ಗೇರಿನ ಹೊಸತಳಿ | ಗೇರು ದಿನೋತ್ಸವ | ಬಿಡುಗಡೆಯಾಗಲಿದೆ ಶ್ರಮ ತಗ್ಗಿಸುವ ವಿಶೇಷ ಗೇರುತಳಿ “ನೇತ್ರಾ ಜಂಬೋ -1” |

ಕೃಷಿಕರಿಗೆ ಅನುಕೂಲವಾಗುವ, ಕೃಷಿಯಲ್ಲಿ ಶ್ರಮ ತಗ್ಗಿಸುವ, ಕೂಲಿ ಕಡಿಮೆ ಮಾಡುವ ವಿಶೇಷವಾದ ಗೇರಿನ ಹೊಸ ತಳಿ ನೇತ್ರಾ ಜಂಬೋ -1  ಬಿಡುಗಡೆಯಾಗಲಿದೆ. ಈ ತಳಿಯು ಕೃಷಿಕರಿಗೆ ಕೂಲಿ ಖರ್ಚು ತಗ್ಗಿಸುವ ವಿಶೇಷವಾದ ತಳಿಯಾಗಿದೆ.

Advertisement

ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿರುವ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ ‘ಗೇರು ದಿನೋತ್ಸವ’ವ ಮಾ.22 ರಂದು  ಮಂಗಳವಾರ  ನಡೆಯಲಿದೆ.  ಈ ಸಂದರ್ಭದಲ್ಲಿ ಗೇರಿನ ಹೊಸ ತಳಿ ನೇತ್ರಾ ಜಂಬೋ 1 ಹಾಗೂ ವಿವಿಧ ಪ್ರಕಟಣೆಗಳು ಬಿಡುಗಡೆ ಆಗಲಿವೆ. ಅಖಿಲ ಭಾರತ ಗೇರು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಗೇರುಬೀಜದ ಮೊಳಕೆಯ ಸದುಪಯೋಗದಲ್ಲಿ ಗಣನೀಯ ಸಾಧನೆ ಮಾಡಿರುವ ಕಣ್ಣೂರಿನ ಬ್ರಿಜಿತ್ ಕೃಷ್ಣ ಅವರು  ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಗತಿಪರ ಗೇರು ಕೃಷಿಕರಾದ  ರವಿಚಂದ್ರ ಅಮ್ಟಂಗೆ, ವಿಶ್ವಕೇಶವ, ಚಂದ್ರಶೇಖರ ಉಡುಪ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ  ಕೆನ್ಯೂತ್ ಅರಾನ್ಹ ಅವರು ಗೇರು ಹಣ್ಣಿನ ಮೌಲ್ಯವರ್ಧನೆ ಬಗ್ಗೆ ಮಾತಾಡಲಿದ್ದಾರೆ.

Advertisement

ಏನಿದು ನೇತ್ರಾ ಜಂಬೋ 1 :  ಗೇರು ಕೃಷಿಯಲ್ಲಿ ಒಟ್ಟು ಖರ್ಚಿನ ಸುಮಾರು ನಲವತ್ತು ಶೇಕಡಾ ಬಿದ್ದ ಹಣ್ಣು/ಬೀಜ ಹೆಕ್ಕಲು ಬೇಕು. ಆರರಿಂದ ಎಂಟು ಗ್ರಾಂ ತೂಕದ ಬೀಜಗಳು ಗೇರಿನಲ್ಲಿ ಸಾಮಾನ್ಯ. ಆದರೆ ಬೀಜದ ಗಾತ್ರ ಹೆಚ್ಚಿಸಿದರೆ ಮೂರು ರೀತಿಯ ಲಾಭ. ಒಂದು – ಕಡಿಮೆ ಬೀಜ ಹೆಕ್ಕಿ ಜಾಸ್ತಿ ತೂಕ ಗಳಿಸಬಹುದು. ಎರಡು – ಮಾರುಕಟ್ಟೆಯಲ್ಲಿ ದೊಡ್ಡ ಬೀಜಗಳಿಗೆ ಹೆಚ್ಚಿನ ದರ. ಮೂರು – ಸಂಸ್ಕರಣೆಯೂ ಸುಲಭ. ಇದನ್ನರಿತು ದೊಡ್ಡ ಬೀಜ ಬಿಡುವ ನೇತ್ರಾ ಜಂಬೋ-1 ತಳಿಯನ್ನು ನಮ್ಮ ತಂಡ ಬಿಡುಗಡೆ ಮಾಡಿದೆ” ಎನ್ನುತ್ತಾರೆ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ತೋಟಗಾರಿಕಾ ವಿಭಾಗದ ಪ್ರಧಾನ ವಿಜ್ಞಾನಿ ಡಾ. ದಿನಕರ ಅಡಿಗ.

ಈ ತಳಿಯಲ್ಲಿ 12 ಗ್ರಾಂ ತೂಕದ ಬೀಜಗಳಿರುತ್ತವೆ. ಶೇಕಡಾ 90ಕ್ಕೂ ಹೆಚ್ಚಿನ ಬೀಜಗಳದ್ದು ಒಂದೇ ಗಾತ್ರ. ನೂರು ಕೆಜಿ ಬೀಜ ಸಂಸ್ಕರಣೆಯಿಂದ ಸುಮಾರು 29 ರಿಂದ 30 ಕೆಜಿ ತಿರುಳು ಸಿಗುತ್ತದೆ. ಈಗಿರುವ ರಫ್ತು ಗುಣಮಟ್ಟದ ಗ್ರೇಡ್ ಡಬ್ಲ್ಯೂ 180ಕ್ಕಿಂತ ಜಾಸ್ತಿ ಗ್ರೇಡ್ (ಡಬ್ಲ್ಯೂ 130) ಈ ತಳಿಯ ತಿರುಳಿನದ್ದು. ಸಾಮಾನ್ಯವಾಗಿ ದೊಡ್ಡ ಬೀಜ ಬಿಡುವ ತಳಿಗಳ ಇಳುವರಿ ಕಡಿಮೆ. ಆದರೆ ಈ ತಳಿಯ ಇಳುವರಿ ಹೆಕ್ಟೇರಿಗೆ ಎರಡು ಟನ್. ಹಣ್ಣಿನ ತೂಕ 100 ಗ್ರಾಂ ಕ್ಕಿಂತ ಜಾಸ್ತಿ ಹಾಗೂ ಕೆಂಪು ಬಣ್ಣ. ಗಿಡಗಳನ್ನು ನೆಡಬೇಕಾದ ಅಂತರ 23 ಅಡಿ.

Advertisement

“ಸರಾಸರಿ ಈ ತಳಿ ಒಂದು ಟನ್ ಇಳುವರಿಗೆ ಬೀಜ ಹೆಕ್ಕುವಾಗ 16000 ಕೂಲಿ ಖರ್ಚನ್ನು ಉಳಿಸುತ್ತದೆ. ಜೊತೆಗೆ ಈಗಿನ ಮಾರುಕಟ್ಟೆ ದರದಲ್ಲಿ ದೊಡ್ಡ ಗಾತ್ರದ ಬೀಜಕ್ಕೆ ಒಂದು ಟನ್ನಿಗೆ ಸುಮಾರು 10000 ರೂ ಜಾಸ್ತಿ ಸಿಗುತ್ತದೆ. ಒಟ್ಟು 26000 ರೂಗಳಷ್ಟು ಲಾಭ ಒಂದು ಟನ್ನಿಗೆ ಸಿಗುತ್ತದೆ. ಇದರ ತಿರುಳಿನ ಸಿಪ್ಪೆ ಸುಲಭದಲ್ಲಿ ಬಿಡಿಸಬಹುದು. ಹಾಗಾಗಿ ಕಾರ್ಖಾನೆಯಲ್ಲೂ ಕೂಲಿ ಖರ್ಚು ಉಳಿಸುತ್ತದೆ. ಜೊತೆಗೆ ತಿರುಳು ತುಂಬಾ ರುಚಿಕರ” ಅವರ ಮಾಹಿತಿ.

“ಗೇರಿನಲ್ಲಿ ಸದ್ಯ ಕೃಷಿ ಮಾಡುತ್ತಿರುವ ತಳಿಗಳು (ಭಾಸ್ಕರ, ವಿಆರ್ ಐ-3, ಉಳ್ಳಾಲ -3 ಇತ್ಯಾದಿ) ಬಹುತೇಕ ಸಣ್ಣ ಹಾಗೂ ಮಧ್ಯಮ ಗಾತ್ರದವು. ಹಾಗಾಗಿ ಈ ದೊಡ್ಡ ಗಾತ್ರದ ಬೀಜದ ತಳಿ ಒಣಭೂಮಿ ಕೃಷಿಯಲ್ಲಿ ಹೊಸ ಭರವಸೆ ಹುಟ್ಟಿಸಬಲ್ಲುದು. ಪ್ರಸ್ತುತ ಇದಕ್ಕೆ ತಳಿ ಹಕ್ಕಿನ ರಕ್ಷಣೆಯನ್ನು ಪಡೆಯುವ ಹಂತದಲ್ಲಿದ್ದೇವೆ. ಅದಾದ ನಂತರ ಆಸಕ್ತರಿಗೆ ವಿತರಿಸುತ್ತೇವೆ” ಎನ್ನುತ್ತಾರೆ ಡಾ ಅಡಿಗ.  ಸಂಪರ್ಕ : ಡಾ. ಜೆ. ದಿನಕರ ಅಡಿಗ,  ಪ್ರಧಾನ ವಿಜ್ಞಾನಿ (ತೋಟಗಾರಿಕೆ),  99020 72036  

Advertisement

 

 

Advertisement

 

 

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಗೇರಿನ ಹೊಸತಳಿ | ಗೇರು ದಿನೋತ್ಸವ | ಬಿಡುಗಡೆಯಾಗಲಿದೆ ಶ್ರಮ ತಗ್ಗಿಸುವ ವಿಶೇಷ ಗೇರುತಳಿ “ನೇತ್ರಾ ಜಂಬೋ -1” |"

Leave a comment

Your email address will not be published.


*