ದೀಪಾವಳಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಬಿಂಡಿಗ ದೇವಿರಮ್ಮ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿ, ದೇವಿರಮ್ಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದು ಬೆಟ್ಟದ ಮೇಲೆ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ದೀಪಾವಳಿಯ ನರಕ ಚತುದರ್ಶಿ ದಿನ ಬೆಟ್ಟದಲ್ಲಿರುವ ದೇವಿರಮ್ಮ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಮೈಸೂರು ಅರಮನೆಯಿಂದ ಈ ದೇವಾಲಯಕ್ಕೆ ಎಣ್ಣೆ, ಸೀರೆ, ಅರಿಶಿನ-ಕುಂಕುಮ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಕಳುಹಿಸಲಾಗುತ್ತದೆ. ಮಳೆಯ ನಡುವೆಯೂ ಭಕ್ತರು ಬೆಟ್ಟವನ್ನು ಏರುತ್ತಿದ್ದಾರೆ. ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿರಮ್ಮ ತಾಯಿಯನ್ನು ನೋಡಲು ಪ್ರತಿವರ್ಷ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಾರೆ.
ಸಮುದ್ರಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ದೇವಿರಮ್ಮ ಜಾತ್ರೆಯಲ್ಲಿ ಸಾವಿರಾರು ಭಕ್ತರು ಮಳೆ ನಡುವೆ ಜಾರುವ ಗುಡ್ಡವನ್ನು ಏರುತ್ತಾರೆ. ಬೆಟ್ಟ ಹತ್ತುವಾಗ ಕೆಲವು ಭಕ್ತರಿಗೆ ತೊಂದರೆಗಳಾಗಿವೆ. ಈ ಗುಡ್ಡವನ್ನು ಹತ್ತಬೇಕು ಅಂದರೆ 3 ಕಿ.ಮೀ. ಹಗ್ಗ ಹಿಡಿದು ಹತ್ತಬೇಕು. ಮಳೆ, ಕೆಸರಿನ ನಡುವೆ ಗುಡ್ಡ ಹತ್ತುವುದು ಭಕ್ತರಿಗೆ ಒಂದು ಸವಾಲಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಲೇ ಭಕ್ತರು ಬೆಟ್ಟವನ್ನು ಹತ್ತುವ ಮೂಲಕ ದೇವರ ದರ್ಶನ ಪಡೆಯುತ್ತಾರೆ.