ಸರ್ಕಾರ ಶ್ರೀಗಂಧ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದರೂ, ಶ್ರೀಗಂಧ ಬೆಳೆಗಾರರು ಎದುರಿಸುತ್ತಿರುವ ಕಳ್ಳತನ ಸಮಸ್ಯೆ ಹಾಗೂ ಭದ್ರತಾ ಆತಂಕಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ, ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀಗಂಧ ಬೆಳೆಗಾರರು ಕಳ್ಳತನ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಶ್ರೀಗಂಧ ಬೆಳೆ ವೃದ್ಧಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೈತರು ಆತಂಕದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಂಧದ ಬೆಳೆ ಹಾಗೂ ಬೆಳೆಗಾರ ರೈತರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ, ಬೆಳೆಗಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಶ್ರೀಗಂಧ ಅತ್ಯಂತ ಮೌಲ್ಯಯುತ ಹಾಗೂ ಆರ್ಥಿಕ ಲಾಭದ ಬೆಳೆ ಆಗಿರುವುದರಿಂದ ಕಳ್ಳರ ಕಣ್ಣಿಗೆ ಬೀಳುತ್ತಿದೆ. ರೈತರು ವರ್ಷಗಳ ಕಾಲ ಶ್ರಮಪಟ್ಟು ಬೆಳೆಸುವ ಶ್ರೀಗಂಧ ಮರಗಳನ್ನು ರಾತ್ರಿ ವೇಳೆ ಕತ್ತರಿಸಿ ಕಳ್ಳತನ ಮಾಡುವ ಘಟನೆಗಳು ಹೆಚ್ಚಾಗುತ್ತಿರುವುದರಿಂದ, ಬೆಳೆಗಾರರು ದೊಡ್ಡ ನಷ್ಟ ಅನುಭವಿಸುತ್ತಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
“ಸರ್ಕಾರ ಶ್ರೀಗಂಧ ಬೆಳೆಯಿರಿ ಎಂದು ಪ್ರೋತ್ಸಾಹ ನೀಡುತ್ತಿದೆ. ಆದರೆ ಬೆಳೆಯಲು ಆರಂಭಿಸಿದ ರೈತರಿಗೆ ಸೂಕ್ತ ಭದ್ರತೆ ನೀಡದೆ ಕಣ್ಣು ಮುಚ್ಚಿ ಕುಳಿತಿದೆ. ರೈತರ ಬೆಳೆ ರಕ್ಷಣೆಗೂ ಸರ್ಕಾರ ಸ್ಪಂದಿಸಬೇಕು,” ಎಂದು ಶ್ರೀಗಂಧ ಬೆಳೆಗಾರರು ಮನವಿಯಲ್ಲಿ ತಿಳಿಸಿದ್ದಾರೆ.
ಶ್ರೀಗಂಧ ಬೆಳೆಗಾರರ ಮನವಿಗೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಅವರು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.




