05.12.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು, ಮೋಡದ ವಾತಾವರಣದೊಂದಿಗೆ ಸಂಜೆ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆಯ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳ ಒಂದೆರಡು ಕಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಗಳಿವೆ. ಈಗಿನಂತೆ ಡಿಸೆಂಬರ್ 7 ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.
ಮಲೆನಾಡು : ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಕೊಡಗಿನ ಭಾಗಮಂಡಲ, ತಲಕಾವೇರಿ ಸುತ್ತಮುತ್ತ, ಚಿಕ್ಕಮಗಳೂರಿನ ಮೂಡಿಗೆರೆ, ಬಾಳೆಹೊನ್ನೂರು, ಶೃಂಗೇರಿ, ಕುದುರೆಮುಖ ಹಾಗೂ ಶಿವಮೊಗ್ಗ ಜಿಲ್ಲೆಯ ಆಗುಂಬೆ, ಕೊಪ್ಪ, ತೀರ್ಥಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಸ್ವಲ್ಪ ಜಾಸ್ತಿ ಇರಬಹುದು. ಈಗಿನಂತೆ ಡಿಸೆಂಬರ್ 6 ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.
ಉತ್ತರ ಒಳನಾಡು : ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ಕೊಪ್ಪಳ, ವಿಜಯನಗರ, ದಾವಣಗೆರೆ, ಬಳ್ಳಾರಿ, ರಾಯಚೂರು, ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ರಾತ್ರಿ ಬಳ್ಳಾರಿ, ರಾಯಚೂರು ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಗಳಿವೆ. ಈಗಿನಂತೆ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಡಿಸೆಂಬರ್ 7 ರಿಂದ ಒಣ ಹವೆ ಆವರಿಸುವ ಸಾಧ್ಯತೆಗಳಿವೆ.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಡಿಸೆಂಬರ್ 7 ರಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಒಣ ಹವೆ ಆವರಿಸುವ ಸಾಧ್ಯತೆಗಳಿವೆ.
ಉತ್ತರ ಭಾರತದ ಕಡೆಯಿಂದ ಶೀತ ಗಾಳಿಯ ಪ್ರಭಾವ ಹೆಚ್ಚಾದರೆ ಮಾತ್ರ ಹಿಂಗಾರು ಮಾರುತಗಳು ದುರ್ಬಲವಾಗಬಹುದು. ಈಗಿನಂತೆ ರಾಜ್ಯದಲ್ಲಿ ಡಿಸೆಂಬರ್ 6ರ ತನಕ ಮಳೆಯ ನಿರೀಕ್ಷೆ ಇದೆ. ನಂತರ ಮಳೆ ಕಡಿಮೆಯಾದರೂ, ದಕ್ಷಿಣ ಕರ್ನಾಟಕದಲ್ಲಿ ಚಳಿ ಹೆಚ್ಚಾಗಲು ಸಮಯ ತೆಗೆದುಕೊಳ್ಳಬಹುದು.



