ಚಂದ್ರಮಕುಟ, Common hoopoe.( Upupa epops) ಈ ಹಕ್ಕಿಯನ್ನು ನೆಲಕುಟುಕ ಎಂಬ ಹೆಸರಿನಿಂದಲೂ ಕರೆಯುತ್ತಾರೆ.ಪ್ರತಿಯೊಂದು ಹಕ್ಕಿಯೂ ವಿಶಿಷ್ಟವೇ.
ಕೆಲವೊಂದು ಹಕ್ಕಿ ತನ್ನ ಚಿತ್ರ ವಿಚಿತ್ರ ಬಣ್ಣದಿಂದ, ಇನ್ನೊಂದು , ತನ್ನ ಆಕರ್ಷಕ ಆಕಾರದಿಂದ, ಅಥವಾ ಉದ್ದನೆಯ ಬಾಲದಂತ ಗರಿಗಳಿಂದ , ಅಥವಾ ದಪ್ಪನೆಯ ಕೊಕ್ಕಿನಿಂದ , ಮೊನಚಾದ ಕಣ್ಣುಗಳಿಂದ ಗುರುತಿಸ್ಪಟ್ಟರೆ ಈಗ ನಾವು ನೋಡುತ್ತಿರುವ ಈ ಹಕ್ಕಿ ತನ್ನ ಇಡೀ ಚೆಂದದ ರೂಪಿನಿಂದಲೇ ತನ್ನತ್ತ ಸೆಳೆಯುತ್ತದೆ. ಮೈ ಬಣ್ಣವೇ ಚೆಂದ, ಅದರಲ್ಲೂ ತಲೆಯ ಮೇಲಿನ ಕಿರೀಟದಂತಹ ರಚನೆಯುಂಟಲ್ಲಾ ಇನ್ನೂ ಚೆಂದ. ಇದೇ ಹಕ್ಕಿ ನೋಡಿ ಚಂದ್ರಮಕುಟ.
ನವೆಂಬರ್ ತಿಂಗಳಿನಲ್ಲಿ ನಮ್ಮ ಬಾಳಿಲ ಪರಿಸರದಲ್ಲಿ ಕಂಡು ಬರುತ್ತದೆ. ಪ್ರಾದೇಶಿಕ ವಲಸೆ ಹಕ್ಕಿಯಾಗಿದೆ. ಮೊನ್ನೆ ನಮ್ಮ ಮನೆಯಂಗಳದಲ್ಲಿ ನಲಿಯುತ್ತಿದ್ದ ಮೈನಾ ಗಾತ್ರ( 31 cm)ದ ಹಕ್ಕಿ ಒಂದರೆಗಳಿಗೆ ನಮ್ಮನ್ನು ತನ್ನತ್ತ ಸೆಳೆದದ್ದಂತು ಹೌದು.
ಇದರ ಮೈ ಮೇಲೆಲ್ಲಾ ಜೀಬ್ರಾ ಪಟ್ಟಿಗಳಂತೆ ಕಪ್ಪು ಬಿಳಿ ಪಟ್ಟಿಗಳಿವೆ. ಕುತ್ತಿಗೆ ಹಾಗೂ ಎದೆ ತಿಳಿಯಾದ ಕಿತ್ತಳೆ ಬಣ್ಣದಲ್ಲಿದೆ. ತಲೆಯ ಮೇಲಿರುವ ಜುಟ್ಟು ಹಿಮ್ಮುಖವಾಗಿ ಇನ್ನೊಂದು ಕೊಕ್ಕಿದೆಯೇನೋ ಎಂಬ ಭ್ರಮೆಯನ್ನೇ ಹುಟ್ಟಿಸುವಂತಿದೆ.
ಇವುಗಳು ಒಂಟಿಯಾಗಿ ಅಥವಾ ಜೊತೆಯಾಗಿಯೂ ಕಂಡು ಬರುತ್ತವೆ.
ಸದಾ ಚಟುವಟಿಕೆಯಿಂದ ಇರುವ ಹಕ್ಕಿಯಾಗಿದೆ. ಕ್ಷಣಾರ್ಧದಲ್ಲಿ ಹುಳು, ಹುಪ್ಪಟೆ ಕೀಟಗಳನ್ನು ಹಿಡಿದು ತಿನ್ನುತ್ತವೆ. ಮರಿಗಳನ್ನು ಬಹಳ ಜತನದಿಂದ ಲಾಲನೆ , ಪಾಲನೆ ಮಾಡಿ ಕೊಳ್ಳುತ್ತದೆ. ಮೆಲು ದನಿಯ ಈ ಹಕ್ಕಿ ಫೆಬ್ರವರಿ ಯಿಂದ ಮೇ ವರೆಗೆ ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತವೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಯು. ರಾಧಾಕೃಷ್ಣ ರಾವ್ ಬಾಳಿಲ