ಅಡಿಕೆ ಹಾಗೂ ಅಡಿಕೆ ಬೆಳೆಗಾರರಿಗೆ ಸದ್ಯ ಇರುವ ಆತಂಕಗಳು ಹಲವು. ಅಡಿಕೆ ನಿಷೇಧ, ಅಡಿಕೆ ಕ್ಯಾನ್ಸರ್ ಕಾರಕ, ಅಧ್ಯಯನ ಇತ್ಯಾದಿಗಳು ಒಂದು ಕಡೆಯಾದರೆ ಅನೇಕ ವರ್ಷಗಳಿಂದ ಅಡಿಕೆ ಬೆಳೆಯುವ ಪ್ರದೇಶದಲ್ಲಿ ಎಲೆಚುಕ್ಕಿ ರೋಗ, ಹಳದಿ ಎಲೆರೋಗ ವ್ಯಾಪಕವಾಗಿ ಹರಡುತ್ತಿದೆ. ಇದೆರಡೂ ಆತಂಕ ಇಲ್ಲಿದೆ. ಯುವಕರು ಇಲ್ಲಿ ಕೃಷಿಗೆ ಬಂದರೆ ಭವಿಷ್ಯ ಏನು ಎನ್ನುವ ಪ್ರಶ್ನೆ ಹಲವರಲ್ಲಿದೆ. ಈ ನಿಟ್ಟಿನಲ್ಲಿ ಹಲವು ಯೋಜನೆಗಳು ಅಗತ್ಯ ಇದೆ, ಕಾರ್ಯಯೋಜನೆ ಬೇಕು. ಅದಕ್ಕಾಗಿ ಅದೇ ರೀತಿ ಯೋಚಿಸುವ ಮಂದಿಯ ಅಗತ್ಯ ಇದೆ. ಇಲ್ಲಿ ಹೋರಾಟಗಳು ಬೀದಿಯಲ್ಲಿ ಮಾಡಿದರೆ ಯಾವ ಉಪಯೋಗವೂ ಇಲ್ಲ. ಪರ್ಯಾಯದ ಬಗ್ಗೆ ಯೋಚಿಸುವುದು ಹೌದು, ಆದರೆ ತಕ್ಷಣಕ್ಕೆ ಅದೂ ಸಾಧ್ಯವಿಲ್ಲ. ಅಡಿಕೆ ಬೆಳೆ ಉಳಿಸಿಕೊಳ್ಳಬೇಕು. ಅಲ್ಲೂ ರಾಜಕೀಯವೇ ಆದರೆ ಭವಿಷ್ಯ ಅಸ್ಥಿರ ಅಷ್ಟೇ. ಕೃಷಿಗೆ ಯುವಕರು ಬರಬೇಕು ಎನ್ನುವುದು ಬಾಯಿ ಮಾತಷ್ಟೇ ಆದೀತು.
ಈಚೆಗೆ ಅಡಿಕೆ ಬೆಳೆಯ ಬಗ್ಗೆ ಒಂದಷ್ಟು ಮಾಹಿತಿ ಕಲೆ ಹಾಕುತ್ತಿದ್ದಾಗ, ಈಶಾನ್ಯ ರಾಜ್ಯಗಳಲ್ಲಿ ವ್ಯವಸ್ಥಿತವಾದ, ವೈಜ್ಞಾನಿಕವಾಗಿ ಅಡಿಕೆ ಕೃಷಿ ವಿಸ್ತರಣೆ ಆಗುತ್ತಿದೆ. ಇದುವರಗೆ ಅಂತಹದೊಂದು ವ್ಯವಸ್ಥಿತ ಅಡಿಕೆ ಬೆಳೆ ಅಲ್ಲಿ ನಡೆಯುತ್ತಿರಲಿಲ್ಲ. ಅಡಿಕೆ ಕೃಷಿಗೆ ಸರ್ಕಾರವೇ ನೆರವು ನೀಡುತ್ತಿದೆ. ಇಷ್ಟೇ ಅಲ್ಲ. ಈಗ ಅಡಿಕೆ ಮಾರುಕಟ್ಟೆ ಇನ್ನೂ ಏರಿಕೆ…. ಇನ್ನೂ ಏರಿಕೆ… ಮಾರುಕಟ್ಟೆಯಲ್ಲಿ ಅಡಿಕೆಯೇ ಇಲ್ಲ ಎಂದೆಲ್ಲಾ ವ್ಯಾಟ್ಸಪ್ ಮಾಹಿತಿಯನ್ನೂ ನಾವು ನಂಬುತ್ತೇವೆ ಕೂಡಾ. ಇಂದಿಗೂ ಎಲ್ಲಾ ಸಂಸ್ಥೆಗಳಿಗೂ 500 ರೂಪಾಯಿ ದಾಟಿದ ಬಳಿಕ ಅಡಿಕೆ ಮಾರುಕಟ್ಟೆ ಉಳಸಿಕೊಳ್ಳಲು ಕಷ್ಟವಾಗುತ್ತಿದೆ. ಈಗ 520 ರೂಪಾಯಿ ಇರುವ ಅಡಿಕೆ ಮಾರಾಟಕ್ಕೆ ಸುಲಭ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಏನೇನು ಸರ್ಕಸ್ ಮಾಡಬೇಕಾಗುತ್ತಿದೆ. 500 ರೂಪಾಯಿ ದಾಟಿದ ತಕ್ಷಣವೇ ಸದ್ಯ ಹೊರಭಾಗದಿಂದ ಅಡಿಕೆ ಕಳ್ಳದಾರಿಯಲ್ಲಿ ಬರುತ್ತಿದೆ. ತಡೆಯಲೂ ಕಷ್ಟ. ಇನ್ನೊಂದು ಕಡೆ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಸದ್ಯ ಅಲ್ಲೆಲ್ಲೂ ಕ್ಯಾಂಪ್ಕೊದಂತಹ ಅಥವಾ ಇತರ ಸಹಕಾರಿ ವ್ಯವಸ್ಥೆಗಳು ಇಲ್ಲ. ಯಾರೋ ಕೆಲವರು ಮದ್ಯವರ್ತಿಗಳು ಲಾಟ್ ಗಳ ಮೂಲಕ ಮಾರಾಟ ಮಾಡುತ್ತಾರೆ. ಮುಂದೆ ಅಡಿಕೆ ಬೆಳೆ ವ್ಯಾಪಕವಾದಾಗ ಅಲ್ಲೂ ವ್ಯವಸ್ಥಿತ ಮಾರುಕಟ್ಟೆ ವ್ಯವಸ್ಥೆ ಬರುತ್ತದೆ. ಆಗ ಅಡಿಕೆ ಧಾರಣೆ ಇದೇ ಪರಿಸ್ಥಿತಿ ಉಳಿಯಲು ಸಾಧ್ಯವೇ ಇಲ್ಲ. ಆಗೇನು, ಮಾಡಬಹುದು ಎನ್ನುವ ಚಿಂತನೆಯೂ ಅಗತ್ಯ ಇದೆ. ಹಾಗೆಂದು ಯಾವ ಕೃಷಿಯತ್ತ ಮಲೆನಾಡು ಅಥವಾ ನಮ್ಮಂತಹ ಭಾಗದಲ್ಲಿ ಯಾವ ಕೃಷಿಯನ್ನು ಮಾಡಬಹುದು..? ಈ ಬಗ್ಗೆಯೂ ಸರಿಯಾದ ಅಧ್ಯಯನ ಬೇಕಾಗಿದೆ. ಈಗಾಗಲೇ ವೆನಿಲ್ಲಾ, ಸ್ಟೀವಿಯಾ, ಅಗರ್ , ಡ್ರಾಗನ್.. ಹೀಗೇ ಹಲವಾರು ಕೃಷಿಯ ಮೂಲಕ ಕೈಸುಟ್ಟುಕೊಂಡವರು ಹಲವಾರು ಕೃಷಿಕರು.
ಹಾಗಂತ ನಮ್ಮಲ್ಲೂ ಗಮನಿಸಿ, ಅನೇಕ ವರ್ಷಗಳಿಂದ ಅಡಿಕೆ ಬೆಳೆ ನಮ್ಮಲ್ಲಿದೆ. ಇನ್ನೂ ಕೂಡಾ ಗೊಬ್ಬರ ಎಷ್ಟು ಕೊಡಬೇಕು, ಕೊಳೆರೋಗಕ್ಕೆ ಔಷಧಿ ಯಾವುದು, ಅಡಿಕೆ ಎಲ್ಲಿ ಮಾರಾಟ ಮಾಡಿದರೆ ಒಳ್ಳೆಯದು, ಅಡಿಕೆಗೆ ಯಾವುದೆಲ್ಲಾ ರೋಗ ಬರುತ್ತದೆ, ಮಣ್ಣು ಪರೀಕ್ಷೆ ಬೇಕಾ?, ಎಲೆಚುಕ್ಕಿಗೆ ಔಷಧಿ ಸಿಂಪಡಣೆ ಬೇಕಾ? ಯಾವುದು?… ಎನ್ನುವ ಪ್ರಶ್ನೆಗಳಿಂದಲೇ ಅಡಿಕೆ ಬೆಳೆಗಾರರು ಈಗಲೂ ಕೃಷಿಯನ್ನು ಆರಂಭಿಸುತ್ತಾರೆ. ಈಗಲೂ ಕೂಡಾ ಇದಿಷ್ಟೇ ವಿಷಯದ ಬಗ್ಗೆ ನಡೆಯುವ ಚರ್ಚೆಯೇ ನಿಲ್ಲುವುದಿಲ್ಲ. ಕಿಲೋ ಮೀಟರ್ ಅಂತರದಲ್ಲಿ ಮಣ್ಣಿನ ಸ್ಥಿತಿ ಬದಲಾಗುತ್ತದೆ. ವಾತಾವರಣ ಬದಲಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ವಿಪರೀತ ತಾಪಮಾನ ಅಡಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಎಳೆ ಅಡಿಕೆ ಬೀಳುತ್ತಿದೆ. ಬೇಸಗೆಯ ಮಳೆ ಹಾಗೂ ಬಿಸಿಲು ಕೀಟಗಳ ವೃದ್ಧಿಗೆ ಕಾರಣವಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ತಾಪಮಾನ 40 ಡಿಗ್ರಿಗಿಂತ ಅಧಿಕವಾಗುತ್ತಿದೆ. ಅಡಿಕೆ ಬೆಳೆಗೆ ತಾಪಮಾನವು 36 ಡಿಗ್ರಿಗಿಂತ ಅಧಿಕವಾದರೆ ಎಳೆ ಅಡಿಕೆಯ ಮೇಲೆ ಪರಿಣಾಮ ಬೀರುತ್ತದೆ. 4200 ಮಿಮೀ ವಾರ್ಷಿಕ ಮಳೆಯಿಂದ ಅಧಿಕವಾದರೆ ಮಣ್ಣಿನ ರಸಸಾರದ ಕಾರಣದಿಂದಲೂ ಪರಿಣಾಮವಾಗುತ್ತದೆ.ಹ್ಯುಮಿಡಿಟಿ ಕಡಿಮೆಯಾದರೆ ಕೂಡಾ ಅಡಿಕೆ ಕಾಯಿ ಉಳಿಯುವುದು ಕಷ್ಟವಿದೆ. ವಿಪರೀತ ಮಳೆಯು ಅಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಕೂಡಾ. ಕೃಷಿ, ಗ್ರಾಮೀಣ, ಪರಿಸರ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ…
ಕಾಳುಮೆಣಸು ಸದ್ಯದ ಟ್ರೆಂಡ್. ಕಾಳುಮೆಣಸು ಟ್ರೆಂಡ್ ಆರಂಭವಾದ ಕೂಡಲೇ ನೂರಾರು ಮಂದಿ ಕಾಳುಮೆಣಸು ಕೃಷಿಯತ್ತ ವಾಲಿದರು. ಅಲ್ಲೂ ಒಮ್ಮೆಲೇ 500-1000 ಗಿಡಗಳನ್ನು ಒಮ್ಮೆಲೇ ನೆಡಲು ಹೋಗಿ ಕೈಸುಟ್ಟುಕೊಂಡವರು ಅನೇಕರು. ಒಮ್ಮೆಲೇ ಯಾವ ಕೃಷಿಯೂ ಬೆಳೆಯುವುದಿಲ್ಲ. ಹಂತ ಹಂತವಾಗಿ ವಿಸ್ತರಣೆಯೇ ಉತ್ತಮ ಫಲಿತಾಂಶ. 1000 ಕಾಳುಮೆಣಸು ಗಿಡ ನೆಟ್ಟು 600 ಗಿಡ ಉಳಿಯಿತು ಎಂದು ಈಚೆಗಷ್ಟೇ ಒಬ್ಬರು ಕೃಷಿಕರು ಹೇಳಿಕೊಂಡಾಗ, ಕೃಷಿಕ ಸೋಲಲೇ ಇರುವುದೇನೋ ಅಂತ ಅನಿಸಿತ್ತು. ಈಗ ಅಡಿಕೆ ಮಾರುಕಟ್ಟೆಯಲ್ಲೂ ಕೃಷಿಕನಿಗೆ ಸೋಲು, ಟ್ರೆಂಡಿಂಗ್ ಕೃಷಿಯಲ್ಲೂ ಕೃಷಿಕನಿಗೆ ಸೋಲು. ಈಗ ಕಾಫಿ ಬೆಳೆ ಟ್ರೆಂಡ್ ಇದೆ. ಕಾಫಿ ಬೆಳೆ ದಕ್ಷಿಣ ಕನ್ನಡ ಜಿಲ್ಲೆಗೂ, ಮಲೆನಾಡಿಗೂ ಸೂಕ್ತವಾಗಿದೆ. ಗುಣಮಟ್ಟದ ಕಾಫಿ ಬೆಳೆಯಲು 15 ರಿಂದ 28 ಡಿಗ್ರಿ ತಾಪಮಾನ ಹಾಗೂ 100-200 ಸೆಂ ಮೀ ಮಳೆಯಾಗಬೇಕು. ಸುಮಾರು 70%-80% ಹ್ಯುಮಿಡಿಟಿ ಕೂಡಾ ಅಗತ್ಯ ಇದೆ.
30 ಡಿಗ್ರಿ ತಾಪಮಾನದಿಂದ ಅಧಿಕವಾದರೆ ಕಾಫಿಯಲ್ಲೂ ಗುಣಮಟ್ಟದ ಬಗ್ಗೆ ಅನುಮಾನ ಇದೆ. ಒಂದು ವೇಳೆ ಗುಣಮಟ್ಟದ ಕೊರತೆಯಾದರೆ ಧಾರಣೆ ಕೂಡಾ ಕಡಿಮೆ ಇರುತ್ತದೆ.ಇದಕ್ಕಾಗಿ ಪ್ರತ್ಯೇಕವಾದ ಮಾರುಕಟ್ಟೆ ವ್ಯವಸ್ಥೆ ನಮ್ಮ ಕೃಷಿಕರಿಗಾಗಿ ಬೇಕಾಗುತ್ತದೆ. ಇದೆಲ್ಲಾ ಮುಂದೆ ನಡೆಯಲೇಬೇಕಾದ ಅಂಶಗಳು. ಕೃಷಿ ಹಾಗೂ ಗ್ರಾಮೀಣ ಅಂಶಗಳು ಇನ್ನಷ್ಟು ಗಟ್ಟಿಯಾಗಬೇಕಾದರೆ ಈಗಲೇ ಹೆಜ್ಜೆಗಳೂ ಗಟ್ಟಿಯಾಗಬೇಕು.
ಈ ಎಲ್ಲಾ ಬೆಳವಣಿಗೆ ಗಮನಿಸುವಾಗ ಅಡಿಕೆ ಬೆಳೆಯ ಬಗ್ಗೆ ಅಡಿಕೆ ಮಾರುಕಟ್ಟೆ ಬಗ್ಗೆ ಸರಿಯಾದ ನಿರ್ಧಾರಗಳು ಅಗತ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಗೆ ಬಂದಿರುವ ಯುವಕೃಷಿಕರಿಗೆ ಭದ್ರತೆ ಅಗತ್ಯ ಇದೆ. ಸ್ವತ: ನಾವೂ ಕೂಡಾ ಯೋಚನೆ ಮಾಡಬೇಕಾದ್ದು ಉಪಬೆಳೆ, ಪರ್ಯಾಯ ಕೃಷಿಯ ಬೆಳೆಸುವ ಯೋಜನೆಗಳತ್ತ. ಈ ನಡುವೆ ಹೋರಾಟ, ಗುದ್ದಾಟಗಳು ಅನಿವಾರ್ಯ ಆಗಲೂ ಬಹುದು. ಇದೆಲ್ಲದಕ್ಕೂ ಸಿದ್ಧವಾಗಿಯೇ ನಮ್ಮ ಅಡಿಪಾಯ ಭದ್ರ ಪಡಿಸಿಕೊಳ್ಳಿ. ಒಂದಷ್ಟು ಭದ್ರತೆ ಕೂಡಾ ಅಗತ್ಯ. ಸಮಾಜ ಸೇವೆ, ಸಹಕಾರಿ ಎಲ್ಲವೂ ಸರಿದೂಗಿಸಿಕೊಂಡು ಹೋಗಲೇಬೇಕಾಗಿದೆ. ವಿಶೇಷವಾಗಿ ಯುವ ಅಡಿಕೆ ಬೆಳೆಗಾರರು, ಯುವ ಕೃಷಿಕರು ಗಮನಿಸಬೇಕು. ಕೃಷಿ, ಗ್ರಾಮೀಣ, ಪರಿಸರ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ…
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




