ಗೇರು ಒಂದು ವಾಣಿಜ್ಯ ಬೆಳೆಯಾಗಿದ್ದು ಇದು ಗ್ರಾಮೀಣ ಭಾಗದ ರೈತರ ಮೂಲಸಂಪತ್ತು. ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾದ ತಂತ್ರಜ್ಞಾನಗಳು ರೈತರಿಗೆ ತಲುಪುವ ನಿಟ್ಟಿನಲ್ಲಿ ವಿಜ್ಞಾನಿಗಳು ಕೆಲಸ ಮಾಡಬೇಕು ಎಂದು ತೋಟಗಾರಿಕಾ ಬೆಳೆಗಳ ಉಪ ಮಹಾನಿರ್ದೇಶಕರಾದ ಡಾ. ಎಸ್.ಕೆ. ಸಿಂಗ್ ಹೇಳಿದರು.
ಅವರು ಪುತ್ತೂರಿನ ಕೆಮ್ಮಿಂಜೆಯಲ್ಲಿರುವ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ನಡೆದ ಸಂಸ್ಥೆಯ 40 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೃಷಿ ವಿಜ್ಞಾನಿಗಳ ನೇಮಕಾತಿ ಸಂಸ್ಥೆ ಅಧ್ಯಕ್ಷ ಡಾ. ಸಂಜಯ್ ಕುಮಾರ್ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ಬೆಳೆಸಲಾದ ತೋಟಗಾರಿಕಾ ಬೆಳೆಗಳು ಹೇಗೆ ರೈತರಿಗೆ ಉಪಯುಕ್ತವಾಗಲಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಆಧುನಿಕ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ಬೇಕಾದ ಸ್ಟಾರ್ಟ್ ಅಪ್ ಯೋಜನೆಗಳನ್ನು ಪ್ರಾರಂಭಿಸಬಹುದು ಹಾಗೂ ಇಂತಹ ಯೋಜನೆಗಳಿಂದ ತೋಟಗಾರಿಕಾ ಬೆಳೆಗಾರರನೂ ಕೂಡ ಉತ್ತೇಜಿಸಬಹುದು ಎಂದು ಹೇಳಿದರು. ಚೆಂಡು ಹೂ, ಕೇಸರಿ ಇತ್ಯಾದಿ ಬೆಳೆಗಳ ಮೌಲ್ಯವರ್ಧನೆ ಮೂಲಕ ಅವರು ತಮ್ಮ ವಿಷಯವನ್ನು ಪ್ರಸ್ತುತಪಡಿಸಿದರು.
ಅತಿಥಿಗಳಾಗಿ ಡಾ. ಕೆ. ಬಾಲಚಂದ್ರ ಹೆಬ್ಬಾರ್, ನಿರ್ದೇಶಕರು, ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ , ಕಾಸರಗೋಡು ಹಾಗೂ ಡಾ. ವಿ.ಬಿ.ಪಾಟೇಲ್ ಸಹಾಯಕ ಮಹಾನಿರ್ದೇಶಕರು (ಹಣ್ಣು ಮತ್ತು ತೋಟಗಾರಿಕಾ ಬೆಳೆಗಳು) ಕೂಡ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕರಾದ ಡಾ. ದಿನಕರ ಅಡಿಗರವರು ಸಂಸ್ಥೆ ಬೆಳೆದು ಬಂದ ರೀತಿಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯಲ್ಲಿ ಅಭಿವೃದ್ಧಿ ಪಡಿಸಲಾದ ವಿವಿಧ ಗೇರು ತಳಿಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾದ ಡಾ. ವಿ.ಬಿ.ಪಟೇಲ್ ಸಹಾಯಕ ಮಹಾನಿರ್ದೆಶಕರು (ಹಣ್ಣು ಮತ್ತು ತೋಟಗಾರಿಕಾ ಬೆಳೆಗಳು) ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಗೇರು ಕೃಷಿಯಲ್ಲಿನ ಅವಕಾಶಗಳ ಬಗ್ಗೆ ತಿಳಿಸಿದರು.
ಸಂಸ್ಥೆಯ ವಿಜ್ಞಾನಿ ಡಾ. ಮಂಜುನಾಥ, ಕೆ.ಮತ್ತು ಅವರ ತಂಡ ಹಾಗೂ ಡಾ. ಶಂಸುದ್ಧೀನ್, ಎಂ. ಮತ್ತು ಬಳಗದವರಿಗೆ ಅತ್ಯುತ್ತಮ ಸಂಶೋಧನಾ ಲೇಖನಕ್ಕಾಗಿ ಪ್ರಶಸ್ತಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದ ಪಾರ್ವತೀಪುರಂ ಪ್ರಾಂತ್ಯದ ಪುನರ್ವಿ ಸಂಸ್ಥೆಗೆ ಗೇರು ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಗೊಳಿಸಲಾದ ಗೇರು ಹಣ್ಣಿನ ಮೌಲ್ಯವರ್ಧನೆಯ ತಂತ್ರಜ್ಞಾನವನ್ನು ಹಸ್ತಾಂತರಗೊಳಿಸಲಾಯಿತು. ಸಂಸ್ಥೆಯಲ್ಲಿ ಮುದ್ರಿಸಲಾದ ಹಲವು ಪ್ರಕಟಣೆಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಡಿ. ಬಾಲಸುಬ್ರಮಣಿಯನ್ ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಡಾ. ವಿ. ತೊಂಡೈಮಾನ್, ಹಿರಿಯ ವಿಜ್ಞಾನಿ ವಂದಿಸಿದರು. ಸಂಸ್ಥೆಯ ಇನ್ನೊಬ್ಬ ವಿಜ್ಞಾನಿ ಡಾ. ಅಶ್ವಥಿ, ಸಿ.ಯವರು ನಿರೂಪಿಸಿದರು.