ಒಂದು ಸಮಾಜದ ನೈತಿಕತೆ, ಸಂಸ್ಕೃತಿ ಹಾಗೂ ಪ್ರಗತಿಯ ನಿಜವಾದ ಅಳತೆ ಅರಮನೆಗಳಲ್ಲೋ, ಶಾಸನಸಭೆಗಳಲ್ಲೋ ಅಲ್ಲ; ಬದಲಾಗಿ ರಸ್ತೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ಆಸ್ಪತ್ರೆಗಳಲ್ಲಿ, ದೇವಸ್ಥಾನಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಯ ವರ್ತನೆ ಅವನ ವೈಯಕ್ತಿಕ ಶಿಸ್ತು ಮಾತ್ರವಲ್ಲ, ಅವನು ಸೇರಿರುವ ಸಮಾಜದ ನಾಗರಿಕ ಸಂಸ್ಕೃತಿಯ ಪ್ರತಿಬಿಂಬವೂ ಆಗಿರುತ್ತದೆ.
ಶಿಸ್ತು ಎಂಬುದು ಕಾನೂನಿನ ಭಯವಲ್ಲ, ಆತ್ಮಸಂಯಮ : ಶಿಸ್ತು ಎಂದರೆ ಕೇವಲ ದಂಡದ ಭಯದಿಂದ ನಡೆದುಕೊಳ್ಳುವುದಲ್ಲ. ಅದು “ನಾನು ಯಾರಿಗೂ ತೊಂದರೆ ಕೊಡಬಾರದು” ಎಂಬ ಆಂತರಿಕ ಜಾಗೃತಿ. ಸಂಚಾರ ನಿಯಮಗಳನ್ನು ಪಾಲಿಸುವುದು, ಸಾಲಿನಲ್ಲಿ ನಿಲ್ಲುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು, ಕಸವನ್ನು ಯಥಾಸ್ಥಾನದಲ್ಲಿ ಹಾಕುವುದು ಇವೆಲ್ಲವೂ ಕಾನೂನು ಪಾಲನೆಯಷ್ಟೇ ಅಲ್ಲ, ಸಹಜ ನಾಗರಿಕ ಹೊಣೆಗಾರಿಕೆ ಮತ್ತು ಜವಾಬ್ಧಾರಿ.
ಸುಭಾಷಿತವೊಂದು ಹೇಳುತ್ತದೆ: “ಆತ್ಮನಃ ಶಿಷ್ಟಃ ಸ ಲೋಕಸ್ಯ ಶಿಷ್ಟಃ” ಸ್ವಯಂ ಶಿಸ್ತಿನಿಂದಿರುವವನೇ ಲೋಕಕ್ಕೂ ಶಿಷ್ಟನಾಗಬಲ್ಲನು.
ಸಣ್ಣ ನಡೆ, ದೊಡ್ಡ ಅರ್ಥಗಳನ್ನೂ ಕೊಡುತ್ತದೆ. ಟ್ರಾಫಿಕ್ ಸಿಗ್ನಲ್ ಬಳಿ ಪೊಲೀಸರಿಲ್ಲದಿದ್ದರೂ ನಿಲ್ಲುವ ವ್ಯಕ್ತಿ, ತನ್ನ ಮಕ್ಕಳಿಗೆ ಶಿಸ್ತಿನ ಪಾಠವನ್ನು ಮೌನವಾಗಿ ಕಲಿಸುತ್ತಿದ್ದಾನೆ. ಅದೇ ರೀತಿ, ನಿಯಮ ಉಲ್ಲಂಘಿಸಿ ಹೋಗುವವನು “ಚಾಣಾಕ್ಷನಲ್ಲ ”ಅಶಿಸ್ತಿನ ಮತ್ತು ಉದ್ದಟತನದ ಪ್ರತಿಕವಾಗುತ್ತಾನೆ..
ಬಸ್ ಅಥವಾ ರೈಲಿನಲ್ಲಿ ವೃದ್ಧರಿಗೆ, ಗರ್ಭಿಣಿಯರಿಗೆ ಆಸನ ನೀಡುವುದು ಕೇವಲ ದಯೆಯ ಕಾರ್ಯವಲ್ಲ; ಅದು ಮಾನವೀಯ ಸಂಸ್ಕೃತಿಯ ಸೂಚಕ. ಇಂತಹ ಸಣ್ಣ ನಡೆಗಳು ಸಮಾಜವನ್ನು ಮೌನವಾಗಿ ಶ್ರೇಷ್ಠಗೊಳಿಸುತ್ತವೆ.
ದೇವಾಲಯದಲ್ಲಿ ಸ್ವಚ್ಛತೆ, ಮೌನ, ಸಾಲಿನ ಶಿಸ್ತು ಇವು ಧರ್ಮದ ಭಾಗವೇ ಹೊರತು ಅಡ್ಡಿಯಲ್ಲ. ಧರ್ಮವಂತಿಕೆ ಶಬ್ದದಲ್ಲಿ ಅಲ್ಲ, ವರ್ತನೆಯಲ್ಲಿ ವ್ಯಕ್ತವಾಗಬೇಕು. ಇದು ಸಂಸ್ಕಾರವನ್ನು ತೋರಿಸುತ್ತದೆ.
ಬಸ್ ನಿಲ್ದಾಣದ ಗೋಡೆ ಮೇಲೆ ಬರೆಯದಿರುವುದು, ಪಾರ್ಕಿನಲ್ಲಿನ ಸಸ್ಯಗಳನ್ನು ಕಿತ್ತುಕೊಳ್ಳದಿರುವುದು, ಶೌಚಾಲಯವನ್ನು ಸ್ವಚ್ಛವಾಗಿ ಬಳಸುವುದು ಇವೆಲ್ಲವು “ಇದು ನಮ್ಮದೇ” ಎಂಬ ಭಾವನೆಯಿಂದ ಮಾತ್ರ ಸಾಧ್ಯ.
ನಾಗರಿಕ ಸಂಸ್ಕೃತಿ ಪ್ರತಿ ಮನೆಯಿಂದ ಮತ್ತು ಮನಸ್ಸಿನಿಂದ ಪ್ರಾರಂಭವಾಗಬೇಕು: ಮಕ್ಕಳು ಪುಸ್ತಕಗಳಿಂದ ಕಡಿಮೆ, ಪೋಷಕರ ನಡೆನುಡಿಯಿಂದ ಹೆಚ್ಚು ಕಲಿಯುತ್ತಾರೆ. ಮನೆಗಳಲ್ಲಿ ಸಾರ್ವಜನಿಕ ಶಿಸ್ತಿನ ಮೌಲ್ಯಗಳನ್ನು ಬದುಕಿನ ಭಾಗವಾಗಿಸಬೇಕು.
ಪಠ್ಯಕ್ರಮಕ್ಕಿಂತಲೂ ಪ್ರಾಯೋಗಿಕ ನಾಗರಿಕ ಪಾಠಗಳು – ಸ್ವಚ್ಛತಾ ಅಭಿಯಾನ, ಸಂಚಾರ ಶಿಸ್ತು ಅಭ್ಯಾಸ, ಸಮುದಾಯ ಸೇವೆ ಇವು ಮಕ್ಕಳಲ್ಲಿ ಜವಾಬ್ದಾರಿಯನ್ನು ಬೆಳೆಸುತ್ತವೆ.
ತಪ್ಪು ನಡೆಗಳನ್ನು ಕೇವಲ ಟೀಕಿಸುವುದಕ್ಕಿಂತ, ಉತ್ತಮ ನಾಗರಿಕ ನಡೆಗಳನ್ನು ಪ್ರೋತ್ಸಾಹಿಸುವ ಕಥನಗಳು ಸಮಾಜಕ್ಕೆ ದಿಕ್ಕು ತೋರಿಸುತ್ತವೆ. ಇಂಥವುಗಳು ಮಾಧ್ಯಮ ಮತ್ತು ಸಮಾಜದ ಹೊಣೆಯಾಗಬೇಕು.
ಕಾನೂನು ಶಿಸ್ತು ಕಡ್ಡಾಯಗೊಳಿಸಬಹುದು; ಆದರೆ ಸಂವೇದನೆ ಶಿಸ್ತನ್ನು ಶಾಶ್ವತಗೊಳಿಸುತ್ತದೆ. ಎರಡೂ ಸಮತೋಲನದಲ್ಲಿ ಇರಬೇಕು. ಶಿಸ್ತು ಇಲ್ಲದ ಸ್ವಾತಂತ್ರ್ಯ ಅರಾಜಕತೆಯನ್ನು ಸೃಷ್ಟಿಸುತ್ತದೆ.
ನಾವು ಸ್ವಾತಂತ್ರ್ಯವನ್ನು ಬಹುಶಃ “ನಾನು ಏನು ಬೇಕಾದರೂ ಮಾಡುವ ಹಕ್ಕು” ಎಂದು ಅರ್ಥೈಸಿಕೊಳ್ಳುತ್ತೇವೆ. ಆದರೆ ನಿಜವಾದ ಸ್ವಾತಂತ್ರ್ಯವೆಂದರೆ:“ನನ್ನ ಹಕ್ಕು ಮತ್ತೊಬ್ಬರ ಅಸೌಕರ್ಯವಾಗದಂತೆ ನಡೆದುಕೊಳ್ಳುವ ಜವಾಬ್ದಾರಿ.”
ಶಿಸ್ತು ಇಲ್ಲದ ಸಮಾಜದಲ್ಲಿ ಪ್ರತಿಭೆಗೂ, ಪ್ರಗತಿಗೂ, ಶಾಂತಿಗೂ ಸ್ಥಳವಿಲ್ಲ : ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಎಂಬುದು ಸರ್ಕಾರದ ಯೋಜನೆಯಷ್ಟೇ ಅಲ್ಲ; ಅದು ಪ್ರತಿ ನಾಗರಿಕನ ದೈನಂದಿನ ಸಾಧನೆ. ದೊಡ್ಡ ಭಾಷಣಗಳಿಂದಲ್ಲ, ಸಣ್ಣ ಸಣ್ಣ ಸರಿಯಾದ ನಡೆಗಳಿಂದ ನಾಗರಿಕ ಸಂಸ್ಕೃತಿ ನಿರ್ಮಾಣವಾಗುತ್ತದೆ.
ಇಂದೊಂದು ಕಾಗದವನ್ನು ಸರಿಯಾದ ಸ್ಥಳದಲ್ಲಿ ಹಾಕಿದ ಕ್ಷಣದಿಂದಲೇ, ನಾವು ಒಂದು ಉತ್ತಮ ಸಮಾಜದ ನಿರ್ಮಾಣದಲ್ಲಿ ಭಾಗಿಯಾಗುತ್ತೇವೆ.
ಸಮಾಜ ಬದಲಾಗಬೇಕೆಂದರೆ, ಮೊದಲಿಗೆ ನಾನು ಬದಲಾಗಬೇಕು ಇದು ನಾಗರಿಕ ಸಂಸ್ಕೃತಿಯ ಮೂಲಮಂತ್ರ.
ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…
ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…
ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…