ಸಾವಯವದ(Organic)) ಮಾತು ಜೋರಾಗಿದೆ. ಅಕ್ಕಿಯ ಬಣ್ಣದಲ್ಲಿ, ಹಣ್ಣಿನ ರುಚಿಯಲ್ಲಿ, ಸೊಪ್ಪಿನ ಹಸಿರಿನಲ್ಲಿ ಆರೋಗ್ಯ(Health) ಹುಡುಕುತ್ತ ಮಾರುಕಟ್ಟೆ(Market) ನುಗ್ಗುತ್ತಿದೆ. ರಾಜ್ಯದ ಕೃಷಿ ವಲಯ(Agricultural sector) ಸುತ್ತಾಡಿದರೆ ಮಾರುಕಟ್ಟೆ ಮೇಳ ಮೆರೆದಷ್ಟು ಉತ್ಪನ್ನ ಬಂದಿದೆಯೇ? ಅನುಮಾನ ಕಾಡುತ್ತದೆ. ಕೃಷಿ ನೆಲದಲ್ಲಿ ಸಾವಯವ ಇಂಗಾಲದ(Carbon) ಕೊರತೆ ಕಾಡುತ್ತಿದೆ. ಮರಗಿಡಗಳಿಲ್ಲದೇ ಭೂಮಿಗೆ ಶಕ್ತಿ ಬರಲು ಸಾಧ್ಯವೇ?
ಅಡಿಕೆ(Arecanut) ತೋಟಕ್ಕೆ ಬೇರುಹುಳು ಬಾಧೆ ವ್ಯಾಪಿಸಿತ್ತು. ಮರಗಳ ತುದಿ ಸಣಕಲಾಯ್ತು, ಇಳುವರಿ ಕಡಿಮೆಯಾಯ್ತು. ವರ್ಷದಿಂದ ವರ್ಷಕ್ಕೆ ಸಮಸ್ಯೆ ಹೆಚ್ಚಿತು. ತೋಟಕ್ಕೆ ಹೋಗಲು ಬೇಜಾರಾಗುತ್ತಿತ್ತು. ಮರಗಳ ಬುಡಕ್ಕೆ ಬೇವಿನ ಗೊಬ್ಬರ, ಕಂಪನಿ ಕೀಟನಾಶಕ ಹಾಕಲು ತಜ್ಞರ ಸಲಹೆ ದೊರೆಯಿತು. ಮಳೆಗಾಲದ ಆರಂಭದಲ್ಲಿ ದುಂಬಿ ಹಿಡಿದು ಕೊಲ್ಲಲು ಸೂಚಿಸಿದರು. ನಮ್ಮ ಹಿತ್ತಲಿನಲ್ಲಿ ಜ್ವರ ಮದ್ದಿಗೆ ಬಳಕೆಯಾಗುವ ಚರಾಯತ ಕಡ್ಡಿ( ನೆಲಬೇವು) ಯ ಗಿಡ ಪೊದೆಯಾಗಿ ಬೆಳೆದಿತ್ತು. ಬೇವಿಗಿಂತ ದುಪ್ಪಟ್ಟು ಕಹಿ ಗುಣ ಇದರಲ್ಲಿದೆ. ಬೇವಿನ ಗೊಬ್ಬರದ ಬದಲು ಇದರ ಎಲೆ ಬಳಸಿದರೆ ಹೇಗೆಂದು ಯೋಚಿಸಿ ತೋಟದಲ್ಲಿ ನಾಟಿ ಮಾಡಿದೆವು. ಮುಂದಿನ ಎರಡು ವರ್ಷಗಳಲ್ಲಿ ಎರಡು ಮೂರು ಅಡಿಯೆತ್ತರ ಚೆಂದದ ಪೊದೆಯಾಗಿ ಎಕರೆಗಟ್ಟಲೆ ಗಿಡ ಹಬ್ಬಿತ್ತು. ಫಕ್ಕನೆ ನೋಡಿದರೆ, ಅಡಿಕೆಯ ಜೊತೆಗೆ ಹೊಸ ಉಪಬೆಳೆಯಂತೆ ಕಾಣುತ್ತಿತ್ತು.
ಮಳೆಗಾಲ ಮುಗಿದು ಆಗಸ್ಟ್ ಹೊತ್ತಿಗೆ ಗಿಡ ಕತ್ತರಿಸಿ ಅಡಿಕೆ ಮರದ ಬುಡದಲ್ಲಿ ಮುಚ್ಚಿಗೆ ಹಾಕಲು ಆರಂಭಿಸಿದೆವು. ಪ್ರತಿ ಮರಕ್ಕೆ ಒಂದೆರಡು ಕಿಲೋ ಕಹಿಸೊಪ್ಪು ದೊರೆಯಿತು. ಎಲೆಗಳು ಕರಗಿ ಮಣ್ಣಿಗೆ ಸೇರಿದ ಬಳಿಕ ತೋಟದ ಮರಗಳ ಬೇರಿನ ರಸ ಹೀರಿ ಸಾಮ್ರಾಜ್ಯ ಮೆರೆದಿದ್ದ ಬೇರುಹುಳುಗಳು ಕಹಿ ಅಬ್ಬರಕ್ಕೆ ಸೋತವು. ಸಂತಾನೋತ್ಪತ್ತಿ ಸಾಧ್ಯವಾಗದೇ ಮಾಯವಾದವು. ಮಾರುಕಟ್ಟೆಯಿಂದ ಬೇವಿನ ಗೊಬ್ಬರ, ರಾಸಾಯನಿಕ ಖರೀದಿಸಿ ಹಣ ಖರ್ಚುಮಾಡುವುದಕ್ಕಿಂತ ಸುಲಭದಲ್ಲಿ ತೋಟದಲ್ಲಿ ಬೆಳೆಸಿದ ನೆಲಬೇವು ಬೇರುಹುಳು ಓಡಿಸಿತು. ಸುಮಾರು 12 ವರ್ಷಗಳ ಹಿಂದೆ ನಮ್ಮ ತೋಟಕ್ಕೆ ಬಂದ ಈ ಕಹಿ ಸಸ್ಯ, ಅಡಿಕೆಯ ಆರೋಗ್ಯ ರಕ್ಷಣೆಗೆ ನೆರವಾಗಿದೆ. ಮಳೆಗಾಲದಲ್ಲಿ ಮಣ್ಣಿನ ಸಂರಕ್ಷಣೆ, ಚಳಿಯಲ್ಲಿ ತೇವಾಂಶ ಉಳಿಸಲು ಸಹಾಯಕವಾಗಿದೆ. ಭತ್ತದ ಗದ್ದೆಯಲ್ಲಿ ತೋಟ ಮಾಡಿದವರಿಗೆ ಬೇರು ಹುಳು ಸಮಸ್ಯೆ ಸಾಮಾನ್ಯ. ನಿಯಂತ್ರಣಕ್ಕೆ ಹಸಿರು ಮದ್ದಾಗಿ ಚರಾಯತ ಕಡ್ಡಿಇದೆ. ಮಳೆಗೆ ಮುಂಚೆ ತೋಟದಲ್ಲಿ ಸುಮ್ಮನೆ ನಾಟಿ ಮಾಡಿದರೆ ಯಾವ ಆರೈಕೆ ಇಲ್ಲದೇ ಬೆಳೆಯುತ್ತದೆ. ಕತ್ತರಿಸಿ ತೋಟಕ್ಕೆ ಮುಚ್ಚಿಗೆ ಮಾಡಿದರೆ ಗೊಬ್ಬರ, ಔಷಧಿ, ಮುಚ್ಚಿಗೆ ಅನುಕೂಲತೆಗಳು ಒಂದು ಸಸ್ಯದಿಂದ ದೊರೆಯುತ್ತದೆ.
ಕೃಷಿ ನಿರ್ವಹಣೆಗೆ ಅಗತ್ಯ ಗೊಬ್ಬರ, ಕೀಟನಾಶಕಗಳನ್ನು ದೂರದಿಂದ ಪಡೆಯಲು ಸಮಯ, ಹಣ ಖರ್ಚಾಗುತ್ತದೆ. ಪ್ರತಿ ವರ್ಷ ನಿರ್ವಹಣೆಯ ಅಭ್ಯಾಸವಾಗಿ ಆದಾಯ ಖರ್ಚಿನ ದಾರಿ ಹಿಡಿಯುತ್ತದೆ. ಕೃಷಿ ಭೂಮಿ ಸಸ್ಯ, ಪ್ರಾಣಿ ಹಾಗೂ ಮಾನವನನ್ನು ಒಳಗೊಂಡ ಸಮಗ್ರ ಜೀವಿಯೆಂದು ಭಾವಿಸಬಹುದು. ಇಲ್ಲಿರುವ ಎಲ್ಲವೂ ತಮ್ಮ ಅವಶ್ಯಕತೆಗಳನ್ನು ಭೂಮಿಯಿಂದ ಪಡೆಯುತ್ತವೆ. ಅಧಿಕ ಫಸಲು, ಅಧಿಕ ಆದಾಯದ ಬಗ್ಗೆ ಯೋಚಿಸುವ ನಾವು ನೆಲ ಗುಣದ ಸುಸ್ಥಿರತೆಯನ್ನು ಕಾಪಾಡಲು ಹೆಚ್ಚು ಹೆಚ್ಚು ಸಸ್ಯಾಭಿವೃದ್ಧಿಯಿಂದ ಸಾಧ್ಯವಿದೆ. ಕಡಿದಾದ ಕಣಿವೆಯಲ್ಲಿನ ಸಸ್ಯದಟ್ಟಣೆಯಿಂದ ಫಲವತ್ತಾದ ಮಣ್ಣು ಕೊಚ್ಚಿ ಹೋಗದಂತೆ ನಿಸರ್ಗ ಹಸಿರು ತಡೆ ರೂಪಿಸಿದೆ. ಕಣಿವೆಯಲ್ಲಿ ಶೇ. 70-80ರಷ್ಟು ಅರಣ್ಯ ದಟ್ಟಣೆಯಿದ್ದಾಗ ಮಾತ್ರ ನಿಸರ್ಗ ಇದನ್ನು ನಿಭಾಯಿಸುತ್ತದೆ. ನೆಲ ಜಲ ಸಂರಕ್ಷಣೆಗೆ ನೆರವಾಗುತ್ತದೆ. ಪ್ರಸ್ತುತ ಜನಸಂಖ್ಯೆ ತೀವ್ರ ಹೆಚ್ಚಿದೆ, ಕೃಷಿ ನೆಲೆಗಳು ಬೆಳೆದಿವೆ. ಅರಣ್ಯ ಅತಿಕ್ರಮಣದ ಸಮಸ್ಯೆ ಇದೆ. ಹಳ್ಳಿ ಹಳ್ಳಿಗೆ ರಸ್ತೆ, ವಿದ್ಯುತ್, ನಿವೇಶನ ಮುಂತಾದ ಮೂಲಭೂತ ಅಗತ್ಯ ಕಲ್ಪಿಸುವ ಕೆಲಸಕ್ಕೆ ಅನಿವಾರ್ಯವಾಗಿ ಕಾಡು ಕರಗಿದೆ. ವ್ಯಾವಹಾರಿಕವಾಗಿ ನಾವು ನಮ್ಮ ತೋಟದ ಯಜಮಾನರಾದರೂ ಇಡೀ ಕಣಿವೆ ಪರಿಸರ ಅರ್ಥಮಾಡಿಕೊಂಡು ಹೆಜ್ಜೆ ಇಟ್ಟಾಗ ಗೆಲ್ಲುತ್ತೇವೆ. ಒಳ್ಳೆಯ ಗಾಳಿ, ನೀರು, ನೆರಳು, ಫಲವತ್ತಾದ ಮಣ್ಣು, ಕೃಷಿ ಬೆಳೆಗೆ ಪರಾಗಸ್ಪರ್ಶ, ಜಾನುವಾರು ಮೇವು, ಔಷಧಿ, ಆಹಾರ ಮೂಲಗಳಿಗೆ ತೋಟದಲ್ಲಿ ಮರ ಬೆಳೆಸುವ ಅಗತ್ಯವಿದೆ.
ತರಗೆಲೆ, ಕಸಕಡ್ಡಿ, ಒಣಟೊಂಗೆ, ಮರದ ತೊಗಟೆ ಹೀಗೆ ಮರವು ನಿರಂತರವಾಗಿ ಭೂಮಿಗೆ ಸಾವಯವ ವಸ್ತು ಪೂರೈಸುತ್ತದೆ. ಕೃಷಿ ಗೊಬ್ಬರವೆಂದು ನೂರಾರು ಹೊರೆ ಹಸುರು ಸೊಪ್ಪನ್ನು ಕಾಡಿನಲ್ಲಿ ಕಡಿಯುವುದು, ತರಗೆಲೆ ಬಾಚಿ ತರುವುದು, ಹುಲ್ಲು ಕತ್ತರಿಸುವುದು, ಸೊಪ್ಪಿನ ಬೆಟ್ಟ, ಗೋಮಾಳ, ನದಿದಂಡೆ, ನಂಥವೇ ಕಾರಣಗಳಿಂದ ರಕ್ಷಿತಾರಣ್ಯಗಳು ಕರಗಿವೆ. ಕಾಡಿನ ಕೊರತೆಯ ನಂತರ ನೀರಿನ ಒರತೆ ಮಾಯವಾಗಿದೆಯಲ್ಲವೇ ? ಒಂದು ಹೆಕ್ಟೇರ್‌ನಲ್ಲಿ ನಾಟಿ ಮಾಡಿದ ಮೂರು ನಾಲ್ಕು ಸಾವಿರ ಬಾಳೆ ಮರಗಳಿಗೆ ಕನಿಷ್ಠ 40ಟನ್ ದೊಡ್ಡಿ ಗೊಬ್ಬರ ಬೇಕು. ಇವನ್ನು ಖರೀದಿಸಿ ಬಳಸುವ ಬದಲು ತೋಟದ ಆವರಣದಲ್ಲಿ ಬೆಳೆದ ಸೊಪ್ಪಿನಿಂದ ತಯಾರಿಸಲು ಸಾಧ್ಯವಾದರೆ ಉತ್ತಮ ಗೊಬ್ಬರವೂ ದೊರೆತು, ಹಣವೂ ಉಳಿಯುತ್ತದೆ.
ರಾಜ್ಯ ಅರಣ್ಯ ಇಲಾಖೆಯ ಎರಡು ದಶಕದ ಹಿಂದೆ ಕೃಷಿ ಅರಣ್ಯ ಪದ್ಧತಿ ಕುರಿತು ಸಮೀಕ್ಷೆ ನಡೆಸಿತ್ತು. 19 ಜಿಲ್ಲೆಗಳ ಆಯ್ದ 25 ತಾಲೂಕಿನ 53 ಹಳ್ಳಿಯ 2650 ಕುಟುಂಬಗಳಲ್ಲಿ ಮರ ಆಧಾರಿತ ಕೃಷಿ ಕುರಿತು ವಿವರ ಸಂಗ್ರಹಿಸಿತು. ರೈತರು ಹೊಲಗಳಲ್ಲಿ ಹಿಂದಿನಿಂದ ಯಾವ ಜಾತಿಯ ಮರಗಳನ್ನು ಬೆಳೆಯುತ್ತಿದ್ದಾರೆ ? ಈಗ ಯಾವ ಜಾತಿಯ ಮರ ಬೆಳೆಸಲು ಇಚ್ಛಿಸಿದ್ದಾರೆ ? ರೈತರು ಕೃಷಿ ಅರಣ್ಯ ಪದ್ಧತಿಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಇರುವ ತೊಡಕುಗಳೇನು ? ಇಂಥವೇ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಯಿತು. ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ನಡೆದ ಅಧ್ಯಯನ ಹೊಲದ ಮರದ ಕತೆ ಹೇಳುತ್ತದೆ. ಮರ ಬೆಳೆಸಲು ಸಾಕಷ್ಟು ಭೂಮಿ ಇಲ್ಲ, ಆದಾಯ ದೊರಕಲು ಹೆಚ್ಚು ವರ್ಷ ಕಾಯಬೇಕು, ಅಕ್ಕಪಕ್ಕದ ರೈತರಿಂದ ತೊಂದರೆ, ಕಳ್ಳತನದ ಭಯ, ನೀರಿನ ಸಮಸ್ಯೆ, ಮುಖ್ಯವಾಗಿ, ಪೈರಿನ ಇಳುವರಿ ಕಡಿಮೆಯಾಗುತ್ತದೆ, ಮರ ಬೆಳೆಸುವ ಕುರಿತು ತಿಳುವಳಿಕೆ ಇಲ್ಲ… ಹೀಗೆ ಹಲವು ಕಾರಣಗಳು ದೊರೆತವು . ಸಣ್ಣ ಮತ್ತು ಅತಿ ಸಣ್ಣ ಹಿಡುವಳಿಯೇ ದೊಡ್ಡ ಸಮಸ್ಯೆಯಾಗಿರುವುದು ಇನ್ನೊಂದು ಪ್ರಮುಖ ಸಮಸ್ಯೆಯಾಗಿತ್ತು.
ಕೃಷಿ ಪ್ರದೇಶವನ್ನು 4 ಭಾಗಗಳಾಗಿ ವಿಂಗಡಿಸಿ ಅಲ್ಲಿರುವ ಮರಗಳ ಮಾಹಿತಿ ಗಮನಿಸಿದಾಗ ಸ್ವಾರಸ್ಯಕರ ಸಂಗತಿಯೊಂದು ಹೊರಬಿತ್ತು. ಬೇವಿನ ಮರ ರಾಜ್ಯದ ಒಟ್ಟೂ ಕೃಷಿ ಅರಣ್ಯದ ಶೇಕಡಾ 16 ಭಾಗದಲ್ಲಿತ್ತು. ಅದರಂತೆ ತೆಂಗು 15, ಮಾವು 11, ಹುಣಸೆ 10, ಕರಿಜಾಲಿ 4.5, ಹಲಸಿನ ಮರಗಳಿಗೆ 4 ಶೇಕಡಾ ಪ್ರದೇಶಗಳಲ್ಲಿ ನೆಲೆ ನೀಡಲಾಗಿತ್ತು. ಮಲೆನಾಡಿನಲ್ಲಿ ತೆಂಗು,ಮಾವು, ಅಡಿಕೆ, ಹಲಸು, ತೇಗ, ಗೋಡಂಬಿ ಬೆಳೆಯುತ್ತಿದ್ದರು. ಮೈಸೂರು ಸೀಮೆಗಳಲ್ಲಿ ತೆಂಗು, ಮಾವು, ನೀಲಗಿರಿ, ಹೊಂಗೆ, ಆಲದ ಮರ ಬೆಳೆಸಿದ್ದರು. ಉತ್ತರ ಕರ್ನಾಟಕದಲ್ಲಿ ಬೇವು , ಮಾವು ,ಕರಿಜಾಲಿ, ನೀಲಗಿರಿ, ಬಳ್ಳಾರಿ ಜಾಲಿ, ಬಿದಿರು ಕಂಡುಬಂದಿತು. ಆದರೆ ರೈತರು ಇತ್ತೀಚಿನ ವರ್ಷಗಳಲ್ಲಿ ಮೇವು, ಗೊಬ್ಬರ ನೀಡುವ ಮರಗಳಿಗಿಂತ ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವಾದ ತೇಗ, ನೀಲಗಿರಿ, ಅಕೇಸಿಯಾ, ಸರ್ವೆ, ಸಿಲ್ವರ್‌ಓಕ್ ಬೆಳೆಸಲು ಇಷ್ಟಪಡುತ್ತಿರುವುದು ಗಮನಕ್ಕೆ ಬಂದಿದೆ. ದಾಳಿಂಬೆ, ಅಡಿಕೆ, ಬಾಳೆ ಕೊಯ್ದು ಮಾರಿದಂತೆ ಮರ ಮಾರುವ ಆಸಕ್ತಿ ಬೆಳೆದಿದೆ. ಸಾವಯವ ಕೃಷಿಗೆ ಶಕ್ತಿ ಬರಲು ಸ್ಥಳೀಯ ಮರಗಳ ಕುರಿತು ಅರಿವು ಮೂಡಿಸುವ ಮುಖ್ಯ ಕಾರ್ಯ ಅಗತ್ಯವಿದೆ. ಮರ ಬೆಳೆಸುವ ಮೂಲಕ ನೈಸರ್ಗಿಕ ಜೀವ ವ್ಯವಸ್ಥೆ ಪೋಷಿಸಿದರೆ ಮಣ್ಣಿನ ಸೂಕ್ಷ್ಮಾಣು ಜೀವಿಗಳು ಉಳಿಯುತ್ತವೆ. ಕೀಟಗಳ ಜೈವಿಕ ನಿಯಂತ್ರಣಕ್ಕೆ ಪಕ್ಷಿಗಳ ನೆರವು ದೊರೆಯುತ್ತದೆ. ಮರಗಳಿಗೆ ರೋಗ ಸಹಿಸುವ ಶಕ್ತಿ ಹೆಚ್ಚುತ್ತದೆ.