ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಕೆಲವು ಕೃಷಿಕರು ಯೋಜನೆ ಹಾಕಿಕೊಂಡಿದ್ದರು. ಇದೀಗ ಗೇರುಕೃಷಿಯ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಬಗ್ಗೆ ಅಧ್ಯಯನ ಆರಂಭವಾಗಿದೆ. ಸಂಪಾಜೆ ಗ್ರಾಮವನ್ನು ಗೇರು ಕೃಷಿಯಲ್ಲಿ ಮಾದರಿ ಗ್ರಾಮವನ್ನಾಗಿಸುವ ಬಗ್ಗೆ ಸಂವಾದ ನಡೆಯಿತು.
ಅಡಿಕೆ ಹಳದಿ ಎಲೆರೋಗದಿಂದ ತತ್ತರಿಸಿರುವ ಅಡಿಕೆ ಬೆಳೆಗಾರರಿಗೆ ಸದ್ಯ ಪರ್ಯಾಯ ಬೆಳೆಯ ಅವಶ್ಯಕತೆ ಇದೆ. ಇದುವರೆಗೂ ಹಳದಿ ಎಲೆರೋಗಕ್ಕೆ ಯಾವುದೇ ಸೂಕ್ತವಾದ ಔಷಧಿಗಳು ಇಲ್ಲವಾದ ಕಾರಣದಿಂದ ಸೂಕ್ತವಾದ ಪರ್ಯಾಯ ಬೆಳೆ ಅಗತ್ಯವಾಗಿದೆ. ಆರ್ಥಿಕವಾಗಿಯೂ ಕೃಷಿಕರಿಗೆ ನೆರವಾಗಬೇಕು, ಯಾವುದೇ ಕೃಷಿ ನಾಟಿ ಮಾಡಿ ಬಳಿಕ ರೈತರಿಗೆ ಸಮಸ್ಯೆಯೂ ಆಗಬಾರದು ಎನ್ನುವ ಕಾರಣದಿಂದ ಅಧ್ಯಯನಗಳು ನಡೆದು ಗಿಡಗಳ ನಾಟಿ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಕಾಫಿ, ರಬ್ಬರ್, ಬಾಳೆ, ಹಣ್ಣು ಬೆಳೆ, ಕಾಳುಮೆಣಸು , ಸ್ವಉದ್ಯೋಗದ ಬಗ್ಗೆ ಮಾಹಿತಿ ನೀಡಲಾಗಿದೆ. ಇದೀಗ ಗೇರು ಕೃಷಿಯ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ. ಸಂಪಾಜೆ ಗೇರು ಬೀಜ ಕೃಷಿಯಲ್ಲಿ ಸಂಪಾಜೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಬಗ್ಗೆ ಪ್ರಸ್ತಾವನೆಯ ಮಾಹಿತಿ ಸಂಗ್ರಹಕ್ಕೆ ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ ಅಶ್ವತಿ, ಡಾ ಭಾಗ್ಯ, ಡಾ . ತೊಂಡೈಮನ್ ಸಂಪಾಜೆಗೆ ಭೇಟಿ ನೀಡಿ ಈಗಾಗಲೇ ಗೇರು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶಂಕರ ಪ್ರಸಾದ್ ರೈ ಹಾಗೂ ಇತರ ಕೆಲವು ತೋಟಗಳನ್ನು ವೀಕ್ಷಣೆ ಮಾಡಿದರು.
ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೇರು ಕೃಷಿಗೆ ಪ್ರಸ್ತಾವನೆ ಇರುವ ಹಿನ್ನಲೆಯಲ್ಲಿ ಗೇರು ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಸುಳ್ಯ ತಾಲೂಕು ಪಂಚಾಯತ್ ಗೆ ಭೇಟಿ ನೀಡಿ ಆರಂಭದಲ್ಲಿ ಮಾಹಿತಿ ಪಡೆದರು. ಈ ಸಂದರ್ಭ ಸುಳ್ಯ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಇಲಾಖೆ ಗೀತಾ , ವಿಷಯ ನಿರ್ವಾಹಕರು ತಾಲೂಕು ಪಂಚಾಯತ್ ರಾಜಲಕ್ಷ್ಮಿ, ಗೇರು ಸಂಶೋಧನಾ ಮಂಡಳಿಯ ವಿಜ್ಞಾನಿಗಳಾದ ಡಾ. ಅಶ್ವತಿ, ಡಾ.ಭಾಗ್ಯ, ಡಾ. ತೊಂಡೈಮಾನ್, NRLM ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾ ವಿ.ಜಿ , ಸಂಪಾಜೆ ಗ್ರಾಮದ ಕೃಷಿ ಮೋಹಿನಿ ವಿಶ್ವನಾಥ್ ಇದ್ದರು. ಬಳಿಕ ಸಂಪಾಜೆ ಗ್ರಾಮ ಬಳಿಕ ಸಂಪಾಜೆ ಪಂಚಾಯತ್ ಭೇಟಿ ನೀಡಿದ ಗೇರು ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಅಧ್ಯಕ್ಷರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ಗೇರು ಬೀಜ ಕೃಷಿಯಲ್ಲಿ ಸಂಪಾಜೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಬಗ್ಗೆ ಸಭೆ ನಡೆಸಿದರು.
ಈ ಸಂದರ್ಭ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ, ಉಪಾಧ್ಯಕ್ಷರಾದ ಎಸ್. ಕೆ. ಹನೀಫ್, ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಕೃಷಿಕರಾದ ಕೆ. ಪಿ. ಜಗದೀಶ್, ಮಾಜಿ ಸದಸ್ಯರಾದ ನಾಗೇಶ್, ಯುವ ಕೃಷಿಕ ವರದರಾಜ್, ಕೃಷಿ ಸಖಿ ಮೋಹಿನಿ ಮೊದಲಾದವರು ಇದ್ದರು. ಇದೇ ವೇಳೆ ಸಂವಾದ ಕಾರ್ಯಕ್ರಮವೂ ನಡೆಯಿತು.