ಮಾತೃಭಾಷೆಯನ್ನೇ ಮರೆತ ಸ್ಥಿತಿಯಲ್ಲಿ ನಾವಿದ್ದೇವೆ. ಭಾಷೆಯನ್ನು ಮರೆತು ಬಹುದೂರ ಸಾಗಿದ್ದೇವೆ. ಇದು ನಿಜಕ್ಕೂ ಶೋಚನೀಯ ಸ್ಥಿತಿ. ನಮ್ಮ ಭಾಷೆಯನ್ನೇ ಮಾತನಾಡಲು ಸಾಧ್ಯವಾಗದ ಸ್ಥಿತಿ ನಾಚಿಕೆಗೇಡು. ಭಾರತತ್ವವನ್ನೇ ಕಳೆದುಕೊಂಡು ಯಾವ ಸಾಧನೆಯೂ ಮಾಡಲಾಗದು. ಪೇಟೆಗಳಲ್ಲಿ ಸಂಸ್ಕೃತಿಯ ಬದಲು ವಿಕೃತಿಯೇ ಮೆರೆಯುವ ವಿಕಟ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ಗೋಕರ್ಣದಲ್ಲಿ ಆರಂಭಗೊಂಡ ಸ್ವಭಾಷಾ ಚಾತುರ್ಮಾಸ್ಯ ವ್ರತಾರಂಭದಂದು ನಡೆದ ಧರ್ಮಸಭೆಯನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು. ದೇಶದ ಬಗ್ಗೆ ಅಭಿಮಾನ, ಭಾಷೆಯ ಬಗ್ಗೆ ಪ್ರೀತಿ, ಉಡುಗೆ ತೊಡುಗೆಗಳ ಬಗ್ಗೆ ಪ್ರತಿಯೊಬ್ಬರಿಗೆ ಆದರದ ಭಾವ ಬೇಕು. ಆಚಾರ- ವಿಚಾರದ ಬಗ್ಗೆ ಗೌರವ ಬೇಕು. ಆದ್ದರಿಂದ ಸಂಸ್ಕೃತಿಯ ಸಂಕೇತವಾಗಿರುವ ಭಾಷೆಯನ್ನು ಶ್ರೀಮಂತಗೊಳಿಸುವ ಪ್ರಯತ್ನ ಈ ಚಾತುರ್ಮಾಸ್ಯದಲ್ಲಿ ನಡೆಯುತ್ತಿದೆ ಎಂದರು. ಮಾತೃಭಾಷೆಯನ್ನು ಮರೆತವರು ಮಾತಾ ಪಿತೃಗಳನ್ನೂ ಕಡೆಗಣಿಸುವ ದೂರವಿಲ್ಲ ಎಂದು ಎಚ್ಚರಿಸಿದರು. ಹೆಚ್ಚು ಹೆಚ್ಚು ಮಾತೃಭಾಷೆ ಮಾತನಾಡಬೇಕು. ಅಂಥ ಪರಿಸ್ಥಿತಿ ಬಂದಾಗ ಬೇರೆ ಭಾಷೆ ಮಾತನಾಡಿ. ಶೋಕಿಗಾಗಿ ಇಂಗ್ಲಿಷ್ ಪದಗಳ ಬಳಕೆ ಬೇಡ. ನಮ್ಮ ಭಾಷೆಯ ಬಗ್ಗೆ ನಾವು ಕೀಳರಿಮೆ ತಾಳಬಾರದು, ಮಾತೃಭಾಷೆಯನ್ನು ಎಂದೂ ತುಚ್ಛವಾಗಿ ಕಾರಣಬಾರದು ಎಂದು ಎಚ್ಚರಿಸಿದರು.
ಅಂತರ್ಮುಖಿಯಾಗಲು, ಆಧ್ಯಾತ್ಮದ ಹಾದಿಯಲ್ಲಿ ಮುನ್ನಡೆಯಲು ಚಾತುರ್ಮಾಸ ಉತ್ತಮ ಸಂದರ್ಭ. ಪ್ರಪಂಚವನ್ನು ಕತ್ತಲು ಮಾಡಿ ಆಧ್ಯಾತ್ಮದ ಬೆಳಕನ್ನು ಕಾಣಿಸುವ ಸಾಮರ್ಥ್ಯ ತಮೋಗ್ರಹವಾದ ಶನಿಗೆ ಇದೆ. ಚಾತುರ್ಮಾಸ್ಯ ಕೂಡಾ ಪ್ರಕೃತಿ ಕಾರ್ಮೋಡದಿಂದ ಆವರಿಸಿರುವ ಕಾಲ. ಇದು ಧ್ಯಾನ, ಅನುಷ್ಠಾನಕ್ಕೆ ಯೋಗ್ಯ ಸಮಯ. ಬಾಹ್ಯ ಸಂಚಾರ ನಿಲ್ಲಿಸಿ ಅಂತಃಸಂಚಾರ ಆರಂಭಿಸಲು ಸೂಕ್ತ ಸಮಯ ಎಂದು ವಿಶ್ಲೇಷಿಸಿದರು.
ಗುರುಗಳಲ್ಲಿ ಎಲ್ಲ ದೇವರ ಸನ್ನಿಧಾನ ಇದೆ. ಸಮುದ್ರದಲ್ಲಿ ಎಲ್ಲ ನದಿಗಳು ಇರುವಂತೆ ಎಲ್ಲ ದೇವರಾಶಿಗಳು ಗುರುತತ್ವದಲ್ಲಿ ಅಡಗಿದೆ. ಹೆಜ್ಜೆ ಮುಂದಿಡಲು ಗುರು ಬೇಕು. ದಾರಿ ತೋರಿಸುವವನು ಗುರು. ಗುರುವಿನಲ್ಲಿ ಪರಿಪೂರ್ಣತೆಯನ್ನು ನಾವು ಕಾಣುತ್ತೇವೆ. ಗುರುಪೂರ್ಣಿಮೆ ಗುರುಗಳ ಆರಾಧನೆಗೆ ವಿಶೇಷ ಸಂದರ್ಭ ಎಂದು ಬಣ್ಣಿಸಿದರು.
ಚಾತುರ್ಮಾಸ್ಯದಲ್ಲಿ ಪ್ರತಿ ಗುರುವಾರ ಗುರುಪರಂಪರೆಯ ಪ್ರೀತ್ಯರ್ಥವಾಗು ಲಕ್ಷ ತುಳಸಿ ಅರ್ಚನೆ ನೆರವೇರಿಸಲಾಗುವುದು. ವಿಷ್ಣುಸಹಸ್ರನಾಮದ ಅರ್ಚನೆಯಲ್ಲಿ ಇಡೀ ಸಮಾಜ ಭಾಗವಹಿಸಬೇಕು ಎಂದು ಕರೆ ನೀಡಿದರು. ಪೀಠದ ಪ್ರತಿಯೊಬ್ಬ ಶಿಷ್ಯನಿಗೆ ಗುರುಸೇವೆಯ ಅವಕಾಶವನ್ನು ಕಲ್ಪಿಸುವ ಸವಾಲು ನೂತನ ಮಹಾಮಂಡಲದ ಮುಂದಿದೆ. ಪ್ರತಿಯೊಬ್ಬ ಶಿಷ್ಯರಿಂದ ಯಾವುದಾದರೂ ಒಂದು ಬಗೆಯ ಸೇವೆ ಪೀಠಕ್ಕೆ ಸಲ್ಲಬೇಕು ಎಂದು ಆಶಿಸಿದರು.

ಇದಕ್ಕೂ ಮುನ್ನ ಚಾತುರ್ಮಾಸ್ಯ ವ್ರತಾರಂಭದ ಅಂಗವಾಗಿ ವ್ಯಾಸಪೂಜೆ ವಿದ್ಯುಕ್ತವಾಗಿ ನೆರವೇರಿತು. ಇದೇ ಸಂದರ್ಭದಲ್ಲಿ ನೂತನ ಮಹಾಮಂಡಲ ಮತ್ತು ಶಾಸನತಂತ್ರ ಪದಾಧಿಕಾರಿಗಳ ಉದ್ಘೋಷಣೆ ನೆರವೇರಿತು. ಕನ್ನಡ ಭಾಷೆ- ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವ ಸ್ವಭಾಷಾ ಚಿಂತನ ಎಂಬ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಹವ್ಯಕ ಮಹಾಮಂಡಲದ ನೂತನ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕೋಶಾಧ್ಯಕ್ಷ ಕೆ.ಬಿ.ರಾಮಮೂರ್ತಿ, ಮೂಲಮಠ ಪುನರುತ್ಥಾನ ಸಮಿತಿಯ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಮಾಜಿ ಅಧ್ಯಕ್ಷರಾದ ಡಾ.ವೈ.ವಿ.ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಹಿರಿಯರಾದ ಸತ್ಯನಾರಾಯಣ ಶರ್ಮಾ, ಡಿ.ಡಿ.ಶರ್ಮಾ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಪ್ರಧಾನ ಸಂಯೋಜಕ ಮಂಜುನಾಥ ಸುವರ್ಣಗದ್ದೆ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಭಟ್ ಸೂರಿ ಕಾರ್ಯಕ್ರಮ ನಿರೂಪಿಸಿದರು.


