ಕೇಂದ್ರ ಸರ್ಕಾರವು ಸೆ.28 ರಂದು DGFT ಮೂಲಕ ಹೊರಡಿಸಿರುವ ಅಧಿಸೂಚನೆಯಂತೆ ಭೂತಾನ್ ನಿಂದ 17000 ಟನ್ ಅಡಿಕೆ ಆಮದಿಗೆ ಅನುಮತಿ ಇರುತ್ತದೆ. ಇದರಿಂದ ಭಾರತದ ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯದ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ ಕಿಶೋರ್ ಕುಮಾರ್ ಕೊಡ್ಗಿ ಅವರು, ಭೂತಾನ್ ಅಡಿಕೆ ಆಮದು ಕಾರಣದಿಂದ ಇಲ್ಲಿನ ಅಡಿಕೆಯ ದರದ ಸ್ಥಿರತೆಗೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಇದರಿಂದ ದೇಶೀಯ ಗುಣಮಟ್ಟದ ಚಾಲಿಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ಹೇಳಿದ್ದಾರೆ. ಹಾಗಿದ್ದರೂ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಕ್ಯಾಂಪ್ಕೊ ತೀವ್ರ ವಿರೋಧ ವ್ಯಕ್ತಪಡಿಸಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ಯಾಂಪ್ಕೊ ಪತ್ರದ ಮೂಲಕ ವಿರೋಧ ವ್ಯಕ್ತಪಡಿಸಿದೆ. ಆಮದು ಆಗುವ ಚಾಲಿ ಅಡಿಕೆಗೆ ಕೆಜಿಗೆ 360/- ರೂಪಾಯಿ ಕನಿಷ್ಠ ಆಮದು ಬೆಲೆ ನಿಗದಿಪಡಿಸುವಂತೆ ಕ್ಯಾಂಪ್ಕೊ ದೆಹಲಿ ನಿಯೋಗದ ಮೂಲಕ ಈಗಾಗಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ ಎಂದು ಅವರು ಹೇಳಿದ್ದಾರೆ.
ಈ ಅಧಿಸೂಚನೆಯ ಅನುಷ್ಠಾನದಿಂದ ದೇಶೀಯ ಮಾರುಕಟ್ಟೆಗೆ ಯಾವುದೇ ತೊಂದರೆ ಇಲ್ಲದಿದ್ದರೂ , ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷೆಯಂತೆ ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರದ ಸಮಗ್ರ ನೀತಿಗೆ ವ್ಯತಿರಿಕ್ತ ಪರಿಣಾಮ ಬೀರುವ ಕುರಿತು ವಾಣಿಜ್ಯ ಸಚಿವರಿಗೆ ಕ್ಯಾಂಪ್ಕೋ ತನ್ನಆತಂಕ ವ್ಯಕ್ತಪಡಿಸಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ರೈತ ರಹಿತ ಕಾಪಾಡಲು ಸಕರಾತ್ಮಕ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಕ್ಯಾಂಪ್ಕೊ ಆಶಾಭಾವನೆ ಹೊಂದಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿಯವರು ಹೇಳಿದ್ದಾರೆ.