ನೈಸರ್ಗಿಕ ಕೃಷಿಯ ಕಡೆಗೆ ಹಲವಾರು ಜನ ವಾಲುತ್ತಿದ್ದರೂ ಕೂಡ ದಿನೇ ದಿನೇ ಸೋಂಬೇರಿ ರೈತರುಗಳ(Farmer) ಸಂಖ್ಯೆ ಹೆಚ್ಚಾಗುತ್ತಿದೆ. ರೆಡಿಯಾಗಿರುವ ಉತ್ಪನ್ನ ರಾಸಾಯನಿಕ(Chemical) ರೂಪದಲ್ಲಿ ತಂದು ಸಿಂಪರಣೆ ಮಾಡುವುದರ ಮುಖಾಂತರ ಭೂಮಿಗೆ(Earth) ಸೇರಿಸುವುದರ ಮುಖಾಂತರ ಬೆಳೆಗಳಿಗೆ(Crop) ಕೊಟ್ಟು ಕೈಚಲ್ಲೇ ಕುಳಿತುಕೊಂಡು ಜನರ ಹಾಗೂ ತಮ್ಮ ಆರೋಗ್ಯದ(Health) ಮೇಲೆ ಭವಿಷ್ಯದಲ್ಲಿ ತುಂಬಾ ಅಪಾಯವನ್ನು ತಂದಿಡುತ್ತಿದ್ದಾರೆ ಹಾಗೂ ತಂದುಕೊಳ್ಳುತ್ತಿದ್ದಾರೆ.
ಸುಮಾರು ದಿನಗಳ ಹಿಂದೆ ರೇಷ್ಮೆ ಬೆಳೆಯ ಬಗ್ಗೆ ಸ್ವಲ್ಪ ಚಿಂತನೆ ನಡೆದಿತ್ತು. ಸುಮಾರು ನಾಲ್ಕು ತಿಂಗಳಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಕೆಲವು ಭಾಗಗಳಲ್ಲಿ ರೇಷ್ಮೆ ಬೆಳೆ ಸಂಪೂರ್ಣವಾಗಿ ನಾಶವಾಯಿತು. ಇದಕ್ಕೆ ಕಾರಣ ಸಂಪೂರ್ಣವಾಗಿ ಕಲುಷಿತಗೊಂಡ ಹಾಗೂ ರಾಸಾಯನಿಕಗೊಂಡ ವಾತಾವರಣದಲ್ಲಿನ ಗಾಳಿ. ನಮ್ಮ ಪ್ರಕಾರ ಇಲ್ಲಿಯವರೆಗೆ ದ್ರಾಕ್ಷಿ ಬೆಳೆಗೆ ಅತಿ ಹೆಚ್ಚು ಕೆಮಿಕಲ್ ಬಳಸುತ್ತಾರೆ ಎನ್ನುವ ಅಂದಾಜು ಹಾಗೂ ಮಾಹಿತಿ ಇತ್ತು. ಆದರೆ ಈ ವರ್ಷ ದ್ರಾಕ್ಷಿಗೆ ಬಳಸುವ ಹತ್ತು ಪಟ್ಟು ಕೆಮಿಕಲ್ ಅನ್ನು ಕೇವಲ ನಾಲ್ಕು ತಿಂಗಳ ಬೆಳೆಯಾದ ಮೆಣಸಿನಕಾಯಿಗೆ ಬಳಸಿದರು. ಪ್ರತಿದಿನ ಬೆಳಗ್ಗೆ ಸಂಜೆ ದಿನಕ್ಕೆ ಎರಡು ಬಾರಿಯಂತೆ ಕೆಮಿಕಲ್ ಸಿಂಪರಣೆ ಮಾಡಿ ವಾತಾವರಣದಲ್ಲಿನ ಗಾಳಿ ಸಂಪೂರ್ಣ ವಿಷವಾಗಿ ರೇಷ್ಮೆ ಹುಳುಗಳೆಲ್ಲವೂ ಸಾವನ್ನಪ್ಪಿ ರೇಷ್ಮೆ ಬೆಳೆಗಳೆಲ್ಲವೂ ಫೇಲಾದವು….
ನನ್ನ ಕಣ್ಣಾರೆ ನಾನೇ ನೋಡಿದ್ದ ಒಂದು ಸನ್ನಿವೇಶ ಹೇಳಬೇಕೆಂದರೆ ಇಲ್ಲಿಂದ 70 ಕಿ.ಮೀ ದೂರದಲ್ಲಿರುವ ನಮ್ಮ ಚಿಕ್ಕಪ್ಪ ಮೆಣಸಿನ ಗಿಡದ ಹೊಲಕ್ಕೆ ಎಷ್ಟು ಕೆಮಿಕಲ್ ಬಳಸಿದ್ದರು ಅಂದರೆ ಕೆಮಿಕಲ್ ಬಳಸಿದ ನಂತರ ಉಳಿದಿರುವ ಖಾಲಿ ಡಬ್ಬಿಗಳನ್ನು ಹಾಗೂ ಪ್ಲಾಸ್ಟಿಕ್ ಗಳನ್ನು ಎಲ್ಲವೂ ಸೇರಿ 10,000 ಕ್ಕೆ ಮಾರಾಟ ಮಾಡಿದ್ದರು. ಹಾಗಿದ್ದರೆ ಬಳಸಿದ ರಾಸಾಯನಿಕದ ಬೆಲೆ ಎಷ್ಟಾಗಿರಬಹುದು…. ಮೆಣಸಿನಕಾಯಿ ಉದ್ದವಾಗಿರಬೇಕು, ಕೆಂಪಾಗಿರಬೇಕು, ದಪ್ಪ ಆಗಿರಬೇಕು ಎನ್ನುವ ದೃಷ್ಟಿಯಲ್ಲಿ ಫಾರಂ ಕೋಳಿಗೆ ಇಂಜೆಕ್ಷನ್ ಕೊಟ್ಟು ದಪ್ಪ ಮಾಡಿರುವ ಹಾಗೆ ಬೆಳೆಗಳನ್ನು ಕೂಡ ಅದೇ ರೀತಿ ಬೆಳೆಸುವ ಪರಿಸ್ಥಿತಿಗೆ ಅಥವಾ ಮನಸ್ಥಿತಿಗೆ ನಮ್ಮ ರೈತ ಬಂಧು ನಿಂತಿದ್ದಾನೆ. ಹಿರೇ ಮೆಣಸಿನಕಾಯಿಯನ್ನು ವರ್ಷಪೂರ್ತಿ ಪುಡಿ ಮಾಡಿ ಮಸಾಲೆ, ಖಾರದ ಪುಡಿ ಇನ್ನಿತರೆ ಉತ್ಪನ್ನಗಳಿಗೆ ಬಳಸುವ ನಾವು ನಮ್ಮ ಆರೋಗ್ಯವನ್ನು ಎಲ್ಲಿಗೆ ಕೊಂಡುಕೊಂಡು ಹೋಗುತ್ತಿದ್ದೇವೆ.
ಅದೇ ದಾರಿಯಲ್ಲಿ ಮತ್ತೊಂದು ಬೆಳೆ ಕಲ್ಲಂಗಡಿ. ನಮ್ಮ ತೋಟದ ಸುತ್ತಮುತ್ತ ಅತಿ ಹೆಚ್ಚು ಕಲ್ಲಂಗಡಿ ಬೆಳೆಯುತ್ತಾರೆ. ನಾನು ಪ್ರತಿದಿನವೂ ಗಮನಿಸುತ್ತಿರುತ್ತೇನೆ. ನರ್ಸರಿಯಿಂದ ಸಸಿ ತೆಗೆದುಕೊಂಡು ಬಂದು ಭೂಮಿಗೆ ಇಟ್ಟ ಮೇಲೆ ದಿನಕ್ಕೆ ಎರಡು ಬಾರಿ ಕೆಮಿಕಲ್ ಸಿಂಪರಣೆ ಮಾಡುತ್ತಲೇ ಇರುತ್ತಾರೆ. ಕೇವಲ 60 ದಿನದ ಬೆಳೆ ಇದಾಗಿದಿರುವುದರಿಂದ ಅವರು ಹೇಳಿರುವ ಪ್ರಕಾರ ಕಲ್ಲಂಗಡಿ ಕಟಾವು ಆಗುವ ಹೊತ್ತಿಗೆ ಬಹುಶಃ 80 ಬಾರಿ ಸಿಂಪರಣೆ ತೆಗೆದುಕೊಂಡಿರುತ್ತದೆ ಎಂದು. ಕೇವಲ 60 ದಿನದಲ್ಲಿ ಕಟವಾಗುವ ಕಲ್ಲಂಗಡಿ 60 ರಿಂದ 80 ಬಾರಿ ಸಿಂಪರಣೆ ತೆಗೆದುಕೊಳ್ಳುತ್ತದೆ ಎಂದರೆ ಸಂಪೂರ್ಣ ಕಲ್ಲಂಗಡಿ ವಿಷವಾಗಿದೆ ಅಂತ ತಾನೇ ಅರ್ಥ.
ಹಾಗಿದ್ದರೂ ಸಹ ಮಾರುಕಟ್ಟೆಯಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು. ಹತ್ತು ರೂಪಾಯಿ ಕೊಟ್ಟು ಪ್ಲಾಸ್ಟಿಕ್ ಗ್ಲಾಸ್ ನಲ್ಲಿ ಕಲ್ಲಂಗಡಿಯ ತುಣುಕುಗಳನ್ನು ಹಾಕಿಕೊಂಡು ಅದಕ್ಕೊಂದು ಕಡ್ಡಿ ತೆಗೆದುಕೊಂಡು ಕಡ್ಡಿಯಿಂದ ಚುಚ್ಚಿ ಚುಚ್ಚಿ ತಿಂದಿದ್ದೆ ತಿಂದಿದ್ದು,.. ಕಡ್ಡಿಯಿಂದ ಕಲ್ಲಂಗಡಿಗೆ ಚುಚ್ಚಿ ತಿಂದಾಗ ಆ ಕಲ್ಲಂಗಡಿ ನಮ್ಮ ಬದುಕನ್ನು ಎಷ್ಟು ಚುಚ್ಚುತ್ತದೆ ಎನ್ನುವುದು ಕೇವಲ ಬೆಳೆದ ರೈತನಿಗೆ ಗೊತ್ತು. ಇಷ್ಟೊಂದು ಕೆಮಿಕಲ್ ಸಿಂಪರಣೆ ಮಾಡಿದರೆ ತಿನ್ನುವುದು ಹೇಗೆ ಎಂದು ನಾನು ನಮ್ಮ ಪಕ್ಕದ ತೋಟದ ರೈತನಿಗೆ ಕೇಳಿದಾಗ ಅವನು ಕೊಟ್ಟ ಉತ್ತರ ಹೀಗಿತ್ತು. ಏನ್ ಮಾಡೋದು ವೀರೇಶಣ್ಣ ಮಾರ್ಕೆಟ್ ನಲ್ಲಿ ಕಲರ್ ಕೇಳ್ತಾರೆ ದಪ್ಪ ಕೇಳ್ತಾರೆ ಚೆನ್ನಾಗಿರಬೇಕು ಅಂತ ಕೇಳ್ತಾರೆ ಅದಕ್ಕಾಗಿ ನಾವು ಸಂಪಾದನೆ ಮಾಡೋದಿಕ್ಕೋಸ್ಕರ ಮಾಡಲೇಬೇಕು. ನಮ್ಮ ಮನೆಗೆ ಬೇಕಾದಷ್ಟು ನಾನು ಒಂದು ಸಾಲು ಬಿಟ್ಟಿಕೊಂಡಿರುತ್ತೇನೆ. ಅದರಲ್ಲಿ ಸ್ವಲ್ಪ ಇಳುವರಿ ಕಡಿಮೆ ಬರುತ್ತದೆ. ಅದಕ್ಕೆ ಏನು ಸಿಂಪರಣೆ ಮಾಡೋದಿಲ್ಲ ಕೇವಲ ಸ್ವಲ್ಪ ಗೊಬ್ಬರ ಹಾಕಿರ್ತೀನಿ ಅದನ್ನು ಮಾತ್ರ ನಾವು ನಮ್ಮ ಮನೆಯವರು ತಿಂತೀವಿ.. ಅಂತ ಹೇಳ್ತಾನೆ ಅಂದ್ರೆ ಜನ ಸಹ ವಿಷವನ್ನೇ ಕೇಳುತ್ತಿದ್ದಾರೆ ಅಂತ ತಾನೆ ಅರ್ಥ.
ಈ ರೀತಿಯ ವಿಷ ಆಹಾರಗಳನ್ನು ತಿಂದು ತಿಂದು ನಮ್ಮ ಮನೆಯ ಹೆಣ್ಣು ಮಗಳು ಸರಿಯಾದ ಸಮಯಕ್ಕೆ ಋತುಮತಿಯಾಗುತ್ತಿಲ್ಲ ,ಸರಿಯಾದ ಸಮಯಕ್ಕೆ ಋತುಚಕ್ರವಾಗುತ್ತಿಲ್ಲ ಗರ್ಭಿಣಿ ಆಗುತ್ತಿಲ್ಲ, ಸರಿಯಾಗಿ ಮಕ್ಕಳಾಗುತ್ತಿಲ್ಲ, ಗಂಡು ಮಕ್ಕಳಿಗೆ ಸಂತಾನ ಭಾಗ್ಯವಿಲ್ಲ, ಆರೋಗ್ಯದಲ್ಲಿ ಸಂಪೂರ್ಣ ಏರುಪೇರು ದೇಹದ ಬೆಳವಣಿಗೆಯಲ್ಲಿ ಕುಂಠಿತ. ಹೇಳೋಕೆ ಹೋದರೆ ಒಂದಾ ಎರಡಾ….
ರೈತನ ಮನ ಪರಿವರ್ತನೆ ಮಾಡುವುದಕ್ಕಿಂತ ಮೊದಲು ಗ್ರಾಹಕನ ಮನ ಪರಿವರ್ತನೆ ಆಗುವುದು ಇಲ್ಲಿ ಅವಶ್ಯಕವಾಗಿದೆ ಮುಂದಿನ ದಾರಿ ನನಗೂ ತೋಚುತ್ತಿಲ್ಲ. ನೈಸರ್ಗಿಕ ಕೃಷಿಯ ಕಡೆ ಬನ್ನಿ ಎಂದು ಕೇವಲ ರೈತರನ್ನು ಹುರಿದುಂಬಿಸುವುದರ ಜೊತೆಗೆ ಗ್ರಾಹಕರಿಗೂ ಅರಿವು ಮೂಡಿಸುವ ಕಾರ್ಯಗಳು ನಡೆಯಬೇಕು.