ ಮೂಲಕ ದೇಶದೊಳಕ್ಕೆ ಬರುತ್ತಿದೆ. ಅಡಿಕೆ ಕಳ್ಳ ಸಾಗಾಣಿಕೆ ತಡೆಗೆ ಸರ್ಕಾರವು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಹೀಗಾಗಿ ಬಹುಪಾಲು ಅಡಿಕೆ ಕಳ್ಳಸಾಗಾಣಿಕೆ ತಡೆಯಾಗುತ್ತಿದೆ. ಈಗ ಅಡಿಕೆ ಆಮದು ದರವೂ 350 ರೂಪಾಯಿಗೆ ನಿಗದಿಯಾದರೆ ಅಡಿಕೆ ಧಾರಣೆ ಏರಿಕೆಯಾಗುವ ನಿರೀಕ್ಷೆ ಇದೆ. ಹೊಸ ಅಡಿಕೆ 450+ ಹಾಗೂ ಹಳೆ ಅಡಿಕೆ 480+ ತಲಪುವ ನಿರೀಕ್ಷೆ ಇದೆ. ಈ ಧಾರಣೆ ಬಹುತೇಕ ಸ್ಥಿರವಾಗುವ ನಿರೀಕ್ಷೆಯೂ ಇದೆ.
ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಸಾಕಷ್ಟು ಅಡಿಕೆ ಬೆಳೆಗಾರರೂ ಸೇರುವ ನಿರೀಕ್ಷೆ ಇದೆ. ಅಡಿಕೆ ಬೆಳೆಗಾರರ ಸಂಸ್ಥೆಯ ಮೂಲಕ ಬೆಳೆಗಾರರಿಗೆ ಸರ್ಕಾರವು ಕೊಡುಗೆಯನ್ನು ನೀಡುವ ನಿರೀಕ್ಷೆ ಇದೆ. ಇದು ಕೇವಲ ಸಮಾವೇಶವಲ್ಲ, ಬದಲಾಗಿ ಸಹಕಾರಿ ಸಂಸ್ಥೆಯನ್ನು ಬೆಳೆಸುವ ಹಾಗೂ ಸಹಕಾರಿ ಸಂಸ್ಥೆ-ಸರ್ಕಾರವು ಬೆಳೆಗಾರರ ಹಿತ ಕಾಪಾಡುವ ಸಮಾವೇಶವಾಗಲಿದೆ ಎನ್ನುವು ಆಶಾವಾದ ಇದೆ.