“There is no shortcut to hardwork” ಎಂಬ ಬುದ್ಧಿ ಮಾತು ಇದೆ .ಅಂದರೆ ಸಾಧನೆಗೆ ಕಠಿಣ ಪರಿಶ್ರಮದ ಹೊರತಾಗಿ ಒಳದಾರಿಗಳಿಲ್ಲ. ಪ್ರಪಂಚದ ಮಹಾನ್ ಸಾಧಕರೆಲ್ಲ ಸಾಕಷ್ಟು ಪ್ರಯತ್ನಪಟ್ಟು ಸಾಧನೆ ಮತ್ತು ಸಂಶೋಧನೆಗಳನ್ನು ಮಾಡಿದ್ದಾರೆ. ಇಂದು ಡಿಜಿನಲ್ ದಿಗ್ಗಜರೆನ್ನಿಸಿದ ಶ್ರೀ ನಾರಾಯಣ ಮೂರ್ತಿಯವರು ಫ್ರಾನ್ಸಿನಲ್ಲಿ ಐದುದಿನ ಹಸಿವಿನಿಂದ ಕಳೆದುದನ್ನು ನೆನಪಿಸಿಕೊಂಡಿದ್ದರ ಬಗ್ಗೆ ತಿಳಿದಾಗ ಇಂದಿನ ಎತ್ತರಕ್ಕೇರಿದ ಅವರ ಪಯಣ ಅಷ್ಟೇನೂ ಸುಗಮವಾಗಿರಲಿಲ್ಲ ಎಂದು ತಿಳಿಯುತ್ತದೆ.
Radioactivity ಯ ಸಂಶೋಧಕಿಯಾಗಿ ನೋಬೆಲ್ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದ ಮಹಿಳೆ, ಎರಡು ಬಾರಿ ವಿವಿಧ ಸಂಶೋಧನಾ ಕ್ಷೇತ್ರಗಳಿಗೆ ನೋಬೆಲ್ ಪ್ರಶಸ್ತಿ ಪಡೆದ ಏಕಮೇವ ಮಹಿಳೆ ಫ್ರಾನ್ಸಿನ ಮೇರಿ ಕ್ಯೂರಿಯ ಸಾಧನೆಯ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ . ಪ್ರತಿ ಪ್ರಯತ್ನದಲ್ಲೂ ಸೋತಾಗ ಕಂಗೆಡದೆ ಸಂಶೋಧನೆಯನ್ನು ಮುಂದುವರಿಸಿದ ಆಕೆಯ ಪ್ರಯತ್ನವು ವಿದ್ಯಾರ್ಥಿಗಳಿಗೆ ಮಾದರಿಯಾದದ್ದು .
ಬಲ್ಬ್, ಫೋನೋಗ್ರಾಫ್, ಸುಧಾರಿತ ಟೆಲಿಗ್ರಾಫ್ ಮತ್ತು ಟೆಲಿಫೋನ್ ಸೌಕರ್ಯ ಹಾಗೂ ಚಲನಚಿತ್ರ ಕ್ಯಾಮೆರಾ ಸಂಶೋಧಿಸಿದ ಮಹಾನ್ ವಿಜ್ಞಾನಿ ಥೋಮಸ್ ಆಲ್ವಾ ಎಡಿಸನ್ ರವರದ್ದು ರೋಚಕ ಪರಿಶ್ರಮ ಎನ್ನಬಹುದು. ಪ್ರತಿಯೊಂದು ಸೋಲನ್ನು ಮುಂದಿನ ಪ್ರಯತ್ನಕ್ಕೆ ಮುನ್ನುಡಿ ಎಂಬಂತೆ ಸ್ವೀಕರಿಸಿದ ಎಡಿಸನ್ ಛಲಬಿಡದ ತ್ರಿವಿಕ್ರಮನಂತೆ ಮಾನವನ ಬದುಕಿನ ಸೌಲಭ್ಯವಾಗಿ ಒದಗುವ ಸಂಶೋಧನೆಗಳನ್ನು ಮಾಡಿದರು . ಅತಿ ಶ್ರೀಮಂತ ಉದ್ಯಮಿಯಾದರು. ಹೀಗಾಗಿ ಪ್ರಯತ್ನಿಶೀಲರಿಗೆ ಮಾದರಿ ಎನ್ನಿಸುವ ಬದುಕು ಎಡಿಷನ್ ರವರದ್ದು.
ನಮ್ಮ ರಾಷ್ಟ್ರಪತಿಗಳಾಗಿದ್ದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ರವರು ‘ಮಿಸೈಲ್ ಮ್ಯಾನ್’ ಎಂದು ಖ್ಯಾತರಾಗಿದ್ದರು. ಅವರ ಬಾಲ್ಯದ ವಿದ್ಯಾರ್ಥಿ ಜೀವನವು ಕಷ್ಟಗಳು ಹಾಗೂ ಹೋರಾಟಗಳಿಂದ ತುಂಬಿತ್ತು. ಎಳೆಯ ಹುಡುಗನಾಗಿದ್ದಾಗ ಪತ್ರಿಕೆಗಳನ್ನು ಮಾರುವ ಕೆಲಸವನ್ನು ಮಾಡಿದ್ದರು. ಆದರೆ ಉನ್ನತಿಗೇರುವ ಆಸೆಯಿದ್ದ ಅವರು ಸ್ವ ಪ್ರಯತ್ನದಿಂದ ಯಾವತ್ತೂ ವಿಮುಖರಾಗಲಿಲ್ಲ. ಭಾರತೀಯ ಬಾಹ್ಯಾಕಾಶ ಸಾಧನೆಯನ್ನು ಉಪಗ್ರಹದ ಉಡಾವಣೆಯ ಸಾಧನೆಯನ್ನು ಮಾಡಿದ ಅವರನ್ನು ವಿದ್ಯಾರ್ಥಿಗಳು ಮಾದರಿಯಾಗಿ ಇಟ್ಟುಕೊಳ್ಳಬೇಕು.
ಭಾರತರತ್ನ ಪ್ರಶಸ್ತಿ ಪುರಸ್ಕೃತರಾದ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ರವರು ಪ್ರಯತ್ನಿಶೀಲತೆಗೆ ಒಂದು ಆದರ್ಶ. ಸಮಯದ ಪೂರ್ಣ ಸದುಪಯೋಗ ಮಾಡುವಲ್ಲಿ ಯೋಜಿತ ರೀತಿಯಲ್ಲಿ ಅವರು ದುಡಿಯುತ್ತಿದ್ದುದರಿಂದ ಅವರ ಸಂಶೋಧನೆಗಳ ಸಂಖ್ಯೆಯೇ ಅಪಾರವಾಗಿದೆ. ಅವರಿಗೆ ಸಿಕ್ಕಿರುವ ಗೌರವ ಡಾಕ್ಟರೇಟ್ ಪದವಿಗಳ ಸಂಖ್ಯೆ ನೋಡಿದರೆ ಕಷ್ಟಪಟ್ಟು ದುಡಿದರೆ ಇಷ್ಟ ಸಿಗುತ್ತದೆ ಎನ್ನುವುದಕ್ಕೆ ಪುರಾವೆಯಾಗುತ್ತದೆ.
ಸಾಧಕರ ಉದಾರಣೆಗಳನ್ನು ಹುಡುಕುತ್ತಾ ಹೋದರೆ ಪ್ರತಿಯೊಬ್ಬರ ಹಿಂದೆಯೂ ಪರಿಶ್ರಮದ ಇತಿಹಾಸ ಹಾಗೂ ಯಶಸ್ಸೆಂಬ ಪ್ರತಿಫಲ ಸಿಕ್ಕಿದ ಕಥೆ ಇದೆ . ಗಂಗೆಗೆ ಭಾಗೀರಥಿ ಎಂಬ ಹೆಸರನ್ನು ನೀಡಿದ ಭಗೀರಥನ ಪ್ರಯತ್ನವು ಎಷ್ಟೇ ಕಷ್ಟಪಟ್ಟಾದರೂ ಇಷ್ಟವನ್ನು ಸಾಧಿಸುವುದಕ್ಕೆ ಒಂದು ಮಾದರಿಯಾಗಿದೆ. ಹಾಗಾಗಿಯೇ “ಭಗೀರಥ ಪ್ರಯತ್ನ” ಎಂಬ ನಾಣ್ಣುಡಿಯೇ ಪ್ರಚಲಿತವಾಗಿದೆ. ನಮ್ಮ ಪುರಾಣ ಕಥೆಗಳಲ್ಲಿರುವ ದೇವತೆಗಳಾಗಲೀ ಐತಿಹಾಸಿಕ ವ್ಯಕ್ತಿಗಳಾಗಲೀ ಪರಿಶ್ರಮದಲ್ಲಿ ಆಲಸ್ಯ ಪಟ್ಟವರಲ್ಲ. ಕಷ್ಟ ಸಹಿಷ್ಣುಗಳಾಗದೆ ಅವರ ಸಾಧನೆಗಳು ಇತಿಹಾಸದಲ್ಲಿ ದಾಖಲಾಗಲಿಲ್ಲ .ಅವರ ಜೀವನವನ್ನು ಆದರ್ಶವಾಗಿ ಸ್ವೀಕರಿಸಿದ ಯುವ ಜನರಿಗೆ ವರ್ತಮಾನ ಕಾಲದ ಸವಾಲುಗಳು, ಅವಕಾಶಗಳು ಹಾಗೂ ಸಾಧನೆಯ ಮಾರ್ಗಗಳು ಗೋಚರಿಸುತ್ತವೆ. ಆದರೆ ಈಗ ಈ ಮಾರ್ಗವನ್ನು ಅನುಸರಿಸುವವರ ಸಂಖ್ಯೆ ಅಪರೂಪವಾಗುತ್ತದೆ. ಏಕೆಂದರೆ ಹೆಚ್ಚಿನವರ ಲಕ್ಷ್ಯ ಫಲಿತಾಂಶದ ಕಡೆಗೆ ಇರುತ್ತದೆಯೇ ಹೊರತು ಅದಕ್ಕೆ ಬೇಕಾದ ಪರಿಶ್ರಮದ ಯೋಜನೆ ಇರುವುದಿಲ್ಲ. ಪರೀಕ್ಷಾ ಅಕ್ರಮಗಳಾಗುತ್ತಿರುವುದರ ಹಿಂದೆ ಪರಿಶ್ರಮದ ಪ್ರಯತ್ನ ಹಾಗೂ ಪ್ರತಿಫಲದ ನಿರೀಕ್ಷೆಯ ನಡುವಿನ ಅಸಮತೋಲನವೇ ಕಾರಣವಾಗಿದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಪ್ರಾಥಮಿಕ ಹಂತದಿಂದಲೇ ಸುಲಭ ಶೀಲತೆಯ ಮಾರ್ಗಗಳಲ್ಲಿ ಪ್ರವರ್ತಿಸಲಾಗುತ್ತದೆ. ಸುಲಭ ಸಾಧ್ಯವಾದ ಸಾಧನೆಗಳನ್ನು ಪ್ರೋತ್ಸಾಹಿಸುವ ನೆಪದಲ್ಲಿ ಅತಿಯಾಗಿ ಪ್ರಶಂಶಿಸುವುದು ಕಂಡುಬರುತ್ತದೆ .ಇನ್ನಷ್ಟು ಸಾಧನೆಯ ಸಾಧ್ಯತೆಗಳತ್ತ ಬೊಟ್ಟು ಮಾಡಿ ಎತ್ತರದ ಮಾದರಿಗಳನ್ನು ತೋರಿಸುವ ಕೆಲಸವು ಶಿಕ್ಷಕರಿಂದ ಹಾಗೂ ಪೋಷಕರಿಂದ ಆಗಬೇಕು. ಆಗ ಮಗುವಿನ ಸ್ವಯಂ ಮೌಲ್ಯಮಾಪನದ ದೃಷ್ಟಿಯೂ ಬದಲಾಗುತ್ತದೆ. ತನಗೆ ತಾನೇ ಸವಾಲಾಗಿ ಹೊಸ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುತ್ತದೆ. ಪ್ರಾಥಮಿಕದಿಂದ ಪ್ರೌಢ ಹಾಗೂ ಉನ್ನತ ವಿದ್ಯಾಭ್ಯಾಸದಲ್ಲಿ ಇದು ಇನ್ನೂ ವಿಸ್ತಾರವನ್ನು ಪಡೆಯುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಹಾಗೂ ಕಲಿಕೆಯ ಗುರಿಯ ಮಾರ್ಗದರ್ಶನದಲ್ಲಿ ಅಂತಹ ಕ್ರಮ ಇತ್ತು. ಆವಾಗ ಅನೇಕ ತತ್ವಶಾಸ್ತ್ರಜ್ಞರು, ಇತಿಹಾಸಕಾರರು, ಸ್ವಾತಂತ್ರ್ಯ ಹೋರಾಟಗಾರರು, ವಿಜ್ಞಾನಿಗಳು, ಉದ್ಯಮಿಗಳು, ಸುಧಾರಕರು, ಸಾಮಾಜಿಕ ಚಳುವಳಿಗಾರರು, ವಿದೇಶಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂಶೋಧನೆ ಮಾಡಿ ಪದವಿಗಳಿಸಿದವರು ಹೀಗೆ ಪ್ರಯತ್ನಶೀಲರ ಒಂದು ಗಡಣವೇ ಭಾರತದಲ್ಲಿತ್ತು. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಭಾವಶಾಲಿಯಾಗಿ ಪಾಠ ಮಾಡುವ ಸಂಶೋಧನಾ ನಿರತ ಪ್ರಾಧ್ಯಾಪಕರಿದ್ದರು. ಅವರ ಹೆಸರಿನಿಂದಲೇ ಕಾಲೇಜುಗಳ ಹೆಸರುಗಳು ಪ್ರಸಿದ್ಧಿ ಪಡೆಯುತ್ತಿದ್ದುವು. ಈಗ ಅಂತಹ ಹಳೆಯ ಕಾಲೇಜುಗಳಲ್ಲಿಯೂ ಸಾಧಾರಣ ಮಟ್ಟದ ಪ್ರಾಧ್ಯಾಪಕರಿದ್ದಾರೆ. ಅವರು ಕಾಲೇಜು ಪಠ್ಯಗಳಿಗೆ ನೋಟ್ಸ್ ಕೊಡುತ್ತಾರೆ. ಇದು ಅಂಕಗಳಿಕೆಗೆ ಅನುಕೂಲವಾದ ದಾರಿ ಎನ್ನಲಾಗುತ್ತದೆ .ಅದೇ ದಾರಿಯನ್ನು ಅವರಿಂದ ಕಲಿತು ಶಿಕ್ಷಕರಾದವರು ಅದನ್ನೇ ತುಳಿಯುತ್ತಿದ್ದಾರೆ .ಹೀಗಾಗಿ ಪರಿಶ್ರಮವಿಲ್ಲದೆ ಮುಕ್ತವಾಗಿ ಅಂಕಗಳನ್ನು ಪ್ರತಿಫಲವಾಗಿ ನೀಡುವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇನ್ನಾದರೂ ಮಕ್ಕಳಲ್ಲಿ ಆಳ ಅಧ್ಯಯನದ ಗುರಿಯನ್ನು ಮೂಡಿಸಬೇಕಾಗಿದೆ.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…
ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…