ಚಾಮರಾಜನಗರ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ರಾಜವಂಶಸ್ಥರಿಗೆ ಸೇರಿದ್ದು, ಅದನ್ನು ಹಿಂಪಡೆಯಲಿದ್ದಾರೆ ಎಂಬ ವಿಷಯದ ಕುರಿತು ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮೈಸೂರಿನಲ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀನು ಒಂದು ವೇಳೆ ರಾಜಮನೆತನಕ್ಕೆ ಸೇರಿದ್ದರೂ ರೈತರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಾಮರಾಜನಗರದಲ್ಲಿರುವ ತಮ್ಮ ಜಮೀನು ಸಂಬಂಧ, 1950ನೇ ಇಸವಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಆದರೆ, ಆ ಜಾಗವನ್ನು ಕಂದಾಯ ಗ್ರಾಮ ಮಾಡುವ ಕುರಿತು ಜಿಲ್ಲಾಡಳಿತದಿಂದ ತಮಗೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ. ಹಾಗಾಗಿ ಯಾವುದೇ ಸಮಸ್ಯೆ ಇದ್ದಲ್ಲಿ ಆ ಭಾಗದ ರೈತರು ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು. ಆ ಭಾಗದ ಜಮೀನನ್ನು ರಾಜ್ಯ ಸರ್ಕಾರ ರಾಜವಂಶಸ್ಥರಿಗೆ ನೀಡಿದರೂ ತಾವು ಅಲ್ಲಿನ ಜನರಿಗೆ ತೊಂದರೆ ಕೊಡುವುದಿಲ್ಲ. ಬದಲಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲಿದ್ದೇವೆ. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವ ಕೆಲಸ ಮಾಡುವುದಿಲ್ಲ. ಅಂದಿನ ರಾಜರು ನೀಡಿರುವ ದಾನ ಪತ್ರದ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ. ಈ ಸಂಬಂಧ ಅಗತ್ಯ ವಿಷಯ ಸಂಗ್ರಹಿಸಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.