ಸೀಮೋಲ್ಲಂಘನೆ ಎಂದರೆ ಆತ್ಮದ ವಿಸ್ತರಣೆ ಮತ್ತು ಮುಕ್ತಿಗೆ ಸೋಪಾನ. ಆತ್ಮವಿಸ್ತಾರವಾಗಿ ಮುಕ್ತಿ ಪಡೆಯುವುದೇ ನಿಜ ಅರ್ಥದ ಸೀಮೋಲ್ಲಂಘನೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.
ಅವರು ಪ್ಲವನಾಮ ಸಂವತ್ಸರದ ವಿಶ್ವವಿದ್ಯಾ ಚಾತುರ್ಮಾಸ್ಯದ ಸೀಮೋಲ್ಲಂಘನೆ ಧರ್ಮಸಭೆಯಲ್ಲಿ ಪಡೀಲು ಮಹಾಬಲೇಶ್ವರ ಭಟ್ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ ಅನುಗ್ರಹಿಸಿ ಆಶೀರ್ವಚನ ನೀಡಿದರು. ಮತ್ತೊಬ್ಬರ ದುಃಖ ಪರಿಹರಿಸುವುದು ನಿಜ ಅರ್ಥದ ಸೀಮೋಲ್ಲಂಘನೆ. ಅವರವರ ಕರ್ತವ್ಯವನ್ನು ಮಾಡುವ ಜತೆಗೆ ಕ್ಷೇತ್ರ ವಿಸ್ತಾರ, ಬದುಕಿನ ಆಯಾಮ ವಿಸ್ತರಿಸುವ ಪ್ರಯತ್ನ ಮಾಡಬೇಕು. ಇಡೀ ವಿಶ್ವಕ್ಕೇ ವ್ಯಾಪಿಸುವುದೇ ಸೀಮೋಲ್ಲಂಘನೆ. ಗುರಿಯನ್ನು ಮೀರಿ ಸಾಧಿಸುವ ಮೂಲಕ ಆತ್ಮೋನ್ನತಿ ಸಾಧಿಸುವಂತಾಗಬೇಕು ಎಂದು ಹೇಳಿದರು.
ಆತ್ಮ ನಮ್ಮ ದೇಹಕ್ಕೆ ಸೀಮಿತವಾಗಿದ್ದರೆ, ದೇಹದ ಆಗುಹೋಗಗಳಿಗೆ ಮಾತ್ರ ಅದು ಸೀಮಿತ. ನಮ್ಮ ಆತ್ಮ ಇಡೀ ವಿಶ್ವಕ್ಕೆ ವಿಸ್ತರಿಸಿದರೆ, ಇಡೀ ವಿಶ್ವದ ಸುಖ-ದುಃಖ ನಮ್ಮದಾಗುತ್ತದೆ. ಹೀಗೆ ಬೊಗಸೆಯಲ್ಲಿ ಬೆಳೆಯುತ್ತಿದ್ದ ಮೀನು ಸಮುದ್ರದ ವ್ಯಾಪ್ತಿಯನ್ನೂ ಮೀರಿ ಬೆಳೆದ ಮತ್ಸ್ಯಾವತಾರದ ಕಥೆಯಂತೆ ನಮ್ಮ ಸೀಮೆಯನ್ನು ಮೀರಿ ಬೆಳೆದು ಲೋಕ ಕಲ್ಯಾಣ ಸಾಧಿಸುವುದು ನಿಜವಾದ ಸೀಮೋಲ್ಲಂಘನೆ ಎಂದು ಹೇಳಿದರು.
ಸೀಮೋಲ್ಲಂಘನೆಗೆ ವಿಸ್ತಾರ ಎಂಬ ಅರ್ಥ; ಪ್ರತಿಯೊಬ್ಬರೂ ತಮ್ಮ ಇತಿಮಿತಿಯನ್ನು ದಾಟಿ ಪ್ರಯತ್ನಿಸುವುದೇ ಸೀಮೋಲ್ಲಂಘನೆ ಎಂದು ವಿಶ್ಲೇಷಿಸಿದರು. ಬ್ರಹ್ಮಚರ್ಯ, ಗೃಹಸ್ಥ, ಸನ್ಯಾಸ ಹೀಗೆ ಪ್ರತಿಯೊಂದಕ್ಕೂ ಅದರದ್ದೇ ಆದ ವ್ಯಾಪ್ತಿ ಇದೆ. ರಾಜನಿಗೆ ಧರ್ಮಯುದ್ಧ ಮಾಡಿ ತನ್ನ ಸಾಮ್ರಾಜ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದು ಸೀಮೋಲ್ಲಂಘನೆ ಎಂದು ತಿಳಿಸಿದರು.
ಯಾರೂ ಸೀಮೆ ತಪ್ಪಬಾರದು; ಅದರ ಒಳಗೆಯೇ ನಮ್ಮ ಸ್ವಾತಂತ್ರ್ಯ ಇರಬೇಕು. ಪುರುಷನ ಸೀಮೆ ಆತನ ತೋಳಿಗೆ ಸೀಮಿತ. ರಾಮಾಯಣದಲ್ಲಿ ಈ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ನಮ್ಮ ಬದುಕಿನ ಇತಿಮಿತಿಯನ್ನು ಬೋಧಿಸಲು ರಾಮಾಯಣದಂಥ ಪುರಾಣಗಳು ಬೇಕು. ಸೀಮೆ ಎಂದರೆ ಗಡಿ; ಬದುಕಿಗೊಂದು ಸೀಮೆ ಬೇಕು. ಸಮುದ್ರದ ಆಳ- ಅಗಲಕ್ಕೂ ಒಂದು ಸೀಮೆ, ಎಲ್ಲೆ ಇದೆ. ನದಿ, ಸಮುದ್ರ, ಭೂಮಂಡಲ, ಸೂರ್ಯ ಹೀಗೆ ಎಲ್ಲಕ್ಕೂ ತಮ್ಮ ಚೌಕಟ್ಟು ಇದೆ. ಅದನ್ನು ಮೀರಿದರೆ ಅಪಾಯ ಉಂಟಾಗುತ್ತದೆ. ಪ್ರಕೃತಿ ತನ್ನ ಸೀಮೆಯಲ್ಲೇ ಇರುತ್ತದೆ. ಅಂತೆಯೇ ಗುರು- ಶಿಷ್ಯರಿಗೂ ಒಂದು ಸೀಮೆ ಇದೆ. ಅದನ್ನು ಬಿಟ್ಟು ವ್ಯವಹರಿಸುವಂತಿಲ್ಲ. ಮಾಡಿದಲ್ಲಿ ಅನಾಹುತವಾಗುತ್ತದೆ ಎಂದು ವಿಶ್ಲೇಷಿಸಿದರು.
28ನೇ ಚಾತುರ್ಮಾಸ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹಾಬಲೇಶ್ವರ ಭಟ್ ಅವರು, “ಎಲ್ಲವೂ ಗುರುಕೃಪೆ. ನಾವು ನಿಮಿತ್ತ ಮಾತ್ರ. ಸಮಾಜದ ಸಮಸ್ತರ ಸಹಕಾರದಿಂದ ಸಾಧನೆಯಾಗಿದೆಯೇ ವಿನಃ ಒಬ್ಬನ ಶ್ರಮವಲ್ಲ. ಗುರುಕೃಪೆ ಇದ್ದಾಗ ಮಾತ್ರ ನಮ್ಮ ಸದುದ್ದೇಶದ ಕಾರ್ಯ ಯಶಸ್ವಿಯಾಗುತ್ತದೆ” ಎಂದು ಹೇಳಿದರು. ಪರಮಪೂಜ್ಯರ ವಿಶಿಷ್ಟ ಪರಿಕಲ್ಪನೆಗಳಾದ ಗೋಸ್ವರ್ಗ ಮತ್ತು ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠ ಇಡೀ ವಿಶ್ವಕ್ಕೆ ಪರಮಪೂಜ್ಯರು ನೀಡಿದ ಅತ್ಯುನ್ನತ ಕೊಡುಗೆಗಳು. ಈ ಸಂಕಲ್ಪ ಸಾಕಾರಗೊಳಿಸುವಲ್ಲಿ ಇಡೀ ಸಮಾಜ ಕೈಜೋಡಿಸಬೇಕು ಎಂದು ಸಲಹೆ ಮಾಡಿದರು.
ಚಾತುರ್ಮಾಸ್ಯ ಪ್ರಶಸ್ತಿಗೆ ಭಾಜನರಾದ ಪಡೀಲು ಮಹಾಬಲೇಶ್ವರ ಭಟ್ ದಂಪತಿ, ಅಮೃತೇಶ್ವರ ಭಟ್ ಹಿರೇ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಉಪಸ್ಥಿತರಿದ್ದರು.
ರಮೇಶ್ ಹೆಗಡೆ ದಂಪತಿ ಸಭಾಪೂಜೆ, ಯುಎಸ್‍ಜಿ ಭಟ್ ಅವರು ಚಾತುರ್ಮಾಸ್ಯ ಅವಲೋಕನ ನೆರವೇರಿಸಿದರು. ಪ್ರಶಸ್ತಿ ಪುರಸ್ಕೃತರ ಬಗ್ಗೆ ಚಂದ್ರಮೌಳೀಶ್ವರ ಪ್ರಕಲ್ಪದ ಹರಿಪ್ರಸಾದ್ ಪೆರಿಯಾಪು ಮಾತನಾಡಿದರು.
ಶ್ರೀಮಠದ ಸಿಇಓ ಕೆ.ಜಿ.ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ಪೆದಮಲೆ ನಾಗರಾಜ ಭಟ್, ಉಪಾಧ್ಯಕ್ಷೆ ಶೈಲಜಾ ಭಟ್ ಕೊಂಕೋಡಿ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…