ಕೃಷಿಯಲ್ಲಿ ಕಷ್ಟಪಡುವುದಕ್ಕಿಂತ ಹೊರಗೆಲ್ಲೋ ಕೆಲಸಕ್ಕೆ ಹೋಗುವುದೇ ಲೇಸು ಎನ್ನುವ ಜನರ ಮಧ್ಯೆ ಸಮಗ್ರ ಕೃಷಿಯಲ್ಲಿ ಯಶಸ್ಸು ಗಳಿದ ರೈತ ಚಂದ್ರಣ್ಣ ನಾಗೇನಹಳ್ಳಿ ಮಾದರಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಐರಾಣಿ ಗ್ರಾಮದ ರೈತ ಚಂದ್ರಣ್ಣ ನಾಗೇನಹಳ್ಳಿಅವರ ಮಿಶ್ರ ಬೇಸಾಯ ಹಲವು ರೈತರಿಗೆ ಮಾದರಿಯಾಗಿದೆ.
ಚಂದ್ರಣ್ಣ ನಾಗೇನಹಳ್ಳಿ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಹಾಗೂ ನೈಸರ್ಗಿಕ ಬೆಳೆಗಳನ್ನು ಬೆಳೆದು ತನ್ನ ಜಮೀನಿನನ್ನು ಹಸಿರುಮಯವಾಗಿ ಪರಿವರ್ತಿಸಿದ್ದಾರೆ. ಜಮೀನಿನಲ್ಲಿ ಅಡಿಕೆ, ತೆಂಗು, ರಾಮಫಲ, ಕಿತ್ತಳೆ, ನೇರಳೆ, ಲಿಂಬೆ ಬೆಳೆದಿದ್ದಾರೆ. ಸಾರಜನಕ ಸ್ಥರೀಕರಣಕ್ಕಾಗಿ ಗ್ಲೀರಿಸೀಡಿಯಾಗಳನ್ನು ಸುತ್ತಲೂ ಬೆಳೆಸಿದ್ದಾರೆ. ಜತೆಗೆ ಜಾಯಿಕಾಯಿ, ಕರಿಮೆಣಸು, ವೀಳ್ಯದೆಲೆ, ಏಲಕ್ಕಿ, ಬಾಳೆ, ಲವಂಗ, ಹಲಸು, ಪೇರಳೆ, ಮಾವು, ಅಮಟೆಕಾಯಿ, ಸಾಂಬಾರು ಪದಾರ್ಥದಂತಹ ಬೆಳೆಗಳನ್ನು ನೈಸರ್ಗಿಕ ಹಾಗೂ ಸಾವಯವ ಋಷಿಯನ್ನು ಮಾಡಿ ಯಶಸ್ಸು ಕಂಡಿದ್ದಾರೆ.
ಜಮೀನಿನಲಿ ಬೆಳೆದ ಬೆಳೆಗಳಿಗೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಬಳಕೆ ಮಾಡುವುದಿಲ್ಲ. ಬದಲಾಗಿ ಗಿಡಮರಗಳಿಂದ ಉದುರಿದ ಎಲೆಗಳನ್ನೇ ಗೊಬ್ಬರವಾಗಿ ಬಳಕೆ ಮಾಡಿದ್ದಾರೆ. ಎರೆಹುಳು ತೊಟ್ಟಿ ಮಾಡಿಕೊಂಡು ಗೊಬ್ಬರ ತಯಾರಿ ಮಾಡಿದ್ದಾರೆ. ಇವರು ತನ್ನ ಕೃಷಿಯಿಂದ ಕೇವಲ ಅಡಿಕೆ ಬೆಳೆ ಒಂದರಿಂದಲೇ ವರ್ಷಕ್ಕೆ 10 ರಿಂದ 14 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಉಳಿತಾಯ ಬೆಳೆಗಳಿಂದ ಸಾಕಷ್ಟು ಆದಾಯ ಬರುವುದಾಗಿ ತಿಳಿಸಿದ್ದಾರೆ.

