ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಸಂಸ್ಥೆ ವತಿಯಿಂದ ಫೆಬ್ರವರಿ 17ರಂದು ಚಿಕ್ಕಮಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ “ಕಾಳುಮೆಣಸು ಮತ್ತಿತರೆ ಸಂಬಾರು ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ರಫ್ತು” ಕುರಿತು ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ತರಬೇತಿ ಕಾರ್ಯಕ್ರಮವು ಸಂಬಾರು ಬೆಳೆಗಾರರು, ರೈತ ಉತ್ಪಾದಕ ಸಂಸ್ಥೆಗಳು (FPOs) ಹಾಗೂ ಸಂಬಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಕ್ಷೇತ್ರದಲ್ಲಿ ತೊಡಗಿರುವ ಉದ್ಯಮಿಗಳಿಗೆ ವಿಶೇಷವಾಗಿ ಉಪಯುಕ್ತವಾಗಲಿದೆ.
ತರಬೇತಿಯ ವೇಳೆ ಕಾಳುಮೆಣಸು ಸೇರಿದಂತೆ ವಿವಿಧ ಸಂಬಾರು ಉತ್ಪನ್ನಗಳ ಸಂಸ್ಕರಣಾ ವಿಧಾನಗಳು, ಮೌಲ್ಯವರ್ಧನೆ ತಂತ್ರಜ್ಞಾನಗಳು, ರಫ್ತು ಗುಣಮಟ್ಟದ ಮಾನದಂಡಗಳು ಹಾಗೂ ಜಾಗತಿಕ ಮಾರುಕಟ್ಟೆ ಅವಕಾಶಗಳ ಕುರಿತು ತಜ್ಞರಿಂದ ಮಾರ್ಗದರ್ಶನ ನೀಡಲಾಗುತ್ತದೆ.
ಇದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚುವರಿ ಮೌಲ್ಯವನ್ನು ಸೇರಿಸಿ ಉತ್ತಮ ದರ ಪಡೆಯುವ ಜೊತೆಗೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶಿಸುವ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಬಾರು ಬೆಳೆಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ, ಇಂತಹ ತರಬೇತಿ ಕಾರ್ಯಕ್ರಮಗಳು ರೈತರ ಆದಾಯ ಹೆಚ್ಚಳಕ್ಕೆ ಹಾಗೂ ರಫ್ತು ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗುವ ನಿರೀಕ್ಷೆಯಿದೆ.
A one-day training program on processing, value addition, and export of pepper and other spices will be held on February 17 at the Chikkamagaluru Zilla Panchayat hall, organized by Karnataka State Agricultural Produce Processing and Export Corporation. The program aims to help farmers, FPOs, and entrepreneurs learn export standards, value addition, and global market opportunities.




