ಮಕ್ಕಳ ಭ್ರಮೆ ಮತ್ತು ವಾಸ್ತವ

January 24, 2025
7:04 AM
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ ಸಾಗಿ ನೆಲದ ಮೇಲೆ ಕಾಣಿಸಿಕೊಳ್ಳುವ ಕಾಂಡವು ಮುಕ್ತವಾಗಿ ಬೆಳೆಯುವ ರೀತಿಯಲ್ಲೇ ನಮ್ಮ ಬದುಕು ಇದೆ. ಬಾಲ್ಯದಲ್ಲಿ ಕಷ್ಟಪಟ್ಟು ಶಿಸ್ತಿನಿಂದ ನಿಯಮಗಳಿಗೆ ಹೊಂದಿಕೊಂಡು ಸಾಧನೆ ಮಾಡಿದರೆ ಈ ಪರಿಶ್ರಮವನ್ನು ಗಮ್ಮತ್ತು ಮಾಡಿ ಯಾರೂ ಕಳಕೊಳ್ಳುವುದಿಲ್ಲ.
ಕಳೆದ ವಾರ ಮುಂಜಾನೆ ಮಕ್ಕಳು ಬೇಗ ಏಳಬೇಕೆಂಬ ಬಗ್ಗೆ ಬರೆದಿದ್ದೆ. ಅದು ಸಾಧ್ಯವಾಗ ಬೇಕಾದರೆ ಹೆತ್ತವರೂ ಬೇಗನೇ ಏಳಬೇಕು. ಅಂದರೆ ಮಕ್ಕಳಲ್ಲಿ ಬೆಳೆಸಬೇಕಾದ ಅಭ್ಯಾಸಗಳಿಗೆ ಹೆತ್ತವರೇ ಮಾದರಿ ಆಗಬೇಕು. ಈ ದೃಷ್ಠಿಯಿಂದ ಹೆತ್ತವರು ಮಕ್ಕಳ ಬಗ್ಗೆ ಇಟ್ಟುಕೊಳ್ಳುವ ಆಶೋತ್ತರಗಳು ಹಾಗೂ ಅವುಗಳ ಗಳಿಕೆಗಾಗಿ ನಿರ್ವಹಿಸಬೇಕಾದ ಕರ್ತವ್ಯಗಳ ಜಾಗೃತಿ ಅಗತ್ಯವಾಗುತ್ತದೆ. ಶಾಲೆಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆಯಾದರೂ ಮನೆಯಲ್ಲಿ ಭವಿಷ್ಯದ ಪ್ರಪಂಚವನ್ನು ಎದುರಿಸುವ ಕೌಶಲಗಳನ್ನು ಮಕ್ಕಳಿಗೆ ಕಲಿಸಬೇಕು. ಈ ಕಲಿಸುವಿಕೆಯ ಹೊಣೆ ಹೆತ್ತವರಿದ್ದೇ ಆಗಿರುತ್ತದೆ.
ಮಕ್ಕಳು ಸಹಜವಾಗಿ ಕುತೂಹಲಿಗಳಾಗಿರುತ್ತಾರೆ. ಅವರಿಗೆ ಪ್ರತಿಯೊಂದನ್ನು ತಿಳಿಯುವ ಕುತೂಹಲ. ಹಾಗಾಗಿ ನೇರಾನೇರ ಪ್ರಶ್ನೆಗಳನ್ನು ಕೇಳಿತ್ತಾರೆ. ಅವರ ಪ್ರಶ್ನೆಗಳ ಹಿಂದೆ ವಂಚನೆಯೂ ಇರುವುದಿಲ್ಲ, ದಾಕ್ಷಿಣ್ಯವೂ ಇರುವುದಿಲ್ಲ. ಹಾಗಾಗಿ ಅವರು ಕೇಳುವ ಪ್ರಶ್ನೆ ಎಷ್ಟೇ ಜಿಗುಟಿನದ್ದಾದರೂ ಹೆತ್ತವರು ಉತ್ತರಿಸಬೇಕು. “ಇದು ನೀನು ಕೇಳಬೇಕಾದ ಪ್ರಶ್ನೆ ಅಲ್ಲ” ಅಥವಾ  “ಇಂತಹ ಪ್ರಶ್ನೆಯನ್ನು ನೀನು ಕೇಳಬಾರದು” ಎಂತ ಹೇಳಿ ಮಕ್ಕಳ ಬಾಯಿ ಮುಚ್ಚಿಸಬಾರದು. ಬದಲಿಗೆ ಉತ್ತರಿಸಲು ಮುಜುಗರ ಆಗುವಂತಹ ಪ್ರಶ್ನೆಯಾದರೆ “ತಿಳಿದು ಹೇಳುತ್ತೇನೆ” ಎಂದು ಹೇಳಿ ಮತ್ತೆ ಯಾವಾಗಲಾದರೂ ಸೂಕ್ತ ಉತ್ತರ ನೀಡಬಹುದು.
ಹೆತ್ತವರಿಗೆ ಮಗುವೇ ಆದರೂ ಅದು ಬೆಳೆಯುತ್ತ ಬಿಗುವಾಗುತ್ತದೆ. ಸಮಾಜದೊಳಗಿನ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಬಗ್ಗೆ ಅದರದ್ದೇ ಆದ ಅರ್ಥಗಳನ್ನು ಕಟ್ಟಿಕೊಳ್ಳುತ್ತದೆ. ಉದಾಹರಣೆಗೆ “ಗಮ್ಮತ್ತು ಮಾಡುವುದು” ಎಂಬುದರ ಅರ್ಥವನ್ನು  ಮಕ್ಕಳು ಸಹಪಾಠಿಗಳಿಂದ ಕಲಿಯುತ್ತಾರೆ. ಕಿರಿಚುವುದು, ಹಾರುವುದು, ಕುಣಿಯುವುದು, ಓಡುವುದು, ಬೇಕಾದ್ದನ್ನು ಬೇಕಾದಷ್ಟು ಕೈ ಹಾಕಿ ತಿನ್ನುವುದು, ಕುಡಿಯುವುದು, ಜೋಕ್‍ಗಳನ್ನು ಹೇಳುವುದು, ಅಶ್ಲೀಲ ಜೋಕ್‍ಗಳನ್ನು ಮಾಡುವುದು, ದೊಡ್ಡವರ ಸಂಭಾಷಣೆಗಳಿಗೆ ಕಿವಿಗೊಡುತ್ತ ಸಮಯ ಕಳೆಯುವುದು ಹೀಗೆ ಗಮ್ಮತ್ತೆಂಬುದು ಮಕ್ಕಳ ಮನಸ್ಸಿನಲ್ಲಿ ಹೆತ್ತವರ ಚಿಂತನೆಗಿಂತ ಭಿನ್ನವಾದ ಚಿತ್ರಣವನ್ನು ಪಡೆಯುತ್ತದೆ. ಆದರೆ ಮನೆಯಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲದಾಗ ಮಕ್ಕಳಿಗೆ ಮನೆಯೇ ಬೋರ್ ಅನ್ನಿಸಬಹುದು. ಶಾಲೆಯಲ್ಲಿ ಇದಕ್ಕೆಲ್ಲ ಅವಕಾಶವಿಲ್ಲದಾಗ ಶಾಲೆಯೂ ಬೋರ್ ಅನ್ನಿಸಬಹುದು. ಹಾಗಿದ್ದಾಗ ಮಕ್ಕಳು ಗಮ್ಮತ್ತನ್ನು ಹುಡುಕುವ ಜಾಗೆಗಳು ಮತ್ತು ಸಂದರ್ಭಗಳು ನಿಯಂತ್ರಣದಲ್ಲಿ ಇರಬೇಕೇ ಬೇಡವೇ ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಈ ಬಗ್ಗೆ ಮನೆಯಲ್ಲಿ ಹೆತ್ತವರೂ ಯೋಚಿಸಬೇಕು ಮತ್ತು ಶಾಲೆಯಲ್ಲಿ ಶಿಕ್ಷಕರೂ ಚಿಂತಿಸಬೇಕು.
ಆರೋಗ್ಯವಂತ ಮಕ್ಕಳಿಗೆ ನೋಡಲು, ಕೇಳಲು, ಮಾತಾಡಲು, ಮುಟ್ಟಿ ಪರಿಶೀಲಿಸಲು, ಓಡಾಡಲು, ಎತ್ತಿ ತೆಗೆದುಕೊಳ್ಳಲು, ತಿನ್ನಲು, ಕುಡಿಯಲು, ಏನೂ ಮಾಡದೆ ಸುಮ್ಮನಿರಲು ಬೇಕಾದ ಸಾಮರ್ಥ್ಯವಿದೆ. ಇದು ಒಂದು ಭಾಗ್ಯ. ಈ ಭಾಗ್ಯ ಇಲ್ಲದವರು ಅದೆಷ್ಟೋ ಮಂದಿ ಇದ್ದಾರೆ. ಹಾಗಾಗಿ ತಮ್ಮ ಭಾಗ್ಯಕ್ಕಾಗಿ ದೇವರಿಗೆ ಕೃತಜ್ಞರಾಗಿದ್ದು ತಮ್ಮ ಶಕ್ತಿಗಳನ್ನು  ಸದುಪಯೋಗಪಡಿಸುವ ಜಾಣ್ಮೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಇದನ್ನು ಜಾಣ್ಮೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ನಾಗರಿಕ ಪ್ರಜ್ಞೆ ಮತ್ತು ಹೊಣೆಗಾರಿಕೆ ಎನ್ನಬಹುದು. ಏಕೆಂದರೆ ಇನ್ನೊಂದೆಡೆಯಲ್ಲಿ ಮಾತು ಬಾರದ, ನಡೆಯಲಾಗದ, ಕಿವಿ ಕೇಳಿಸದ, ಕೈಗಳಲ್ಲಿ ಬಲವಿಲ್ಲದ, ನಿರಂತರ ಅನಾರೋಗ್ಯಕ್ಕೆ ಪಕ್ಕಾಗುವ, ಗುಣಪಡಿಸಲಾಗದ ಅಪರೂಪದ ಕಾಯಿಲೆಗೆ ತುತ್ತಾಗಿ  ನರಳುವ ದೌರ್ಭಾಗ್ಯದ ಸ್ಥಿತಿ ಅನೇಕ ಮಕ್ಕಳದ್ದಾಗಿದೆ. ಅವರಿಂದ ಕೇಕೆ ಹಾಕಿ ನಗಲಾಗುವುದಿಲ್ಲ, ಎದ್ದು ಕುಣಿಯಲು ಆಗುವುದಿಲ್ಲ, ತಮ್ಮ ಭಾವನೆಗಳನ್ನು ಹೇಳಲಾಗುವುದಿಲ್ಲ, ನೋವುಗಳಿಂದಾಗಿ ಹೊಸ ಆಲೋಚನೆಗಳು ಹೊಳೆಯುವುದಿಲ್ಲ, ತಮ್ಮ ಶೌಚ ಮತ್ತು ಸ್ವಚ್ಛತೆಗಳನ್ನು ಮಾಡಿಕೊಳ್ಳಲಾಗುವುದಿಲ್ಲ, ಬದುಕಿನಲ್ಲಿ ಭರವಸೆಯನ್ನೇ ಕಾಣಲಾಗದ ಸ್ಥಿತಿಯಲ್ಲಿ ಅವರು ಇರುತ್ತಾರೆ. ತಮ್ಮ ದೌರ್ಭಾಗ್ಯಕ್ಕಾಗಿ ನಿತ್ಯವೂ ಮರುಗುವ ಸ್ಥಿತಿ ಅವರದ್ದಾಗಿದ್ದರೂ ಕೆಲವರು ಈ ದುಃಸ್ಥಿತಿಗಳನ್ನು ಮೀರಿ ಸಾಧನೆಗಳನ್ನು ಮಾಡುತ್ತಾರೆ. ಈ ಸಾಧನೆಗಳ ಯಶಸ್ಸನ್ನು ಪಾರಾಲಿಂಪಿಕ್ಸ್‍ನಲ್ಲಿ ಸ್ಪರ್ಧಿಸಿ ಸಾಧಿಸುವ ಛಲಗಾರರಿದ್ದಾರೆ. ಅವರಿಗೆ ಈ ಯಶಸ್ಸೇ ಗಮ್ಮತ್ತು. ಹಾಗಿದ್ದರೆ ನಿಜವಾದ ಗಮ್ಮತ್ತು ಎಂಬುದು ಇರುವುದು ತಮ್ಮ ಶಕ್ತಿ ಮೀರಿ ಮಾಡಿದ ಸಾಧನೆಯ ಯಶಸ್ಸನ್ನು ಕಾಣುವುದರಲ್ಲಿ ಎಂಬುದು ಸಾಮರ್ಥ್ಯವಂತ ಮಕ್ಕಳ ಚಿಂತನೆಯಾಗಬೇಕು.
ಯಾವುದು ಗಮ್ಮತ್ತೆಂಬುದನ್ನು ಗುರುತಿಸಿಕೊಳ್ಳಲಾರದ ಸ್ಥಿತಿಯಲ್ಲಿ ನಮ್ಮ ಮಕ್ಕಳಿದ್ದಾರೆ. ಅವರಿಗೆ ಪಾಶ್ಚಾತ್ಯ ಜಗತ್ತಿನಿಂದ ಗಮ್ಮತ್ತಿನ ಮಾದರಿಗಳು ಸಿಕ್ಕಿವೆ. ಅವುಗಳನ್ನು ಅನುಕರಿಸುತ್ತಾರೆ. ಆದರೆ ನಮ್ಮ ಮಕ್ಕಳ ಸಾಮಾಜಿಕ-ಆರ್ಥಿಕ ನೆಲೆಗಳು ಪಾಶ್ಚಾತ್ಯ ಜಗತ್ತಿನಂತಿಲ್ಲ. ಬದುಕನ್ನು ರೂಪಿಸಿಕೊಳ್ಳುವ ಅವಕಾಶಗಳೂ ಪಾಶ್ಚತ್ಯ ಜಗತ್ತಿನಂತಿಲ್ಲ. ಪ್ರಸ್ತುತ ಶಿಕ್ಷಣದ ವ್ಯವಸ್ಥೆಗಳೂ ನಮ್ಮ ದೇಶದಲ್ಲಿ ಪಾಶ್ಚಾತ್ಯ ಜಗತ್ತಿನಂತಿಲ್ಲ. ಕೌಟುಂಬಿಕ ಸಂಬಂಧಗಳ ಬಲೆಯೂ ವಿಭಿನ್ನವಾಗಿದೆ. ಅಲ್ಲಿ ಹಾಡು, ನೃತ್ಯ ಮತ್ತು ಸಂಭ್ರಮವನ್ನು ಕೇಕೆ ಹಾಕಿ ವ್ಯಕ್ತಪಡಿಸುವ ಕ್ರಮವೂ ಬೇರೆಯೇ. ಆದರೆ ನಮ್ಮ ಯುವಜನರು ಈ ಭೇದಗಳನ್ನು ತಿಳಿಯದೆ ಅನುಕರಣೆ ಮಾಡಲು ಹೋಗಿ ಕಳೆದುಕೊಳ್ಳುವುದೇ ಹೆಚ್ಚು. ತಾವು ಸಂಭ್ರಮ ಪಡಬೇಕಾದ ಅಥವಾ ಗಮ್ಮತ್ತನ್ನು ಅನುಭವಿಸಬೇಕಾದ ಚಟುವಟಿಕೆಗಳು ಯಾವುವು ಎಂಬುದನ್ನು ಗುರುತಿಸಬೇಕು. ಚಿಂತನೆಯ ಸಾಮರ್ಥ್ಯ, ಮಾತುಗಾರಿಕೆಯ ಕೌಶಲ, ಪರೀಕ್ಷೆಯ ಅಂಕಗಳು, ಪಠ್ಯೇತರ ಚಟುವಟಿಕೆಗಳ ಪ್ರಶಸ್ತಿಗಳು ಪತ್ರಿಕಾಲೇಖನಗಳು, ಸಂಶೋಧನೆ ಮಾಡಿ ರೂಪಿಸಿದ ವಿಜ್ಞಾನ ಮಾದರಿಗಳು ಹೀಗೆ ವಿದ್ಯಾರ್ಥಿಗಳಾಗಿ ಮಾಡುವ ಸಾಧನೆಗಳ ಖುಷಿಯನ್ನು ಅನುಭವಿಸಬೇಕು. ಈ ಕುರಿತಾದ ಮನೋಧರ್ಮವನ್ನು ತಾಳಿದಾಗ ಯುವ ಮಕ್ಕಳ ವರ್ತನೆಗಳು ಕಿರಿಕಿರಿ ಎನ್ನಿಸುವುದಿಲ್ಲ.
ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತಗಳು ಮಕ್ಕಳಿಗೆ ಸಾಮರ್ಥ್ಯ ವೃದ್ಧಿಯ ಹಂತಗಳಾಗಿಯೇ ಇರುತ್ತವೆ. ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ ಸಾಗಿ ನೆಲದ ಮೇಲೆ ಕಾಣಿಸಿಕೊಳ್ಳುವ ಕಾಂಡವು ಮುಕ್ತವಾಗಿ ಬೆಳೆಯುವ ರೀತಿಯಲ್ಲೇ ನಮ್ಮ ಬದುಕು ಇದೆ. ಬಾಲ್ಯದಲ್ಲಿ ಕಷ್ಟಪಟ್ಟು ಶಿಸ್ತಿನಿಂದ ನಿಯಮಗಳಿಗೆ ಹೊಂದಿಕೊಂಡು ಸಾಧನೆ ಮಾಡಿದರೆ ಈ ಪರಿಶ್ರಮವನ್ನು ಗಮ್ಮತ್ತು ಮಾಡಿ ಯಾರೂ ಕಳಕೊಳ್ಳುವುದಿಲ್ಲ. ಆದರೆ ಬೇರಿನ ಹಂತದಲ್ಲಿ ಆಗಬೇಕಾದ ಬೆಳವಣಿಗೆಗೆ ಹೊರಗಿನ ಸಹಾಯ ಸಿಕ್ಕಿ, ತಂದೆ ತಾಯಿಯ ಕಷ್ಟದ ಸಂಪಾದನೆಯಲ್ಲಿ ಡೊನೇಶನ್ ಕೊಟ್ಟು ಶಾಲೆಗೆ ಸೇರಿದ ಮಕ್ಕಳಿಗೆ ಪರಿಶ್ರಮಪಟ್ಟ ಅನುಭವ ಇರುವುದಿಲ್ಲ. ಹಾಗಾಗಿ ಮಕ್ಕಳು ಬಾಲ್ಯದಲ್ಲಿ ಪರಿಶ್ರಮದ ಮೂಲಕವೇ ಯಶಸ್ಸನ್ನು ಸಾಧಿಸಿ ಗಮ್ಮತ್ತನ್ನು ಅನುಭವಿಸುವಂತೆ ಹೆತ್ತವರು ಪ್ರೇರಣೆ ನೀಡಬೇಕು.
ಬರಹ :
ಚಂದ್ರಶೇಖರ ದಾಮ್ಲೆ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು
January 23, 2025
11:24 AM
by: ಪ್ರಬಂಧ ಅಂಬುತೀರ್ಥ
ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ
January 9, 2025
10:49 AM
by: ಡಾ.ಚಂದ್ರಶೇಖರ ದಾಮ್ಲೆ
ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು
January 2, 2025
10:34 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror